ಸಾರಾಂಶ
ರಾಮನಗರ: ಬಿಜೆಪಿ ನಾಯಕರು ಕೋಮುವಾದವನ್ನು ಹುಟ್ಟು ಹಾಕಿ ರಾಜ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ಬಿಡಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ದಸರಾ ಉದ್ಘಾಟನೆಗೆ ಭಾನು ಮುಸ್ತಾಕ್ ಆಯ್ಕೆ ಪ್ರಶ್ನಿಸಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಡಿ.ಕೆ.ಸುರೇಶ್, ನಾವೆಲ್ಲರೂ ಭಾರತೀಯರು ಅಂತ ಒಪ್ಪಿಕೊಂಡ ಮೇಲೆ ಪದೇಪದೇ ಬೇರೆ ರೀತಿಯ ಚರ್ಚೆ ಬೇಡ. ಇದು ಕೋಮುವಾದ ಹುಟ್ಟುಹಾಕುವುದನ್ನು ಬಿಟ್ಟು ಬೇರೇನೂ ಅಲ್ಲ ಎಂದರು.ಬಿಜೆಪಿ ಸ್ನೇಹಿತರಿಗೆ ಅನೇಕ ಬಾರಿ ಹೇಳಿದ್ದೇನೆ. ದೇಶದಲ್ಲಿ ಭಾರತೀಯರು ಬದುಕಲಿಕ್ಕೆ ಬಿಡಿ ಅಂತ. ಭಾರತವನ್ನು ವಿರೋಧಿಸುವವರ ಪರವಾಗಿ ನಾವ್ಯಾರು ಇಲ್ಲ. ಆದರೆ, ನೀವು ಪದೇಪದೇ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಬೇಡಿ. ಸರ್ವಧರ್ಮದ ವಿಚಾರ ಹಾಗೂ ಬಸವಣ್ಣನವರ ನಾಯಕತ್ವ, ಸಂವಿಧಾನಕ್ಕೆ ಅಗೌರವ ತೋರಬೇಡಿ. ರಾಜ್ಯಕ್ಕೆ ಧಕ್ಕೆ ಆಗುವ ರೀತಿ ನಡೆದುಕೊಳ್ಳಬೇಡಿ ಎಂದು ಹೇಳಿದರು.
ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಎಲ್ಲಾ ವಿಚಾರ ತಿಳಿಸಿದ್ದಾರೆ. ರೈತರ ಪ್ರತಿಭಟನೆ ರಾಜಕೀಯ ಪ್ರೇರಿತವೇ ಹೊರತು ಬೇರೇನೂ ಅಲ್ಲ. ರೈತರ ಹಿತಕಾಯುಲು ಸರ್ಕಾರ, ಡಿ.ಕೆ.ಶಿವಕುಮಾರ್ ಹಾಗೂ ಬಾಲಕೃಷ್ಣ ಬದ್ಧರಾಗಿದ್ದಾರೆ ಎಂದು ಹೇಳಿದರು.ಕೆಲವರು ರಾಜಕೀಯವನ್ನೇ ಮಾಡಬೇಕು ಅಂದಾಗ ಅವರಿಗೆ ಉತ್ತರ ಕೊಡಲು ಕಷ್ಟ. ಪ್ರತಿಭಟನೆಗೆ ಬಿಜೆಪಿ ನಾಯಕರು ಸಾಥ್ ನೀಡುತ್ತಿದ್ದು, ಏನು ಮಾಡುತ್ತಾರೆಂದು ಕಾದು ನೋಡೊಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕುರುಬ ಸಮುದಾಯದ ಎಸ್ಟಿ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರಲ್ಲ ಎಂಬ ಪ್ರಶ್ನೆಗೆ ಎಲ್ಲವೂ ಸುಮ್ಮನೆ ಗಾಳಿ ಸುದ್ದಿ. ಎಲ್ಲರೂ ಬೇಡಿಕೆಗಳನ್ನು ಇಡುತ್ತಾರೆ. ಅದನ್ನು ಸರ್ಕಾರ ಪರಿಶೀಲನೆ ಮಾಡಿ, ಸಚಿವ ಸಂಪುಟದ ಮುಂದೆ ಇಡುತ್ತದೆ. ಸರ್ಕಾರದ ಹಂತದಲ್ಲಿ ಇವೆಲ್ಲವೂ ತೀರ್ಮಾನ ಆಗುತ್ತದೆ. ಕೇವಲ ಮಾತಿನಲ್ಲಿ ತೀರ್ಮಾನ ಆಗುವುದಿಲ್ಲ ಎಂದು ಹೇಳಿದರು.ಬಾಕ್ಸ್.............
ನಗರ ಸಾರಿಗೆ ಬಸ್ಸಿನಲ್ಲಿ ಶಾಸಕ ಇಕ್ಬಾಲ್ ಹುಸೇನ್ ಸಿಟಿ ರೌಂಡ್ಸ್ರಾಮನಗರ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನಿಗದಿತ ಮಾರ್ಗಗಳಲ್ಲಿ ಸೋಮವಾರದಿಂದ ಸಂಚಾರ ಆರಂಭಿಸಿದ ನಗರ ಸಾರಿಗೆ ಬಸ್ಸಿನಲ್ಲಿ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಸಿಟಿ ರೌಂಡ್ಸ್ ನಡೆಸಿದರು.
ನಗರ ಸಾರಿಗೆ ಬಸ್ ಸಂಚರಿಸಿದ ಭಾಗಗಳಲ್ಲಿ ಮುಖಂಡರು, ಸಾರ್ವಜನಿಕರು ಶಾಸಕರಿಗೆ ಹೂಮಾಲೆ ಹಾಕಿ, ಬಸ್ಸಿಗೆ ಪೂಜೆ ನೆರವೇರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ದೃಶ್ಯ ಎಲ್ಲೆಡೆ ಕಂಡು ಬಂದಿತು. ನಗರದ ಬಿಜಿಎಸ್ ವೃತ್ತ, ರಾಯರದೊಡ್ಡಿ, ಮಹಿಳಾ ಪ್ರಥಮ ದರ್ಜೆ ಕಾಲೇಜು, ಕಂದಾಯಭವನ, ಬಿಇಒ ಕಚೇರಿ, ನಗರಸಭೆ, ರೈಲ್ವೆ ವೃತ್ತ, ಮೆಹಬೂಬ್ ನಗರ ವೃತ್ತ, ಬಾಲಗೇರಿ ವೃತ್ತದ ಮೂಲಕ ಮಂಡಿಪೇಟೆ ಬಡಾವಣೆ, ಅರ್ಚಕರಹಳ್ಳಿ, ಐಜೂರು ವೃತ್ತ ದಿಂದ ಶಾಸಕರ ಕಚೇರಿವರೆಗೆ ಶಾಸಕ ಇಕ್ಬಾಲ್ ಹುಸೇನ್ ರವರು ಮುಖಂಡರೊಂದಿಗೆ ಟಿಕೆಟ್ ಪಡೆದು ಪ್ರಯಾಣಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಶಾಸಕ ಕೆ.ರಾಜು, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು ಸೇರಿದಂತೆ ನಗರಸಭೆ ಸದಸ್ಯರು ಶಾಸಕರಿಗೆ ಸಾಥ್ ನೀಡಿದರು.