ಹಳಿ ತಪ್ಪಿದ ರಾಜ್ಯದ ಆರ್ಥಿಕ ನೀತಿ

| Published : Apr 04 2024, 01:05 AM IST

ಸಾರಾಂಶ

ಮೋದಿ ಪ್ರಧಾನಿಯಾದ ಬಳಿಕ ಭಯೋತ್ಪಾದನೆ ಅಟ್ಟಹಾಸ ಮಟ್ಟ ಹಾಕಲಾಗಿದೆ. ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಾಗಲಕೋಟ ಲೋಕಸಭಾ ಕ್ಷೇತ್ರದ ಎಲ್ಲ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರದ ಯೋಜನೆಗಳು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸಿದ ಸಂತೃಪ್ತಿ ನನಗಿದೆ ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು.

ರಾಮಪುರ ಶ್ರೀದಾನೇಶ್ವರಿ ಸಮುದಾಯ ಭವನದಲ್ಲಿ ತೇರದಾಳ ಕ್ಷೇತ್ರವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ - ಕುಡಚಿ ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣವಾಗಿದೆ. ಯಾವುದೇ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಅಸಹಾಯಕರಾಗಿರುವ ಸಿದ್ದರಾಮಯ್ಯ ಅನವಶ್ಯಕವಾಗಿ ಕೇಂದ್ರದತ್ತ ಬೊಟ್ಟು ಮಾಡುವುದು ಅವರ ಆರ್ಥಿಕ ನೀತಿ ಹಳಿ ತಪ್ಪಿದ ಪ್ರತೀಕವಾಗಿದೆ ಎಂದು ಟೀಕಿಸಿದರು.

ಕ್ಷೇತ್ರಕ್ಕೆ ಗದ್ದಿಗೌಡರ ಏನು ಮಾಡಿದ್ದಾರೆ ಎಂದು ಕೇಳುವ ಕುಹಕಿಗಳಿಗೆ ಇಂದು ನಾನು ಉತ್ತರ ನೀಡುತ್ತಿದ್ದೇನೆ. ೨೦೦೪ ರಿಂದ ೨೦೧೩ರ ವರೆಗೆ ವಿಪಕ್ಷ ಸಂಸದನಾಗಿ ಮತ್ತು ೨೦೧೪ ರಿಂದ ಇಲ್ಲಿಯವರೆಗೆ ಒಟ್ಟು ೧೦ ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಮತ್ತು ಎನ್‌ಎಚ್‌ಎಐ ಹೆದ್ದಾರಿಗಳಿಗಾಗಿ ₹೪೮೯೪೦ ಕೋಟಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹೧೭೧೮೭. ೧೧ ಕೋಟಿ, ರೈಲು ಯೋಜನೆಗಳಿಗೆ ₹೩೮೬೧.೬೭ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ₹೨೪೮೨೧.೦೮ ಕೋಟಿ, ಜೆಜೆಎಂ, ಘರ-ಘರ್ ಜಲ್ ಯೋಜನೆಗೆ ₹೨೩೭೭.೪೪ ಕೋಟಿ, ನೇಕಾರ ಕಲ್ಯಾಣ ಯೋಜನೆಗೆ ₹೫೪೯.೩೮ ಕೋಟಿ, ಕೈಮಗ್ಗ ನೇಕಾರರ ಮಕ್ಕಳ ಶಿಷ್ಯವೇತನ ₹೨ಲಕ್ಷ, ನೇಕಾರರ ಮಾಸಿಕ ಆರ್ಥಿಕ ಧನಸಹಾಯ ಯೋಜನೆ, ಕಾರ್ಮಿಕ ಕಲ್ಯಾಣಕ್ಕಾಗಿ ₹೮೭೬೧.೫೩ ಕೋಟಿ, ಕೋಲ್ ಇಂಡಿಯಾದ ಸಿಎಸ್‌ಆರ್ ಅನುದಾನ ₹೧೦ಕೋಟಿ, ಕೇಂದ್ರೀಯ ವಿದ್ಯಾಲಯ ₹೮೫೪.೬೪ ಲಕ್ಷ, ಡಿಜಿಟಲ್ ಇಂಡಿಯಾ, ಪಿಎಂ ಆವಾಸ್ ಯೋಜನೆಯಡಿ ನಗರ ಪ್ರದೇಶದಲ್ಲಿ ₹೧೧೭೯೦ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ₹೯೫೨೩ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.

ಮೋದಿ ಪ್ರಧಾನಿಯಾದ ಬಳಿಕ ಭಯೋತ್ಪಾದನೆ ಅಟ್ಟಹಾಸ ಮಟ್ಟ ಹಾಕಲಾಗಿದೆ. ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಅನುಭವ, ದೂರದೃಷ್ಟಿ ನಾಯಕತ್ವದ ಕಾರಣ ಮೋದಿ ವಿಶ್ವದ ಅಗ್ರಗಣ್ಯ ನಾಯಕನಾಗಿ ದೇಶದ ಸಾರ್ವಭೌಮತೆ ಎತ್ತಿ ಹಿಡಿದಿದ್ದು, ಬಲಿಷ್ಠ, ಸ್ವಾಭಿಮಾನಿ ಭಾರತ ರೂಪುಗೊಳ್ಳಲು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ನುಡಿದರು.

