ಪ್ರತಿವರ್ಷದಂತೆ ಈ ವರ್ಷವೂ ಕೂಡ ಇಲ್ಲಿನ ಪಿ.ಜೆ.ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರ 354ನೇ ಹಾಗೂ ಶ್ರೀಮಠದ 75ನೇ ವಜ್ರಮಹೋತ್ಸವ ಆರಾಧನೆಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ವಿಜೃಂಭಣೆಯಾಗಿ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿವರ್ಷದಂತೆ ಈ ವರ್ಷವೂ ಕೂಡ ಇಲ್ಲಿನ ಪಿ.ಜೆ.ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರ 354ನೇ ಹಾಗೂ ಶ್ರೀಮಠದ 75ನೇ ವಜ್ರಮಹೋತ್ಸವ ಆರಾಧನೆಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ವಿಜೃಂಭಣೆಯಾಗಿ ನೆರವೇರಿಸಲಾಯಿತು.

ಮುಂಜಾನೆ ಸುಪ್ರಭಾತ, ನೈರ್ಮಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಕೈಂಕರ್ಯ, ಅಷ್ಟೋತ್ತರ ಸೇವೆ ಕೈಗೊಳ್ಳಲಾಯಿತು.

ನಂತರ 10.30 ಗಂಟೆಗೆ ಸರಿಯಾಗಿ ರಥದಲ್ಲಿ ಗುರುರಾಯರ ಗ್ರಂಥಗಳನ್ನು ಇರಿಸಿ ಪೂಜೆ, ಮಂಗಳಾರತಿಯೊಂದಿಗೆ ವೇದವಾದ್ಯಗಳ ಘೋಷ ಹಾಗೂ ಭಾರತೀ ಭಜನಾ ಮಂಡಳಿ ಮಹಿಳಾ ತಂಡದವರಿಂದ ಭಜನೆ ಮತ್ತು ದಾಸರ ಕೀರ್ತನೆಗಳೊಂದಿಗೆ ಮಠದಿಂದ ರಥೋತ್ಸವವು ಈಶ್ವರಮ್ಮ ಶಾಲೆ, ವನಿತಾ ಸಮಾಜ, ಹಾಗೂ ಶ್ರೀರಾಮ ಮಂದಿರದ ಮಾರ್ಗವಾಗಿ ಸಂಚರಿಸುವ ಮೂಲಕ ಮೂಲಕ ಸಾವಿರಾರು ರಾಯರ ಭಕ್ತರ ಸಮ್ಮುಖ ನೆರವೇರಿತು.

ಸದರಿ ರಥೋತ್ಸವಕ್ಕೆ ಶ್ರೀಮಠದ ವ್ಯವಸ್ಥಾಪಕ ಸುತೀರ್ಥಕಟ್ಟಿ, ಡಾ.ವೆಂಕಟರಮಣ ಕಟ್ಟಿ, ರಾಂಗೋಪಾಲ್ ಕಟ್ಟಿ, ಪಂಡಿತ ಗೋಪಾಲಚಾರ್ ಮಣ್ಣೂರ್, ವೆಂಕಟೇಶಚಾರ್ ಮಣ್ಣೂರ್, ಜಯತೀರ್ಥಾಚಾರ್ ವಡೇರ್, ಕೃಷ್ಣಾಚಾರ್ಯ ಮಣ್ಣೂರ್ ಚಾಲನೆ ನೀಡಿದರು.

ತರುವಾಯ ಮಧ್ಯಾಹ್ನ 12 ಗಂಟೆಯಿಂದ ಪಂಡಿತ ಶ್ರೀ ಪುರಂದರಚಾರ್ಯ ಹಯಗ್ರೀವ ಅವರಿಂದ ಪ್ರವಚನ, ರಾಯರಿಗೆ ಹಸ್ತೋದಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಸಾವಿರಾರು ಭಕ್ತ ಸಮುದಾಯಕ್ಕೆ ತೀರ್ಥ, ಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸಂಜೆ 7.30ಕ್ಕೆ ಅಷ್ಟಾವದಾನ ಸೇವೆಯೊಂದಿಗೆ ರಾಯರ ಮಧ್ಯಾರಾಧನೆ ಸಂಪನ್ನಗೊಂಡಿತು.