ಚೆನ್ನಮ್ಮನ ಪರಾಕ್ರಮ ಮಾದರಿ: ಎಸ್.ಬಿ. ಮೆಳವಂಕಿ

| Published : Nov 08 2025, 02:15 AM IST

ಸಾರಾಂಶ

1824ರಲ್ಲಿ ಬ್ರಿಟಿಷರ ವಿರುದ್ಧ ಸಮರಗೈದ ವೀರರಾಣಿ ಕಿತ್ತೂರು ಚೆನ್ನಮ್ಮನ ಸಂಗ್ರಾಮವು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು.

ನರಗುಂದ: ಇಡೀ ದೇಶದಲ್ಲಿಯೇ ಆಂಗ್ಲರನ್ನು ಸದೆಬಡಿದು ಮೊದಲ ವಿಜಯಪತಾಕೆ ಹಾರಿಸಿದ ಕನ್ನಡ ನಾಡಿನ ಅಮರ ವೀರಜ್ಯೋತಿ ಕಿತ್ತೂರು ರಾಣಿ ಚೆನ್ನಮ್ಮನ ಪರಾಕ್ರಮ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಸರ್ಕಾರಿ ಪಪೂ ಮಹಾವಿದ್ಯಾಲಯದ ಉಪನ್ಯಾಸಕಿ ಎಸ್.ಬಿ. ಮೆಳವಂಕಿ ತಿಳಿಸಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಸಹಯೋಗದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮನ ಜಯಂತ್ಯುತ್ಸವ ಹಾಗೂ 201ನೇ ವಿಜಯೋತ್ಸವ ಮತ್ತು 376ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

1824ರಲ್ಲಿ ಬ್ರಿಟಿಷರ ವಿರುದ್ಧ ಸಮರಗೈದ ವೀರರಾಣಿ ಕಿತ್ತೂರು ಚೆನ್ನಮ್ಮನ ಸಂಗ್ರಾಮವು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು. ಈ ಐತಿಹಾಸಿಕ ಸಂಗತಿಯನ್ನು ಪುರಸ್ಕರಿಸಿ ಭಾರತ ಸರ್ಕಾರ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಅವರನ್ನು ಮೊದಲ ಮಹಿಳಾ ಸ್ವಾತಂತ್ರ್ಯ ಸೇನಾನಿ ಎಂದು ಘೋಷಿಸಬೇಕು ಎಂಬುದು ಸಮಸ್ತ ಕನ್ನಡಿಗರ ಹೃದಯದ ಕೂಗಾಗಿದೆ ಎಂದರು.

ಕಳೆದ ವರ್ಷ ಭೈರನಹಟ್ಟಿ ಪೂಜ್ಯರು ಕಿತ್ತೂರಿನ 200ನೇ ವಿಜಯೋತ್ಸವದ ನಿಮಿತ್ಯ ವಿಚಾರಸಂಕಿರಣ ಹಾಗೂ ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅದರ ಬಗೆಗೆ ಶಾಲಾ ಕಾಲೇಜುಗಳಲ್ಲಿ ನಿರಂತರ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಆದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಸದೆ ಇರುವುದು ಸಮಸ್ತ ಕನ್ನಡಿಗರ ನೋವಿಗೆ ಕಾರಣವಾಗಿದೆ ಎಂದರು.

ಭೈರನಹಟ್ಟಿ- ಶಿರೋಳದ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ದೇಶದ ಚಾರಿತ್ರಿಕ ಪುಟಗಳಲ್ಲಿ ಕಿತ್ತೂರು ಚೆನ್ನಮ್ಮನ ಕೆಚ್ಚೆದೆಯ ಹೋರಾಟ ಎಲ್ಲ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿದೆ. ಅವರು ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಮತ್ತು ಅಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿಯ ಹೆಸರನ್ನು ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದರು.

ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಇಟಗಿಮಠ ಮಾತನಾಡಿ, ದೇಶದ ಇತಿಹಾಸದ ಪುಟಗಳಲ್ಲಿ ಕಿತ್ತೂರು ಸಂಸ್ಥಾನ ತನ್ನದೆಯಾದ ಚಾರಿತ್ರಿಕ ಹಿನ್ನೆಲೆ ಹೊಂದಿದೆ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟೀಷ್‌ ಧೋರಣೆ ವಿರುದ್ಧ ಮೊದಲು ಸಮರ ಸಾರಿದ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದರು.ಈ ವೇಳೆ ಪ್ರಭಾವತಿ ನೆಗಳೂರು, ಶಾಂತಾ ಕುಪಸ್ತ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ಕವಿತಾ ಮೊರಬದ, ಪುಷ್ಪಾ ಪಾಟೀಲ, ರಾಜುಗೌಡ ಕೆಂಚನಗೌಡ್ರ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಇಸಾಕ್ ಮಸೂತಿಮನಿ, ಪ್ರಾ. ಕೆ.ಎಂ. ಮಾಕನ್ನವರ ಸೇರಿದಂತೆ ಪ್ರಮುಖರು ಇದ್ದರು. ಪ್ರೊ. ಆರ್.ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು.