ಚಿತ್ರದುರ್ಗ ನಗರದ ರೋಟರಿ ವಿದ್ಯಾಲಯದಲ್ಲಿ ನಡೆದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಉದ್ಘಾಟಿಸಿ ತಾಪಂ ಇಒ ವೈ.ರವಿಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ವೇದಿಕೆ ನೀಡುವುದು ಬಾಲ ಭವನದ ಉದ್ದೇಶವಾಗಿದೆ. ಓದಿನ ಜೊತೆಗೆ ಮಕ್ಕಳಲ್ಲಿರುವ ಆಟೋಟ ಹಾಗೂ ವಿವಿಧ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಣಾಧಿಕಾರಿ ಹಾಗೂ ತಾಲೂಕು ಬಾಲ ಭವನ ಸಮಿತಿ ಅಧ್ಯಕ್ಷ ವೈ.ರವಿಕುಮಾರ್ ಹೇಳಿದರು.

ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಬಾಲ ಭವನ ಸಮಿತಿ ಸಹಯೋಗದಲ್ಲಿ ಶನಿವಾರ ನಗರದ ರೋಟರಿ ವಿದ್ಯಾಲಯದಲ್ಲಿ ನಡೆದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.

ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದಕ್ಕಿಂತ ಭಾಗವಹಿಸುವುದು ಬಹಳ ಮುಖ್ಯ. ಮಕ್ಕಳಿಗೆ ಚಿತ್ರಕಲೆ,ಗಾಯನ, ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನವನ್ನು ನೀಡಲಾಗುತ್ತಿದೆ. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದರೆ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದರು.

ಬಾಲ ಭವನ ಕಾರ್ಯದರ್ಶಿ ಹಾಗೂ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ವೀಣಾ ಮಾತನಾಡಿ, ರಾಜ್ಯಾದ್ಯಂತ ಇಂದು ಕಲಾ ಪ್ರತಿಭೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಸಹಕಾರಿಯಾಗಿದೆ. ಶಾಲೆಯ ಪಾಠದ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸಿದ್ದರಾಜು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ರಾಜ್ಯಬಾಲ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಸಲಾಗುತ್ತಿರುವುದು ಉತ್ತಮವಾದ ಕೆಲಸವಾಗಿದೆ. ಚಿತ್ರದುರ್ಗ ಶೌರ್ಯ ಪರಾಕ್ರಮಕ್ಕೆ ಹೆಸರಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳು ಭಾಗವಹಿಸಿದರೆ ಒತ್ತಡದಿಂದ ಹೊರ ಬರಬಹುದು ಎಂದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕ ಡಿ.ಕುಮಾರ್ ಮಾತನಾಡಿ, ಆರು ತಾಲೂಕುಗಳಲ್ಲಿ ಎಂಟು ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬಹುಮಾನವನ್ನು ನೀಡಲಾಗುತ್ತಿದೆ. ಇದಕ್ಕೆ ರಾಜ್ಯಬಾಲ ಭವನ ಸೊಸೈಟಿಯ ಅಧ್ಯಕ್ಷ ಬಿ.ಆರ್.ನಾಯ್ಡು, ಸಿಇಒ ಡಾ.ಆಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ ಕುಮಾರ್.ಕೆ.ಎಚ್ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ ಎಂದರು.

ಕಲಾಪ್ರತಿಭೆ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮೇಲ್ವಿಚಾರಕಿ ಪಾವನ, ಸಿರಿ ಸಂಪಿಗೆ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕೆ.ಪವಿತ್ರ,ಮುಖ್ಯ ಶಿಕ್ಷಕಿ ಉಮಾದೇವಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.