ಸಾರಾಂಶ
- ಪ್ರಿಯಾಂಕ ಖರ್ಗೆ, ಲಾಡ್, ಕೃಷ್ಣ ಭೈರೇಗೌಡ, ಮಂಜುನಾಥ ದ್ವಂದ್ವ ಹೇಳಿಕೆಗಳಿಗೆ ಕಿಡಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಆಪರೇಷನ್ ಸಿಂದೂರ ಬಗ್ಗೆ ಕಾಂಗ್ರೆಸ್ಸಿನ ನಾಯಕರಲ್ಲೇ ದ್ವಂದ್ವ ಕಾಣಿಸುತ್ತಿದೆ. ಸಚಿವರಾದ ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಕೃಷ್ಣ ಬೈರೇಗೌಡ, ಕೋಲಾರದ ಶಾಸಕ ಮಂಜುನಾಥ ಅವರ ಹೇಳಿಕೆಗಳನ್ನು ಗಮನಿಸಿದರೆ, ಆಪರೇಷನ್ ಸಿಂದೂರ ಬಗ್ಗೆ ಅಪಪ್ರಚಾರದ ಟಾಸ್ಕನ್ನೇ ಕಾಂಗ್ರೆಸ್ ಪಕ್ಷ ಕೊಟ್ಟಂತಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕೆಲ ನಾಯಕರು, ಸಚಿವರು ಆಪರೇಷನ್ ಸಿಂದೂರ ಕುರಿತಂತೆ ಅಪಸ್ವರ ಎತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಭಯೋತ್ಪಾದನೆ ಬೇರು ಸಮೇತ ಕಿತ್ತು ಹಾಕಬೇಕು, ಯುದ್ಧವನ್ನು ಯಾಕೆ ನಿಲ್ಲಿಸಿದಿರೆಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ನಾಲ್ಕು ವಿಮಾನ ಹಾರಿ ಹೋಗಿವೆ. ಅದು ಹೀಗೆ, ಹಾಗೆ ಅಂತಾ ಹೇಳಿದರೆ ಸಾಕೆ ಎಂಬುದಾಗಿ ಪ್ರಶ್ನಿಸಿದ್ದಾರೆ ಎಂದು ಕಿಡಿಕಾರಿದರು.
ಒಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಭಾರತ ಸರ್ಕಾರದೊಂದಿಗೆ ನಾವಿದ್ದೇವೆ, ಇವೆಲ್ಲಾ ಸಂದರ್ಭೋಚಿತ ಕ್ರಮಗಳೆಂದು ಸ್ವಾಗತಿಸುತ್ತಾರೆ. ಮತ್ತೊಂದು ಕಡೆ ಇಡೀ ದೇಶವೇ ಯುದ್ಧ ಬೇಕು ಎನ್ನುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಬೇಡವೆಂಬ ಸಂದೇಶ ಕೊಟ್ಟು, ಸಾರ್ವಜನಿಕರ ಟೀಕೆಗೆ ಒಳಗಾಗುತ್ತಾರೆ. ರಾತ್ರೋರಾತ್ರಿ ಪಾಕಿಸ್ತಾನದಲ್ಲೂ ಪ್ರಸಿದ್ಧರಾಗುತ್ತಾರೆ. ಜನರಿಂದ ಟೀಕೆಗೊಳಗಾದ ನಂತರ ಹಣೆ ಮೇಲೆ ದೊಡ್ಡದಾಗಿ ಕುಂಕುಮ ಹಚ್ಚಿಕೊಂಡು, ಆಪರೇಷನ್ ಸಿಂದೂರ್ ಯಶಸ್ಸಿನ ಶ್ರೇಯ ಪೂರ್ತಿ ಸೇನೆಗೆ ಸಲ್ಲುತ್ತದೆ ಎಂದು ಹೇಳಿದರು.ರಾಜತಾಂತ್ರಿಕವಾಗಿ ಪಾಕ್ ಜೊತೆಗಿನ ಎಲ್ಲ ಸಂಬಂಧಗಳನ್ನೂ ಕಡಿತಗೊಳಿಸಿ, ಸಿಂಧೂ ಜಲ ಒಪ್ಪಂದ ಅಮಾನತುಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಒಂದು ಭಯೋತ್ಪಾದಕರ ರಾಷ್ಟ್ರ ಎಂಬುದನ್ನು ನಿರೂಪಿಸಿ, ಅಂತಹವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗದಂತೆ ನೋಡಿಕೊಂಡಿದ್ದಾರೆ. ಭಯೋತ್ಪಾದಕರ ದಾಳಿ ಬಳಿಕ ಬರೀ ಹೇಳಿಕೆಗಳನ್ನು ಕೊಟ್ಟು ಸುಮ್ಮನಾಗಿಲ್ಲ. ಭಯೋತ್ಪಾದಕರ 9 ನೆಲೆಗಳನ್ನು ಸೇನೆ ಧ್ವಂಸ ಮಾಡಿ, ನೂರಾರು ಭಯೋತ್ಪಾದಕರನ್ನು ಅಂತಹವರು ನಂಬುವ ಜನ್ನತ್‌ಗೆ ಕಳಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಪಾಕಿಸ್ತಾನದ 14ಕ್ಕೂ ಹೆಚ್ಚು ವಾಯು ನೆಲೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ಮೂರೂ ಸೇನೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ನಂತರವೇ ಇದೆಲ್ಲಾ ಆಗಿದೆ. 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದು, 26 ತಾಯಂದಿರ ಮಾಂಗಲ್ಯ ಕಿತ್ತುಕೊಂಡಿದ್ದಕ್ಕೆ ಇಷ್ಟೇನಾ ಪರಿಹಾರ? ಭಯೋತ್ಪಾದಕರು, ಭಯೋತ್ಪಾದಕರ ಜನಕ, ಭಯೋತ್ಪಾದಕರ ತಾಣಗಳನ್ನೇ ಬೇರು ಸಮೇತ ತೊಲಗಿಸಬೇಕೆಂದು ಕೋಲಾರ ಶಾಸಕ ಹೇಳಿದ್ದಾರೆ. ನಿಮ್ಮ ಅವಧಿಯಲ್ಲಿ ಇದೆಲ್ಲಾ ಯಾಕೆ ಆಗಲಿಲ್ಲ ಎಂದು ಅವರು ಪ್ರಶ್ನಿಸಿದರು.ದೆಹಲಿಯಲ್ಲಿ 2005ರ ಸರಣಿ ಸ್ಫೋಟದಲ್ಲಿ 70 ಜನ ಅಮಾಯಕರು ಸತ್ತಿದ್ದರು. ಆಗ ಕೋಲಾರ ಶಾಸಕ ಸೇರಿದಂತೆ ಕಾಂಗ್ರೆಸ್ಸಿನ ನಾಯಕರು, ಸಚಿವರು ಏನು ಪ್ರತಿಕ್ರಿಯೆ ಕೊಟ್ಟಿದ್ದಿರಿ? ಯಾವ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಿರಿ? 2006ರಲ್ಲಿ ವಾರಣಾಸಿಯಲ್ಲಿ ಬಾಂಬ್ ಸ್ಫೋಟದಿಂದ 28 ಜನ ಸಾವನ್ನಪ್ಪಿದ್ದರು. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? 2006ರಲ್ಲಿ ಮುಂಬೈ ರೈಲುಗಳಲ್ಲಿ ಸರಣಿ ಸ್ಫೋಟ ಸಂಭವಿಸಿ, 209 ಜನ ಸಾವನ್ನಪ್ಪಿದ್ದರು. ಆಗ ಯಾವ ಯುದ್ಧ, ಕಾರ್ಯಾಚರಣೆ ಮಾಡಿದ್ದಿರಿ? 2006ರ ಮಾಲೆಗಾಂವ್ ಸ್ಫೋಟದಲ್ಲಿ 40 ಜನ ಸಾವನ್ನಪ್ಪಿದ್ದು, ಏನು ಕ್ರಮ ನಿಮ್ಮದಾಗಿತ್ತು? 2007ರಲ್ಲಿ ಸಂಜೋತಾ ಎಕ್ಸಪ್ರೆಸ್ ರೈಲು ಸ್ಫೋಟದಲ್ಲಿ 70 ಜನ ಸಾವನ್ನಪ್ಪಿದ್ದಾಗ ಏನು ಮಾಡಿದ್ದಿರಿ? ಆಗ ಎಲ್ಲಿಗೆ ಹೋಗಿದ್ದಿರಿ ಎಂದು ರೇಣುಕಾಚಾರ್ಯ ಪ್ರಶ್ನೆಗಳ ಮಳೆಗರೆದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಕಡ್ಲೇಬಾಳು ಧನಂಜಯ, ಮಾಯಕೊಂಡ ಮುಖಂಡ ಆಲೂರು ನಿಂಗರಾಜ, ರಾಜು ವೀರಣ್ಣ ಇತರರು ಇದ್ದರು.- - - -16ಕೆಡಿವಿಜಿ7, 8.ಜೆಪಿಜಿ:
ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.