ಸಾರಾಂಶ
ಶಿರಸಿ: ವಂದೇ ಮಾತರಂ ಗೀತೆಯಲ್ಲಿ ಜನರಲ್ಲಿ ದೇಶ ಭಕ್ತಿ ಜಾಗ್ರತಗೊಳಿಸುವ ಶಕ್ತಿ ಇದೆ. ಸಮಾಜದಲ್ಲಿ ವಂದೇ ಮಾತರಂ ಗೀತೆ ಮೊಳಗಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶುಕ್ರವಾರ ನಗರದ ದೀನ ದಯಾಳ ಸಭಾಭವನದಲ್ಲಿ ಶಿರಸಿ ನಗರ, ಗ್ರಾಮೀಣ ಹಾಗೂ ಬನವಾಸಿ ಮಂಡಳದ ವತಿಯಿಂದ ಹಮ್ಮಿಕೊಂಡ ವಂದೇ ಮಾತರಂ 150ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರು ಮಾತನಾಡಿದರು.ರಾಷ್ಟ್ರಭಕ್ತಿಯ ಮಂತ್ರದ ಶುಭದಿನ ಇಂದು. ವಂದೇ ಮಾತರಂ ಹಾಡು ಬಂಕಿಮಚಂದ್ರ ಚಟರ್ಜಿ ಅವರಿಂದ ರಚಿತವಾಗಿ 150 ವರ್ಷ ಪೂರೈಸಿದೆ. ವರ್ತಮಾನದಲ್ಲಿಯೂ ವಂದೇ ಮಾತರಂ ಶಕ್ತಿ ಜತೆ ಭವಿಷ್ಯದಲ್ಲಿ ಅಖಂಡತೆಯನ್ನು ರಕ್ಷಿಸಲಿದೆ. ರಾಜ, ಮಹಾರಾಜರ ಆಡಳಿತದಲ್ಲಿ ದೇಶ ಹರಿದು ಹಂಚಿ ಹೋಗಿತ್ತು. ಏಕೀಕರಣದ ಮೂಲಕ ಅದನ್ನು ಸರ್ದಾರ ವಲ್ಲಭಭಾಯಿ ಪಟೇಲ್ ಸಮರ್ಥವಾಗಿ ಒಂದುಗೂಡಿಸಿದ್ದರು. ವಂದೇ ಮಾತರಂ ಗೀತೆ ಕೋಟಿ ಕೋಟಿ ಜನರನ್ನು ಒಗ್ಗೂಡಿಸುವ ಜತೆ ಅಧ್ಯಾತ್ಮ ಜಾಗ್ರತಗೊಳಿಸುವ ಶಕ್ತಿ ಹೊಂದಿದೆ. ವಂದೇ ಮಾತರಂ ಗೀತೆ ಹೇಳುತ್ತ ಕ್ರಾಂತಿಕಾರಿಗಳು ನೇಣು ಕುಣಿಕೆಗೆ ಏರಿದ್ದಾರೆ ಎಂದರು.
ಮುಸ್ಲಿಂ ಲೀಗ್ ಅಧ್ಯಕ್ಷ ಮೌನಾಲಾ ಮಹಮ್ಮದ ಅಲಿ ಮೆಚ್ಚಿಸಲು ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯನ್ನು ಅಧಿಕೃತವಾಗಿ ಮೊಟಕುಗೊಳಿಸುವ ಸ್ಥಿತಿಯನ್ನು ಕಾಂಗ್ರೆಸ್ ಮಾಡಿದೆ. ಅದರ ಕುರಿತು ಚರ್ಚೆಯಾಗಬೇಕು. ಧಾರ್ಮಿಕ ಕಾರಣಕ್ಕೆ ಹಾಗೂ ಇಸ್ಲಾಂನಲ್ಲಿ ಸಂಗೀತ ನಿಷೇಧ ಎಂಬ ಕಾರಣಕ್ಕೆ ವಂದೇ ಮಾತರಂ ನಿಲ್ಲಿಸಲಾಯಿತು. ಕಾಂಗ್ರೆಸ್ ವಂದೇ ಮಾತರಂಗೆ ಅಗೌರವ ತೋರಿಸಿದೆ ಎಂದು ಆರೋಪಿಸಿದರು.ವಂದೇ ಮಾತರಂ ಗೀತೆ ಸರದಾರ ವಲ್ಲಭಭಾಯಿ ಪಟೇಲ ಅವರಿಗೂ ಪ್ರೇರಣೆ ನೀಡಿದೆ. ಈ ಗೀತೆ ಹಾಡಿನ ರೂಪದಲ್ಲಿ ಇರದೇ ಭಾವನಾತ್ಮಕವಾಗಿ ಕೂಡ ಪ್ರೇರಣೆ ನೀಡಿದೆ. ರವೀಂದ್ರನಾಥ ಠಾಗೋರ್ ಅವರು 1896ರಲ್ಲಿ ಹಾಡು ಹೇಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಜಾಗೃತಿ ಭಾಗವಾಗಿತ್ತು. ಮತ್ತೆ ವಂದೇ ಮಾತರಂ ಗೀತೆ ಪ್ರಸ್ತುತಗೊಳಿಸಬೇಕು. ಎಲ್ಲರನ್ನೂ ಒಂದಾಗಿಸುವ ಗೀತೆ ಅಗತ್ಯವಾಗಿದೆ ಎಂದರು.
ಸನಾತನ ಧರ್ಮದ ಸಂಸ್ಕೃತಿ ಕಾಂಗ್ರೆಸ್ ಗೌರವಿಸಿಲ್ಲ. ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಆಸೆಗೆ ಅಲ್ಪಸಂಖ್ಯಾತರ ಓಲೈಕೆಯ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ. ಆದ್ದರಿಂದ ಕಾಂಗ್ರೆಸ್ ಜನಮಾನಸದಿಂದ ದೂರವಾಗುತ್ತಿದೆ. ಮುಂದಿನ ದಿನಗಳಲ್ಲಿ ಖಂಡಿತ ಕಾಂಗ್ರೆಸ್ ತಿರಸ್ಕೃರಿಸಲ್ಪಡುತ್ತದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಶರ್ಮಿಳಾ ಮಾದನಗೇರಿ, ಶಿರಸಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ, ಶಿರಸಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ಬನವಾಸಿ ಮಂಡಲ ಅಧ್ಯಕ್ಷ ರಮೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಮಹೇಶ ಹಂಚಿನಕೇರಿ ವಂದೆ ಮಾತರಂ ಗೀತೆ ಹಾಡಿದರು. ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.