ಉಡುಪಿ: ಭಾರತದಲ್ಲಿ ತಯಾರಾದ ಪಾರಂಪರಿಕ ಶೈಲಿಯ ರತ್ನಾಭರಣಗಳಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಭಾರತದಿಂದ ರತ್ನಾಭರಣ ರಪ್ತಿಗೂ ವಿಫುಲ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಯುವಜನತೆಗೆ ಆಭರಣ ತಯಾರಿಕೆಗೆ ತರಬೇತಿ ನೀಡುವುದಕ್ಕಾಗಿ ಉಡುಪಿಯೂ ಸೇರಿದಂತೆ ದೇಶದ 5 ಕಡೆಗಳಲ್ಲಿ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ)ಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮಂಗಳವಾರ ಉಡುಪಿಯ ಭಾರತೀಯ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ)ಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿರುವ 5 ಐಐಜಿಜೆಗಳಲ್ಲಿ ಉಡುಪಿಯ ಕೇಂದ್ರವು 4ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಉದ್ಯಮಾಧಾರಿತ ಕೌಶಲ್ಯ ತರಬೇತಿ ಯೋಜನೆಯು ದಕ್ಷಿಣ ಭಾರತದಾದ್ಯಂತ ಯುವಕರಿಗೆ ಜೀವನವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದಕ್ಕೆ ಉಡುಪಿ ಐಐಜಿಜೆ ಅತ್ಯಂತ ಪ್ರಶಸ್ತ ಉದಾಹರಣೆಯಾಗಿದೆ. ಉಡುಪಿಯಂತಹ ಚಿಕ್ಕ ಪಟ್ಟಣದಲ್ಲಿರುವ ಈ ಸಂಸ್ಥೆಯು ಕರ್ನಾಟಕ, ಕೇರಳ, ತಮಿಳುನಾಡಿನ ವಿದ್ಯಾರ್ಥಿಗಳನ್ನು ಇಲ್ಲಿಗೆ ಆಕರ್ಷಿಸುತ್ತಿದೆ. ಕಳೆದೊಂದು ವರ್ಷದಲ್ಲಿ ಈ ಕೇಂದ್ರವು 600ಕ್ಕೂ ಹೆಚ್ಚು ಯುವಕರಿಗೆ ಚಿನ್ನಾಭರಣ ತಯಾರಿಕೆಯ ತರಬೇತಿ ನೀಡಿದೆ. ಅವರಲ್ಲಿ ಅನೇಕ ಮಂದಿ ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದರೆ, ಸಾಕಷ್ಟು ಮಂದಿ ಸ್ವಂತ ವ್ಯವಹಾರವನ್ನೂ ಆರಂಭಿಸಿದ್ದಾರೆ ಎಂಬುದೇ ಈ ಕೇಂದ್ರದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು.ರತ್ನಗಿರಿಯಿಂದ ತಿರುವಂತನಪುರದವರೆಗಿನ ಪಶ್ಚಿಮ ಕರಾವಳಿಯಲ್ಲಿ ಆಭರಣ ತಯಾರಿ ಒಂದು ಕಲೆಯಾಗಿ ಗುರುತಿಸಲ್ಪಡುತ್ತದೆ. ಇಲ್ಲಿನ ಆಭರಣಗಳಿಗೆ ಅಮೆರಿಕದಂತಹ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದಲೇ ಉಡುಪಿಯ ಐಐಜಿಜೆ ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಕೇಂದ್ರವಾಗಿ ರೂಪುಗೊಳ್ಳುತ್ತದೆ ಎಂದು ಅವರು ಹೇಳಿದರು.

