ಮಾಜಿ ಸಚಿವರ ಮನೆ ಸೇರಿದಂತೆ 3 ಕಡೆ ಕಳ್ಳತನ, ಮೂವರ ಬಂಧನ

| Published : Oct 26 2024, 01:00 AM IST

ಸಾರಾಂಶ

ಮಾಜಿ ಸಚಿವ ಎನ್.ಮಹೇಶ್ ಸೇರಿದಂತೆ ವಿವಿಧೆಡೆ ಮೂರು ಪ್ರಕರಣಗಳಲ್ಲಿ ಕಳ್ಳತನವೆಸಗಿದ್ದ ಮೂರು ಮಂದಿಯನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಾಜಿ ಸಚಿವ ಎನ್.ಮಹೇಶ್ ಸೇರಿದಂತೆ ವಿವಿಧೆಡೆ ಮೂರು ಪ್ರಕರಣಗಳಲ್ಲಿ ಕಳ್ಳತನವೆಸಗಿದ್ದ ಮೂರು ಮಂದಿಯನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪಟ್ಟಣದ ಆನಂದ ಜ್ಯೋತಿ ಕಾಲೋನಿ ವಾಸಿ ಲಂಬು ದರ್ಶನ್ (21), ನರೀಪುರ ಗ್ರಾಮದ ದರ್ಶನ್ (20) ಹಾಗೂ ಟೌನ್ ನಾಯಕರ ಬೀದಿಯ ಅಪ್ರಾಪ್ತ ಬಾಲಕ ಜೀವನ್ ಎಂಬುವರು ಬಂಧಿತ ಆರೋಪಿಗಳು. ಈ ಮೂರು ಮಂದಿ ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಇದೇ ತಿಂಗಳಲ್ಲಿ ಬೈಕ್ ಕಳವು ಮಾಡಿ ಬಳಿಕ ಅದೇ ಬೈಕ್‌ನಲ್ಲಿ ತೆರಳಿ ಅರೇಪಾಳ್ಯ ಗ್ರಾಮದಲ್ಲಿ ರಂಗಸ್ವಾಮಿ ಎನ್ನುವವರ ಮನೆಯಲ್ಲಿ ಸುಮಾರು 1.28 ಲಕ್ಷ ರು. ನಗದು ಹಾಗೂ 40 ಗ್ರಾಂ ಚಿನ್ನವನ್ನು ಕಳ್ಳತನ ಮಾಡಿದ್ದರು. ಅಲ್ಲದೆ ಆಗಸ್ಟ್ ತಿಂಗಳಲ್ಲಿ ಪಟ್ಟಣದಲ್ಲಿರುವ ಮಾಜಿ ಸಚಿವ ಎನ್.ಮಹೇಶ್ ಮನೆಯಲ್ಲಿ 50 ಸಾವಿರ ರು. ನಗದು ದೋಚಿ ಪರಾರಿಯಾಗಿದ್ದರು.

ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ಮತ್ತು ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಮೂರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 1ಬೈಕ್ ಹಾಗೂ 40 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.