ವಿಕಸಿತ ಭಾರತ ಸಂಕಲ್ಪ ಮೋದಿಯವರ ಆದ್ಯತೆಯಾಗಿದೆ. ಸದೃಢ ಮತ್ತು ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿರುವ ಬಿಜೆಪಿ ಸರ್ಕಾರ ಈ ಬಾರಿಯೂ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ. ಆದರೂ ಸಂಸದರಿಗೆ ದಾಖಲೆ ಅಂತರದ ಗೆಲುವು ನೀಡಬೇಕು. ಈ ಮೂಲಕ ಕೇಂದ್ರದಲ್ಲಿ ಸುಭದ್ರ ಸರ್ಕಾರ ರಚನೆಗೆ ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಸಾಧನೆ ಮತ್ತು ವಿಶ್ವಗುರುವಾಗುವತ್ತ ಪ್ರಧಾನಿ ಮೋದಿ ಭಾರತವನ್ನು ಸಜ್ಜುಗೊಳಿಸುತ್ತಿರುವ ಪರಿಯನ್ನು ಮತದಾರರಿಗೆ ವಿವರಿಸಬೇಕು ಎಂದು ಕರೆ ನೀಡಿದರು.

ವೀಕ್ಷಕ ಜಗದೀಶ ಹಿರೇಮನಿ ಮಾತನಾಡಿ, ಕನಕಪುರ ಬಂಡೆಯನ್ನು ಛಿದ್ರಗೊಳಿಸುವತ್ತ ಗೃಹ ಸಚಿವ ಅಮಿತ್ ಶಾ ರೋಡ್‌ಶೋಗೆ ದೊರೆತ ಜನಮನ್ನಣೆ ಕಾಂಗ್ರೆಸ್ಸಿಗರಲ್ಲಿ ನಡುಕ ಮೂಡಿಸಿದೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುತ್ತಿದ್ದ ₹೬೦೦೦ ಮೊತ್ತಕ್ಕೆ ರಾಜ್ಯದ ಬಿಎಸ್‌ವೈ ಸರ್ಕಾರ ₹೪೦೦೦ ಸೇರಿಸಿ ಒಟ್ಟು ರು.೧೦೦೦೦ ನೀಡುತ್ತಿತ್ತು. ಇದನ್ನು ನಿಲ್ಲಿಸಿದ ಖ್ಯಾತಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಟೀಕಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿದ್ದು ಸವದಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ನಾಯಕರು ಹಣಬಲ, ಅಧಿಕಾರ ಬಲದಿಂದ ಗೆಲವಿನ ಹಗಲುಗನಸು ಕಾಣುತ್ತಿದ್ದಾರೆ. ತೇರದಾಳ ಕ್ಷೇತ್ರದಲ್ಲಿ ಕಳೆದ ಬಾರಿ ೩೬ ಸಾವಿರ ಲೀಡ್ ನೀಡಿದ್ದ ಮತದಾರರು ಈ ಬಾರಿ ೬೦ಸಾವಿರ ಲೀಡ್ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕು. ಈ ಮೂಲಕ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸೂತ್ರವನ್ನು ಮಾನ್ಯ ಮಾಡಬೇಕು. ೨೦೪೭ರೊಳಗೆ ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿಸಲು ನೆರವಾಗಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಜಿ.ಎಸ್.ನ್ಯಾಮಗೌಡ, ಸಿದ್ದನಗೌಡ ಪಾಟೀಲ, ಡಿ.ಆರ್‌.ಪಾಟೀಲ, ಡಾ.ಪುಷ್ಪದಂತ ದಾನಿಗೊಂಡ, ಅಲ್ಲಪ್ಪ ತಂಬಾಕು, ಶಿವಪ್ಪ ಬಾಗಲಕೋಟ, ಮನೋಹರ ಶಿರೋಳ, ಶ್ರೀಶೈಲ ಬೀಳಗಿ, ಸುರೇಶ ಅಕ್ಕಿವಾಟ, ಸವಿತಾ ಹೊಸೂರ, ಪವಿತ್ರಾ ತುಕ್ಕಣ್ಣವರ, ಆನಂದ ಕಂಪು, ಸುರೇಶ ಚಿಂಡಕ, ಪರಪ್ಪ ಬಿಳ್ಳುರ, ಬಸವಪ್ರಭು ಹಟ್ಟಿ ಮುಂತಾದವರಿದ್ದರು. ಇ.ಎಸ್.ಗೊಂಬಿ ಸ್ವಾಗತಿಸಿದರು. ಶಂಕರ ಹುನ್ನೂರ ನಿರೂಪಿಸಿದರು. ಶ್ರೀಶೈಲ ಬೀಳಗಿ ವಂದಿಸಿದರು.

ಕೋಟ್..

ವಿಕಸಿತ ಭಾರತ ಸಂಕಲ್ಪ ಮೋದಿಯವರ ಆದ್ಯತೆಯಾಗಿದೆ. ಸದೃಢ ಮತ್ತು ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿರುವ ಬಿಜೆಪಿ ಸರ್ಕಾರ ಈ ಬಾರಿಯೂ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ. ಆದರೂ ಸಂಸದರಿಗೆ ದಾಖಲೆ ಅಂತರದ ಗೆಲುವು ನೀಡಬೇಕು. ಈ ಮೂಲಕ ಕೇಂದ್ರದಲ್ಲಿ ಸುಭದ್ರ ಸರ್ಕಾರ ರಚನೆಗೆ ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಸಾಧನೆ ಮತ್ತು ವಿಶ್ವಗುರುವಾಗುವತ್ತ ಪ್ರಧಾನಿ ಮೋದಿ ಭಾರತವನ್ನು ಸಜ್ಜುಗೊಳಿಸುತ್ತಿರುವ ಪರಿಯನ್ನು ಮತದಾರರಿಗೆ ವಿವರಿಸಬೇಕು.

ಪಿ.ಸಿ.ಗದ್ದಿಗೌಡರ ಸಂಸದ, ಬಿಜೆಪಿ ಅಭ್ಯರ್ಥಿ