ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರು. ಒದಗಿಸಲಾಗುವುದು. ಆ ನಿಟ್ಟಿನಲ್ಲಿ ಜಾಗ ಗುರುತಿಸುವಂತೆ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ಮಡಿಕೇರಿ ಸಹಯೋಗದಲ್ಲಿ ನಗರದ ಕಾವೇರಿ ಹಾಲ್‍ನಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಬ್ಯಾರಿ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಸಕ ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ ಅವರ ಸಹಕಾರದಿಂದ ಒಟ್ಟು ಒಂದು ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದು ಖಾದರ್ ಭರವಸೆ ನೀಡಿದರು.ಬ್ಯಾರಿ ಸಂಸ್ಕೃತಿ, ಸಾಹಿತ್ಯ, ಪರಂಪರೆಗೆ ತನ್ನದೇ ಇತಿಹಾಸ ಇದ್ದು, ಬ್ಯಾರಿ ಸಂಸ್ಕೃತಿ, ಸಾಹಿತ್ಯ, ಪರಂಪರೆ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದರು.
ಬ್ಯಾರಿ ಸಾಹಿತ್ಯ ಸಮ್ಮೇಳನದಿಂದ ಯುವಜನರಿಗೆ ಬ್ಯಾರಿ ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಬಗ್ಗೆ ಮಾಹಿತಿ ನೀಡಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುಕೂಲ ಆಗಲಿದ್ದು, ಅಭಿಪ್ರಾಯ ಹಂಚಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಮಕ್ಕಳ ಶಿಕ್ಷಣ, ಭವಿಷ್ಯದ ಬಗ್ಗೆ ಯೋಚಿಸಬೇಕು. ಬಡತನದಲ್ಲಿ ಹುಟ್ಟಿರಬಹುದು ಆದರೆ ಅದನ್ನು ಮೆಟ್ಟಿ ಒಳ್ಳೆಯ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ವಿಧಾನ ಸಭೆಯ ಸಭಾಧ್ಯಕ್ಷರು ವಿವರಿಸಿದರು.
ಅನುದಾನ ಒದಗಿಸಲಾಗುವುದು:ಶಾಸಕ ಡಾ.ಮಂತರ್ ಗೌಡ ಮಾತನಾಡಿ ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿದಲ್ಲಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಬ್ಯಾರಿ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ ಕೊಡಗು ಜಿಲ್ಲೆಯವರಿಗೂ ಅವಕಾಶ ಮಾಡಬೇಕು ಎಂದು ಇದೇ ಸಂದರ್ಭ ಕೋರಿದರು.ಸಮ್ಮೇಳನ ಅಧ್ಯಕ್ಷ ಬಿ.ಎ.ಷಂಶುದ್ದೀನ್ ಮಾತನಾಡಿ, ಬ್ಯಾರಿ ಸಮುದಾಯದ ಬೆಳವಣಿಗೆಯನ್ನು ಗಮನಿಸಿದಾಗ ದೇಶದ ಒಂದು ಮೂಲೆಯಲ್ಲಿದ್ದ ಈ ಸಣ್ಣ ಸಮುದಾಯ ಮುಂದಿನ ದಿನಗಳಲ್ಲಿ ರಾಜ್ಯ ಮಾತ್ರವಲ್ಲ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚುವ ಸುಳಿವನ್ನು ನೀಡುತ್ತಿದೆ ಎಂದರು.
40 ವರ್ಷಗಳ ಹಿಂದೆ ಬ್ಯಾರಿ ಸಮುದಾಯದಲ್ಲಿ ಪದವೀಧರರ ಸಂಖ್ಯೆ ಬಹಳ ಕಡಿಮೆ ಇತ್ತು. ಎಸ್ಸೆಸ್ಸೆಲ್ಸಿ ವರೆಗೆ ಓದಿದವರ ಪ್ರಮಾಣ ಕೂಡ ಶೇ.50 ಮುಟ್ಟಿರಲಿಲ್ಲ. ಅದರಲ್ಲೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡುವವರೇ ಇರಲಿಲ್ಲ. ಬ್ಯಾರಿ ಆಂದೋಲನ ಪ್ರಾರಂಭವಾದ ಬಳಿಕ, ಅದರಲ್ಲೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡ ಬಳಿಕ ಬ್ಯಾರಿಗಳಲ್ಲಿ ಒಂದು ರೀತಿಯ ಕ್ರಾಂತಿಯೇ ಉಂಟಾಯಿತು ಎಂಬುದು ಗಮನಾರ್ಹ ಎಂದರು.ಸಾಹಿತಿ ಹಾಗೂ ಚಿಂತಕ ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ನಮ್ಮ ನಾಡಗೀತೆ ಈ ನೆಲದ ಗೌರವವನ್ನು ಗೌರವಿಸುವ ರೀತಿಯಲ್ಲಿ ಬ್ಯಾರಿ ಭಾಷೆಯ ಗುಣ ವಿಶೇಷತೆಯ ಸಂವರ್ಧನೆಯ ಸಾಂಸ್ಕೃತಿಕ ಮಹತ್ವವನ್ನು ಒಳಗೊಂಡಂತೆ ಇತ್ತು ಎಂದರು.ಎಲ್ಲಾ ಧರ್ಮ ಒಂದು:
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಎಲ್ಲಾ ಧರ್ಮ ಒಂದು. ಹಿಂದೂ, ಮುಸ್ಲಿಂ, ಕ್ರೈಸ್ತ ಜಾನಪದೀಯ ಹಿನ್ನೆಲೆ ಇದ್ದರೆ ಸಮಾಜ ಉತ್ತಮವಾಗಿ ಬೆಳೆಯುತ್ತದೆ ಎಂದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಯಾವಾಗ ನಾವು ನಮ್ಮ ಭಾಷೆಯನ್ನು ಮಾತನಾಡುತ್ತೇವೊ ಆಗ ಭಾಷೆ, ಸಂಸ್ಕೃತಿ ಉಳಿಯುತ್ತದೆ. ಕೆಲವು ಪ್ರದೇಶಗಳಲ್ಲಿ ಹೊರತು ಪಡಿಸಿದರೆ ಉಳಿದೆಡೆ ಭಾಷೆ ಬೆಳವಣಿಗೆ ಕಾಣುತ್ತಿಲ್ಲ. ಆದ್ದರಿಂದ ಭಾಷೆಯನ್ನು ಉಳಿಸುವ ಮೂಲಕ ನಮ್ಮ ಸಂಸ್ಕೃತಿ, ದೇಶವನ್ನು ಉಳಿಸಬೇಕು ಎಂದು ಹೇಳಿದರು.
ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮಹೇಶ್ ನಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿ.ಹಸನಬ್ಬ, ಅಮೀನ್ ಮೊಹಿಸಿನ್, ಮನ್ಸೂರ್, ಮಹಮ್ಮದ್, ಮಡಿಕೇರಿ ನಗರಸಭೆ ಸದಸ್ಯರಾದ ಎಂ.ಎ.ಮುಸ್ತಫಾ, ಬಶೀರ್ ಅಹ್ಮದ್, ನಾಮ ನಿರ್ದೇಶಿತ ಸದಸ್ಯರಾದ ಮಹಮ್ಮದ್ ಯಾಕೂಬ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಹೆಚ್.ಉಮರ್ ಮತ್ತಿತರರಿದ್ದರು.ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಮ್ಮೇಳನಾಧ್ಯಕ್ಷ ಬಿ.ಎ.ಷಂಶುದ್ದೀನ್ ಅವರನ್ನು ಗೌರವಿಸಲಾಯಿತು. ಮುನೀರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಜೀರ್ ಅಹಮದ್ ಸ್ವಾಗತಿಸಿದರು....................
ನಗರದ ಕ್ರೆಸೆಂಟ್ ಶಾಲೆಯಿಂದ ಕಾವೇರಿ ಹಾಲ್ ತನಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮಡಿಕೇರಿ ನಗರಸಭೆ ಸದಸ್ಯರಾದ ಅಮೀನ್ ಮೊಹ್ಸಿನ್ ಉದ್ಘಾಟಿಸಿದರು.ಸಭಾ ಕಾರ್ಯಕ್ರಮದ ನಂತರ ಬ್ಯಾರಿ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚೆ ನಡೆಯಿತು.
ಸಂಜೆಯ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ, ಸಮ್ಮೇಳನದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.ಸಮ್ಮೇಳನದಲ್ಲಿ ದಫ್, ಒಪ್ಪನೆ ಪಾಟ್, ಕೋಲ್ಕಲಿ ಮತ್ತು ಮಂಗಳೂರಿನ ಕಲಾತಂಡದಿಂದ ಬ್ಯಾರಿ ಹಾಡುಗಳು ಗಮನ ಸೆಳೆಯಿತು.