ಸಾರಿಗೆ ನೌಕರರ ಮುಷ್ಕರದ ಕುರಿತಂತೆ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸುತ್ತಿದ್ದೇನೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ಕುಂದಾಪುರ: ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ವೇತನ ಪರಿಷ್ಕಣೆಯ ಕುರಿತು ಚರ್ಚೆಗಳಾಗುತ್ತಿವೆ. ಎಲ್ಲ ಗೊಂದಲಗಳಿಗೂ ಪರಿಹಾರ ಇದ್ದೇ ಇರುತ್ತದೆ. ಸಾರಿಗೆ ನೌಕರರ ಮುಷ್ಕರದ ಕುರಿತಂತೆ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸುತ್ತಿದ್ದೇನೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.ಶನಿವಾರ ಬೆಳಗ್ಗೆ ಬೈಂದೂರಿನ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ ವೇಳೆ ಅವರು ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಕರ್ನೂಲ್ ದುರಂತದ ಬಳಿಕ ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ವಸ್ತುಗಳು ಬಿಟ್ಟರೆ ಬೇರೆ ಯಾವುದೇ ವಸ್ತುಗಳನ್ನು ಸಾಗಿಸಲು ಅವಕಾಶಗಳಿಲ್ಲ ಎಂದು ಆದೇಶ ಹೊರಡಿಸಿಲಾಗಿತ್ತು. ಈ ಆದೇಶವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದಾರೆ ಎಂದರು.೨೦೧೩ರಲ್ಲಿ ಸಾರಿಗೆ ಸಚಿವನಾಗಿದ್ದ ಸಂದರ್ಭದಲ್ಲಿ ಅಪಘಾತಗಳನ್ನು ಗಮನಿಸಿ ಬಸ್‌ಗಳಿಗೆ ಕಡ್ಡಾಯವಾಗಿ ತುರ್ತು ಬಾಗಿಲು ಅಳವಡಿಸಲು ಆದೇಶ ಮಾಡಲಾಗಿತ್ತು. ಈಗಲೂ ಬಸ್ಸಿಗೆ ತುರ್ತು ಬಾಗಿಲುಗಳು ಇಲ್ಲವಾದಲ್ಲಿ ಎಫ್.ಸಿ ಪ್ರಮಾಣ ಪತ್ರ ಕೊಡುವುದಿಲ್ಲ. ಅದರ ನಿರ್ವಹಣೆ ಬಗ್ಗೆ ಆಗಾಗ್ಗೆ ನಿರ್ವಾಹಕರು ಗಮನಿಸುತ್ತಲೇ ಇರಬೇಕು ಎಂದರು.ಪಿಣರಾಯಿ ವಿಜಯನ್ ಅವರು ಬೆಂಗಳೂರಿನಲ್ಲಿ ಜಾಗ ತೆರವು ಕುರಿತತಂತೆ ಮಾನವೀಯತೆ ಇಲ್ಲದ ಕರ್ನಾಟಕ ಸರ್ಕಾರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಪಿಣರಾಯಿ ವಿಜಯನ್ ಯಾಕೆ ಹಾಗೆ ಹೇಳಿದ್ದಾರೊ ಗೊತ್ತಿಲ್ಲ. ಕೇರಳ ರಾಜ್ಯದ ಮುಖ್ಯಮಂತ್ರಿ ಅಲ್ಲಿನ ವಿಚಾರವನ್ನು ನೋಡಿಕೊಳ್ಳಲಿ. ನಮ್ಮ ರಾಜ್ಯದ್ದು ನಾವು ನೋಡಿಕೊಳ್ಳುತ್ತೇವೆ ಎಂದರು.
ಖಾಸಗಿಯವರು ಕೋರ್ಟ್‌ಗೆ ಹೋಗ್ತಾರೆ: ಕರಾವಳಿಯಲ್ಲಿ ಖಾಸಗಿ ಬಸ್ಸುಗಳ ಪಾರುಪತ್ಯದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ ಒದಗಿಸಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಪರ್ಮಿಟ್ ವಿಚಾರದಲ್ಲಿ ಪದೇ ಪದೇ ಖಾಸಗಿಯವರು ನ್ಯಾಯಾಲಯಕ್ಕೆ ಹೋಗುತ್ತಿರುವ ಹಿನ್ನೆಲೆ ಇದಕ್ಕೆ ತೊಡಕುಗಳಾಗುತ್ತಿವೆ ಎಂದು ಸ್ಪಷ್ಟಪಡಿಸಿದರು.ಈ ವೇಳೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಇದ್ದರು.