ರತ್ನ ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿ (ಜಿಜೆಇಪಿಸಿ) ಅಧ್ಯಕ್ಷ ಕಿರಿಟ್ ಬನ್ಸಾಲಿ, ದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಐಐಜಿಜೆ ಕೇಂದ್ರಗಳು ಇದುವರೆಗೆ 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿವೆ ಮತ್ತು ಭಾರತೀಯ ಆಭರಣ ಉದ್ಯಮಕ್ಕೆ ಅತ್ಯಂತ ಪ್ರತಿಭಾನ್ವಿತ ಕುಶಲಕರ್ಮಿಗಳನ್ನು ನೀಡಿದೆ. ಇಂದು ಭಾರತೀಯ ರತ್ನ ಮತ್ತು ಆಭರಣ ರಪ್ಥು ಉದ್ಯಮವು 28 ಶತಕೋಟಿ ಡಾಲರ್ ವ್ಯವಹಾರ ನಡೆಸುತ್ತಿದೆ ಮತ್ತು 5 ಕೋಟಿಗಿಂತಲೂ ಹೆಚ್ಚು ಜನರ ಜೀವನೋಪಾಯಕ್ಕೆ ಸಹಕಾರಿಯಾಗಿದೆ ಎಂದರು. ಕೇಂದ್ರ ಸರ್ಕಾರದ ವಿಕಸಿತ್ ಭಾರತ್ 2047ರ ದೃಷ್ಟಿಕೋನವನ್ನು ಹೊಂದಿರುವ ಭಾರತೀಯ ರತ್ನ ಮತ್ತು ಆಭರಣ ರಫ್ತನ್ನು 100 ಶತಕೋಟಿ ಡಾಲರ್ ಗೆ ಮುಟ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಇದೇ ಸಂದರ್ಭ ಉಡುಪಿಯ ಐಐಜಿಜೆಯ 5 ಮಂದಿ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿಗಳನ್ನು ಮತ್ತು 3 ಮಂದಿ ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಅತ್ಯುತ್ತಮ ಫಲಾನುಭವಿಗಳನ್ನು ಅಭಿನಂದಿಸಲಾಯಿತು.

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಜೆಇಪಿಸಿ ಉಪಾಧ್ಯಕ್ಷ ಶೌನಕ್ ಪಾರಿಖ್, ಕಾರ್ಯನಿರ್ವಾಹಕ ನಿರ್ದೇಶಕ ಸವ್ಯಸಾಚಿ ರೇ ಮತ್ತು ದಕ್ಷಿಣ ವಲಯ ಪ್ರಾದೇಶಿಕ ಅಧ್ಯಕ್ಷ ಮಹೇಂದರ್ ತಯಾಲ್ ಉಪಸ್ಥಿತರಿದ್ದರು.ಐಐಜಿಜೆ- ಐಐಟಿ-ಎಂ ನಡುವೆ ಒಪ್ಪಂದ: ಈ ಕಾರ್‍ಯಕ್ರಮದಲ್ಲಿ ಭಾರತೀಯ ರತ್ನಗಳು ಮತ್ತು ಆಭರಣ ಸಂಸ್ಥೆ (ಐಐಜಿಜೆ) ಮತ್ತು ಐಐಟಿ ಮದ್ರಾಸ್ (ಐಐಟಿ-ಎಂ) ನಡುವೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು. ಇದು ಪ್ರಯೋಗಾಲಯದಲ್ಲಿ ವಜ್ರಗಳನ್ನು ಸೃಷ್ಟಿಸುವ ತಂತ್ರಜ್ಞಾನ ಮತ್ತು ಪ್ರಮಾಣೀಕರಣ ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾದ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಯೋಗಾಲಯದಲ್ಲಿ ವಜ್ರ ಬೆಳೆಸುವ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಕಟಿಸಲಾಗಿದೆ.


ಸಚಿವೆ ನಿರ್ಮಲಾ ಕೊಲ್ಲೂರು ಭೇಟಿ: ಮಂಗಳವಾರ ಉಡುಪಿಗೆ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿದರು. ಶ್ರೀ ಮುಕಾಂಬಿಕಾ ದೇವಿಯ ದರ್ಶನ ಪಡೆದ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವರನ್ನು ದೇವಾಲಯದ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.