ಯುವ ಪೀಳಿಗೆ ಪ್ರಜಾಪ್ರಭುತ್ವದ ಮಹತ್ವ ಅರಿಯಬೇಕು: ಎಸ್.ಎಲ್.ಭೋಜೇಗೌಡ

| Published : Sep 16 2025, 12:03 AM IST

ಯುವ ಪೀಳಿಗೆ ಪ್ರಜಾಪ್ರಭುತ್ವದ ಮಹತ್ವ ಅರಿಯಬೇಕು: ಎಸ್.ಎಲ್.ಭೋಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಯುವ ಪೀಳಿಗೆ ಪ್ರಜಾಪ್ರಭುತ್ವದ ಮಹತ್ವ ಅರಿಯಬೇಕೆಂಬ ಸದುದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.

- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೈಕಲ್ ಜಾಥಾ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಯುವ ಪೀಳಿಗೆ ಪ್ರಜಾಪ್ರಭುತ್ವದ ಮಹತ್ವ ಅರಿಯಬೇಕೆಂಬ ಸದುದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮತ್ತಿತರ ಅಧಿಕಾರಿಗಳೊಂದಿಗೆ ಚಾಲನೆ ನೀಡಿ ಮಾತನಾಡಿದರು.ದೇಶದ ಏಕತೆ, ಅಖಂಡತೆ, ರಾಷ್ಟ್ರೀಯತೆ ಈ ಎಲ್ಲಾ ವಿಚಾರವನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಪ್ರಜಾಪ್ರಭುತ್ವದ ಮಹತ್ವವನ್ನು ನಮ್ಮ ಯುವ ಜನತೆ ಅರಿಯಬೇಕು. ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ ಮತ್ತು ಆರೋಗ್ಯ ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯವಾಗಿದೆ. ಈ ಆಶಯದಂತೆ ಪ್ರತಿಯೊಬ್ಬ ಪ್ರಜೆ ಅರಿತು ನಡೆದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.ಸಂವಿಧಾನದ ಆಶಯ ಆಧರಿಸಿ ಹಿಂದಿನವರು ಈಗಾಗಲೇ ನಮ್ಮ ನಾಡಿಗೆ ಕೊಟ್ಟಿದ್ದಾರೆ. ಅವೆಲ್ಲವುಗಳನ್ನು ಕಾರ್ಯಗತ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಕೆಲವು ಯಶಸ್ಸಿನ ಹಾದಿಯಲ್ಲಿವೆ. ನಮ್ಮ ಪೀಳಿಗೆಯವರಿಗೆ ಈ ದಿನ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸ ಅವರದ್ದಾಗಿದೆ. ಮತದಾನ ನಮ್ಮ ಹಕ್ಕು. ಮತದಾನ ಮಾಡುವಾಗ ಸರಿಯಾದ ರೀತಿಯಲ್ಲಿ ಚಿಂತನೆ ಮಾಡುವುದು ಅಗತ್ಯ. ಈ ವಿಚಾರ ದಲ್ಲಿ ಬಹಳ ಜಾಗರೂಕತೆ ವಹಿಸಬೇಕು ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ಮಾಲತಿ ಮಾತನಾಡಿ ನಮ್ಮದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಇದಕ್ಕೆ ಮೂಲ ಕಾರಣ ಸಂವಿಧಾನ ಕರ್ತೃ ಡಾ. .ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿದ ಅವಕಾಶ ಗಳಿಂದಾಗಿ ಮಹಿಳೆ ಇಂದು ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತಾಗಿದೆ ಎಂದರು.ಇಂದು ರಾಜ್ಯಾದ್ಯಂತ ಸೈಕಲ್ ಜಾಥ ಆಯೋಜನೆ ಮಾಡಲಾಗಿದೆ. ಭಾರತದ ಭವ್ಯ ಭವಿಷ್ಯ ಶಾಲಾ ಕಾಲೇಜುಗಳ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ ಎಂದು ಕೊಠಾರಿ ಆಯೋಗ ಹೇಳಿದ್ದು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಮುಖಂಡರಾದ ಕೆ.ಟಿ ರಾಧಾಕೃಷ್ಣ ಭಾಗವಹಿಸಿದ್ದರು.ನೇತಾಜಿ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಿಂದ ಹೊರಟ ಸೈಕಲ್ ರ್‍ಯಾಲಿ ಆಜಾದ್ ಪಾರ್ಕ್, ಹಿರೇಮಗಳೂರು, ಎಐಟಿ ಸರ್ಕಲ್, ದಂಟರಮಕ್ಕಿ, ಎಂ.ಜಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ತಲುಪಿತು. 15 ಕೆಸಿಕೆಎಂ 2ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಸೋಮವಾರ ಆಯೋಜನೆ ಮಾಡಿದ್ದ ಸೈಕಲ್ ಜಾಥಾಕ್ಕೆ ಎಸ್‌.ಎಲ್‌. ಬೋಜೇಗೌಡ ಚಾಲನೆ ನೀಡಿದರು.