ಸಾರಾಂಶ
ಕೈಲ್ ಮುಹೂರ್ತ ಸಂತೋಷಕೂಟ ಕಾರ್ಯಕ್ರಮ ಸಮಾರೋಪಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲ ಸಂಘ ಸಂಸ್ಥೆಗಳು ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಕೈಲ್ ಮುಹೂರ್ತ ಸಂತೋಷಕೂಟ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗಿನಲ್ಲಿ ವಿವಿಧ ಜನಾಂಗದವರು ತಮ್ಮ ಆಚಾರ ವಿಚಾರ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಗೌಡ ಸಮಾಜ ಕೊಡಗಿನಲ್ಲಿ ಮಾತ್ರವಲ್ಲ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಗೌಡ ಜನಾಂಗದವರು ರಾಜಕೀಯ, ಕ್ರೀಡೆ, ಸೈನ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕು. ಬೇರೆ ಸಮಾಜದವರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಗೌಡ ಸಮಾಜದವರು ಆಯೋಜಿಸುವ ಎಲ್ಲ ಕಾರ್ಯಕ್ರಮಗಳು ಇನ್ನೊಂದು ಸಮಾಜದವರಿಗೆ ಮಾರ್ಗದರ್ಶನವಾಗಬೇಕೇ ಹೊರತು ಸ್ಪರ್ಧೆಯಾಗಬಾರದು ಎಂದು ಹೇಳಿದರು.
ಮುಖ್ಯ ಅತಿಥಿ ಗೌಡ ಒಕ್ಕೂಟದ ಉಪಾಧ್ಯಕ್ಷ ತೇನನ ರಾಜೇಶ್ ಮಾತನಾಡಿ, ಶಾಸಕರು ಗೌಡ ಜನಾಂಗದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಭಾಗಮಂಡಲ ಗೌಡ ಸಮಾಜಕ್ಕೆ ಅನುದಾನ ನೀಡಿದ್ದಾರೆ. ಮುಜರಾಯಿ ಇಲಾಖೆಯಿಂದ ಭಗಂಡೇಶ್ವರ ದೇವಸ್ಥಾನದ ಮುಂಬರುವ ಆಡಳಿತ ಮಂಡಳಿಗೆ ಗೌಡ ಜನಾಂಗದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಅಲ್ಲದೆ ಜಾತಿ ಸಮೀಕ್ಷೆಯಲ್ಲಿ ಗೌಡ ಎ ಎಂದು ಉಪಜಾತಿಯಲ್ಲಿ ಅರೆಭಾಷೆ ಎಂದು ನಮೂದಿಸಬೇಕು ಎಂದು ಸಭೆಗೆ ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಚೇರಂಬಾಣೆ ಗೌಡ ಸಮಾಜ ಅಧ್ಯಕ್ಷ ಕೊಡಪಾಲು ಗಣಪತಿ, ನಿರೀಕ್ಷೆಗೂ ಮೀರಿದ ಕ್ರೀಡಾಭಿಮಾನಿಗಳು ಬಂದಿರುವುದು ತುಂಬಾ ಸಂತೋಷದ ವಿಚಾರ. ಸ್ಪರ್ಧೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ ಭಾಗವಹಿಸುವ ಹುಮ್ಮಸ್ಸು ಎಲ್ಲರಿಗೂ ಇರಬೇಕು. ಮಹಿಳಾ ಒಕ್ಕೂಟ ರಚನೆಯಾದ ಮೇಲೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದು, ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜನಾಂಗ ಬಾಂಧವರಿಗೆ ವಿವಿಧ ಸ್ಪರ್ಧೆ:ಜನಾಂಗ ಬಾಂಧವರಿಗಾಗಿ ಪುಟ್ಟ ಮಕ್ಕಳಿಂದ ವಯಸ್ಕರ ವರೆಗೆ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳು, ಮ್ಯಾರಥಾನ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಹಗ್ಗ ಜಗ್ಗಾಟ ಸ್ಪರ್ಧೆಗಳು ಜರುಗಿದವು.
ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಚೇರಂಬಾಣೆ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ದಮಯಂತಿ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಬೇಕಲ್ ರಮಾನಾಥ್ ಸೇರಿದಂತೆ ಗಣ್ಯರು ಹಾಜರಿದ್ದರು. ಮಕ್ಕಳಿಂದ ಛದ್ಮವೇಷ ಪ್ರದರ್ಶನ, ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನ ರಂಜಿಸಿತು. ಅತಿಥಿ ಗಣ್ಯರಿಂದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಶೆ ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿದರು. ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಸ್ವಾಗತಿಸಿದರು. ಸಮಾಜದ ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್ ಮತ್ತು ಒಕ್ಕೂಟದ ನಿರ್ದೇಶಕರಾದ ಬೈಮನ ಜ್ಯೋತಿ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟ ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ವಂದಿಸಿದರು.