.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

| Published : Mar 31 2024, 02:01 AM IST

.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಹಾಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಬೇರೆಯವನ್ನು ನೇಮಿಸಬೇಕಿದೆ. ಚುನಾವಣೆ ಬಳಿಕ ಕ್ರಮ ಕೈಗೊಳ್ಳುವ ಸಾಧ್ಯತೆ ಇದ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ಗೆ ಸಾಕಷ್ಟು ಪೈಪೋಟಿ ನಂತರ ರಕ್ಷಾ ರಾಮಯ್ಯಗೆ ಟಿಕೆಟ್ ಪ್ರಕಟಿಸಲಾಗಿದೆ. ಈಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ.

ಜಿಲ್ಲೆಯಲ್ಲಿ ಹಾಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಎನ್‌.ಕೇಶವರೆಡ್ಡಿಗೆ ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರು ಅಧಿಕಾರ ಸ್ವೀಕರಿಸಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಪಕ್ಷದೊಳಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.

ಲೋಕಸಭಾ ಚುಣಾವನಾ ಸಮಯದಲ್ಲೇ ಕಾಂಗ್ರೆಸ್‌ ಪಕ್ಷದೊಳಗೆ ಮತ್ತೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಜಿಲ್ಲೆಯ ಕಾಂಗ್ರೆಸ್‌ ಪಕ್ಷದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಹೊಸಬರಿಗೆ ಸ್ಥಾನ ನೀಡಬೇಕು

ಕಳೆದ ಆರು ವರ್ಷಗಳಿಂದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಗೌರಿಬಿದನೂರಿನ ಕೆ.ಎನ್. ಕೇಶವರೆಡ್ಡಿರವರು ಕಾಂಗ್ರೇಸ್ ಸರ್ಕಾರದ ನಿಗಮ ಮಂಡಳಿ ನೇಮಕಾತಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಿದ್ದು, ಅದರಲ್ಲಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನೇಮಕಗೊಂಡಿ ರುವುದರಿಂದ ಅವರು ಜಿಲ್ಲಾಧ್ಯಕ್ಷ ಸ್ಥಾನ ತೆರವು ಮಾಡಬೇಕೆಂಬ ಒತ್ತಾಯದ ಜೊತೆಗೆ ಹೊಸಬರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕಲ್ಪಿಸಬೇಕೆಂಬ ಮಾತು ಪಕ್ಷದೊಳಗೆ ಪ್ರಬಲವಾಗಿ ಕೇಳಿ ಬರುತ್ತಿತ್ತು. ಒಬ್ಬರಿಗೆ ಒಂದೇ ಹುದ್ದೆ ನಿಯಮ

ಜಿಲ್ಲಾಧ್ಯಕ್ಷರ ನೇಮಕದ ವಿಚಾರದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ನೇಮಕಗೊಂಡಿರುವ ನಿಗಮ, ಮಂಡಳಿಗಳಲ್ಲಿ ಜಿಲ್ಲೆಗೆ ಅವಕಾಶ ಸಿಕ್ಕಿಲ್ಲ ಎಂಬ ಅಸಮಾಧಾನ, ಆಕ್ರೋಶ ಪಕ್ಷದೊಳಗೆ ಕಾಣುತ್ತಿದೆ. ಜೊತೆಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿರುವ ಕೇಶವರೆಡ್ಡಿಗೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿರುವುದು ಸಹ ಕಾಂಗ್ರೆಸ್‌ನ ಕೆಲ ನಿಷ್ಠಾವಂತ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಒಬ್ಬರಿಗೆ ಎರಡು ಹುದ್ದೆ ಏಕೆ ಎಂಬ ಪ್ರಶ್ನೆ ಸಹ ಎದ್ದಿದೆ. ಕೇಶವರೆಡ್ಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ನಾರಾಯಣಸ್ವಾಮಿ, ಚಿನ್ನಪ್ಪ ಪೈಪೋಟಿ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚಿಕ್ಕಬಳ್ಳಾಪುರದ ಮಾಜಿ ಜಿಲ್ಲಾಪಂಚಾಯತಿ ಅಧ್ಯಕ್ಷರಾಗಿರುವ ಗಂಗರೇಕಾಲುವೆ ನಾರಾಯಣಸ್ವಾಮಿ ಮತ್ತು ಚಿಂತಾಮಣಿಯ ಮಾಜಿ ಜಿಪಂ ಅಧ್ಯಕ್ಷರಾದ ಎಸ್‌.ಎನ್‌.ಚಿನ್ನಪ್ಪ ನಡುವೆ ತೀವ್ರ ಪೈಪೋಟಿ ಶುರುವಾಗಿದೆ. ಚಿಕ್ಕಬಳ್ಳಾಪುರದಿಂದ ಗಂಗರೇಕಾಲುವೆ ನಾರಾಯಣಸ್ವಾಮಿ ಪರ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ರನ್ನು ಚಿಂತಾಮಣಿಯಲ್ಲಿ ಭೇಟಿ ಮಾಡಿ ನಾರಾಯಣಸ್ವಾಮಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕೆಂಬ ಮನವಿ, ಹಕ್ಕೋತ್ತಾಯ ಮಾಡಿ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ಸಚಿವ ಡಾ.ಎಂ.ಸಿ.ಸುಧಾಕರ್‌ ತಮ್ಮ ಆಪ್ತ ಎಸ್‌.ಎನ್‌.ಚಿನ್ನಪ್ಪ ಪರ ಬ್ಯಾಟಿಂಗ್‌ ಬೀಸುತ್ತಾರಾ ಇಲ್ಲ ಚಿಕ್ಕಬಳ್ಳಾಪುರ ತಾಲೂಕಿನ ಗಂಗರೇ ಕಾಲುವೆ ನಾರಾಯಣ ಸ್ವಾಮಿರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಬದಲಾವಣೆಗೆ ಚುನಾವಣೆ ಅಡ್ಡಿ

ಸದ್ಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ನಾಯಕರು ಕಾಂಗ್ರೆಸ್‌ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡುತ್ತಾರಾ ಅಥವಾ ಲೋಕಸಭೆ ಚುನಾವಣೆ ಮುಗಿಯುವರೆಗೂ ಜಿಲ್ಲಾಧ್ಯಕ್ಷರಾಗಿ ಕೇಶವರೆಡ್ಡಿ ಅವರನ್ನೇ ಮುಂದುವರೆಸುತ್ತಾರಾ? ಇಲ್ಲ ಕೇಶವರೆಡ್ಡಿ ಪ್ರಾಧಿಕಾರದ ಜೊತೆಗೆ ಜಿಲ್ಲಾಧ್ಯಕ್ಷರಾಗಿಯೆ ತಾವೇ ಮುಂದುವರೆಯುತ್ತಾರಾ ಎನ್ನುವುದು ಸದ್ಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ,ಎಂ.ಸಿ.ಸುಧಾಕರ್‌ ಹಾಗೂ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಯಾವ ರೀತಿಯ ನಿಲುವು ತೆಗೆದುಕೊಳ್ಳಲಿದ್ದಾರೆಂಬುದು ಮಾತ್ರ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.