ರಂಗಭೂಮಿ ಕಲಾವಿದರ ಕಾರ್ಯ ಶ್ಲಾಘನೀಯ: ಡಾ.ರಾಜಾರಾಂ

| Published : Mar 31 2024, 02:01 AM IST

ಸಾರಾಂಶ

ಉದಯಭಾನು ಕಲಾ ಸಂಘದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ರಂಗಭೀಷ್ಮ ಅಬ್ಬೂರು ಜಯತಿರ್ಥ’, ‘ಅವ್ವರಸಿ’, ‘ನೆನೆ ನೆನೆ ಪ್ರಾತಃಸ್ಮರಣೀಯರ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸಾಹಿತಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ಹಾರಗದ್ದೆಯ ಶ್ರೀ ವಿದ್ಯಾ ಮಹಾಸಂಸ್ಥಾನದ ಆತ್ಮಾನಂದನಾಥ ಜೀ, ರಂಗ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, ರಂಗಕರ್ಮಿ ಅಬ್ಬೂರು ಜಯತೀರ್ಥ ಮತ್ತಿತರರು ಹಾಜರಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲಾವಿದರು, ಅದರಲ್ಲೂ ರಂಗಭೂಮಿ ಕಲಾವಿದರು ಎಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನೂ ನಿಭಾಯಿಸುತ್ತಾರೆ. ರಂಗಭೂಮಿಗೆ ಇವರು ಸಲ್ಲಿಸಿರುವ ಕಾರ್ಯ ಶ್ಲಾಘನೀಯ ಎಂದು ರಂಗ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಹೇಳಿದರು.

ನಗರದ ಗವಿಪುರಂ ಗುಟ್ಟಹಳ್ಳಿಯ ಉದಯಭಾನು ಕಲಾ ಸಂಘದಲ್ಲಿ ‘ಸೆಂಟರ್‌ ಫಾರ್‌ ಡಿವೈನ್‌ ಆರ್ಟ್ಸ್‌’ನಿಂದ ಶನಿವಾರ ಆಯೋಜಿಸಿದ್ದ ಮೂರು ಕೃತಿ ಲೋಕಾರ್ಪಣೆ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಭೂಮಿ ಕಲಾವಿದರು ಹಲವು ಸಂಕಷ್ಟಗಳನ್ನು ಅನುಭವಿಸುವುದರಿಂದ ಎಂತಹ ಕಠಿಣ ಸನ್ನಿವೇಶವನ್ನೂ ಸಮರ್ಥವಾಗಿ ನಿಭಾಯಿಸಬಲ್ಲರು. ಸಂಗೀತ, ನೃತ್ಯ ಮತ್ತು ರಂಗಭೂಮಿ ಕಲಾವಿದರು ಒಮ್ಮೊಮ್ಮೆ ನಾಟಕಗಳನ್ನು ಪ್ರದರ್ಶಿಸಲು ಬೇರೆ ಊರುಗಳಿಗೆ ತೆರಳಿದಾಗ ವಾಸ್ತವ್ಯದ ವ್ಯವಸ್ಥೆ ಇಲ್ಲದೇ ರೈಲ್ವೆ ನಿಲ್ದಾಣ, ಪಾದಚಾರಿ ಮಾರ್ಗಗಳಲ್ಲೇ ಮಲಗಿ ಬೆಳಗ್ಗೆ ನಾಟಕ ಪ್ರದರ್ಶಿಸಿದ್ದಾರೆ. ಸಮಾಜವು ಇವರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.

ಜಿ.ಪಿ.ನಾಗರಾಜನ್‌ ಅವರ ‘ರಂಗಭೀಷ್ಮ ಅಬ್ಬೂರು ಜಯತೀರ್ಥ’, ಡಾ.ಗಜಾನನ ಶರ್ಮ ರಚನೆಯ ರಾಣಿ ಚನ್ನಭೈರಾದೇವಿ ಕಾದಂಬರಿ ಆಧಾರಿತ ಕೃತಿ ‘ಅವ್ವರಸಿ’ ಹಾಗೂ ಎಂ.ಬಸವರಾಜು ಮತ್ತು ಶೈಲಜಾ ಉದಯಶಂಕರ್‌ ಸಂಪಾದನೆಯ ‘ನೆನೆ ನೆನೆ ಪ್ರಾತಃ ಸ್ಮರಣೀಯರ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ರಂಗಕರ್ಮಿ ಅಬ್ಬೂರು ಜಯತೀರ್ಥ, ಪತ್ರಕರ್ತ ರು.ಬಸಪ್ಪ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.

ಸಾಹಿತಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ಹಾರಗದ್ದೆಯ ಶ್ರೀ ವಿದ್ಯಾ ಮಹಾಸಂಸ್ಥಾನದ ಆತ್ಮಾನಂದನಾಥ ಜೀ, ಎ.ಎಸ್‌.ವಿ.ಎನ್‌.ವಿ. ಸಂಘದ ಅಧ್ಯಕ್ಷ ಎಸ್‌.ಪ್ರಕಾಶ್‌, ರಂಗಕರ್ಮಿ ಅಬ್ಬೂರು ಜಯತೀರ್ಥ ಮತ್ತಿತರರು ಹಾಜರಿದ್ದರು.