ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಅಂಗಡಿ ಮುಂಗಟ್ಟುಗಳ ನಾಮಫಲಕಗಳನ್ನು ಶೇ. 60ರ ಪ್ರಮಾಣದಲ್ಲಿ ಕನ್ನಡ ಭಾಷೆಯಲ್ಲೇ ಬಳಸಬೇಕೆಂಬ ಸರ್ಕಾರದ ಆದೇಶವನ್ನು ಹುಣಸೂರಿನಲ್ಲಿ ಸಂಪೂರ್ಣ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ಮೆರವಣಿಗೆ ನಡೆಸಿದರು.ಪಟ್ಟಣದಲ್ಲಿ ಸೋಮವಾರ ಸಂವಿಧಾನವೃತ್ತದಿಂದ ಮೆರವಣಿಗೆ ಹೊರಟು ಬಸ್ ನಿಲ್ದಾಣ, ಕಲ್ಪತರು ವೃತ್ತದ ಮೂಲಕ ಕೋರ್ಟ್ ವೃತ್ತ ಹಾದು ತಹಸೀಲ್ದಾರ್ ಕಚೇರಿ ಮುಂಭಾಗ ಜಮಾವಣೆಗೊಂಡರು. ಮೆರವಣಿಗೆಯುದ್ದಕ್ಕೂ ಕನ್ನಡ ಭಾಷೆ, ನೆಲ, ಜಲದ ವಿಷಯದಲ್ಲಿ ರಾಜಿಯಿಲ್ಲ, ಕನ್ನಡ ಎಂದವರು ನಮ್ಮ ಸಂಗಡ ಎಂಬಿತ್ಯಾದಿ ಘೋಷಣೆಗಳನ್ನು ಕಾರ್ಯಕರ್ತರು ಕೂಗಿ ಸಾರ್ವಜನಿಕರ ಗಮನ ಸೆಳೆದರು. ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2024ರನ್ವಯ ಸರ್ಕಾರ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ವ್ಯಾಪಾರಸ್ಥರು ತಮ್ಮ ಕಚೇರಿ ಮತ್ತು ವ್ಯಾಪಾರ ಸಂಸ್ಥೆಯ ನಾಮಫಲಕಗಳನ್ನು ಶೇ. 60-40 ಪ್ರಮಾಣದಲ್ಲಿ ಕನ್ನಡದಲ್ಲೇ ಪ್ರದರ್ಶಿಸಬೇಕೆಂದು ವರ್ಷದ ಹಿಂದೆಯೇ ಆದೇಶಿಸಿದೆ. ಆದರೆ ಹುಣಸೂರು ನಗರ ಮತ್ತು ಹೊರವರ್ತುಲ ಬೈಪಾಸ್ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಎಲ್ಲೆಲ್ಲೂ ಆಂಗ್ಲ ಭಾಷೆಯೇ ವಿಜೃಂಭಿಸುತ್ತಿದೆ. ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಹುಣಸೂರಿನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವ ನಗರಸಭೆ ಪೌರಾಯುಕ್ತರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಹಾಗೂ ಸರ್ಕಾರದ ಆದೇಶ ಶೀಘ್ರ ಜಾರಿಗೊಳಿಸುವತ್ತ ತಾಲೂಕು ಆಡಳಿತ ಕ್ರಮವಹಿಸಬೇಕೆಂದು ಒತ್ತಾಯಿಸಿದರು.ತಹಸೀಲ್ದಾರ್ ಜೆ. ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು. ಕರವೇ ಮುಖಂಡರಾದ ಮುನ್ನ, ರಮೇಶ್, ಶ್ರೀನಿವಾಸ್ ರಾಮೇನಹಳ್ಳಿ, ರಫಿ ಅಹ್ಮದ್, ಜಬಿ, ರಸೂಲ್, ಸ್ವಾಮಿ ಹೊಸಕೋಟೆ, ರಜಿತ್, ಜಯಕ್ಕ, ನಾಗರಾಜ್ ಚನ್ನಸೋಗೆ, ಸಂಜೀವ್ ಕುಮಾರ್, ಸನಾವುಲ್ಲ, ಮಂಜು ಹೊಸಕೋಟೆ, ಚಂದ್ರು ವಡ್ಡಂಬಾಳು, ಶಿವರಾಮ್, ಬೆಳ್ತೂರು ವೆಂಕಟೇಶ್, ರಾಯನಹಳ್ಳಿ ಸ್ವಾಮಿ, ಮಹೇಶ್ ಇದ್ದರು.