ಮಡಿಕೇರಿ ಕೊಡವ ಸಮಾಜ ವತಿಯಿಂದ ಪುತ್ತರಿ ಊರೊರ್ಮೆ ಹಾಗು ಮಂದ್ ನಲ್ಲಿ ಪುತ್ತರಿ ಕೋಲಾಟ್ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ಕೊಡವ ಸಮಾಜ ವತಿಯಿಂದ ಪುತ್ತರಿ ಊರೊರ್ಮೆ ಹಾಗು ಮಂದ್ ನಲ್ಲಿ ಪುತ್ತರಿ ಕೋಲಾಟ್ ನಡೆಯಿತು.ದೇವರಿಗೆ ಅಕ್ಕಿ ಹಾಕಿ ನಮಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ಚಂಗಪ್ಪ ಭಾಗವಹಿಸಿದರು.
ಸಮಾಜ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಮಾಜದ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಕೊಡವ ಮೂಲ ಜನಾಂಗದ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು ಎಂದು ಅವರು ಹೇಳಿದರು.ಬೆಂಗಳೂರು ಕೊಡವ ಸಮಾಜದಿಂದ ವಿವಿಧೆಡೆ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿದ್ದು, ಕೊಡವ ಮಕ್ಕಳಿಗೆ ರಿಯಾಯಿತಿ ನೀಡುತಿದ್ದೇವೆ. ಕೊಡವ ವಧು-ವರ ಕೇಂದ್ರವನ್ನು ಪ್ರಾರಂಭಿಸಿದ್ದೆವೆ. ದೇಶ ವಿದೇಶದಲ್ಲಿರುವ ಕೊಡವರ ಸಂಪರ್ಕವನ್ನು ಬೆಳೆಸುತ್ತೇವೆ ಎಂದರು.
ಸಮಾಜದ ಅಧ್ಯಕ್ಷ ಮಂಡವಂಡ ಮುತ್ತಪ್ಪ ಮಾತನಾಡಿ, ಕೊಡವ ಸಮಾಜ ವತಿಯಿಂದ ಕೊಡವ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಲು ಶ್ರಮಿಸುತಿದ್ದೇವೆ. ಮಡಿಕೇರಿಯಲ್ಲಿರುವ 12 ಕೊಡವ ಕೇರಿಗಳು ಸಮಾಜಕ್ಕೆ ಸದಾ ಸಹಕಾರ ನೀಡುತ್ತೇವೆ ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ ಹಾಗ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡಲಾಯಿತು.ನಿರ್ದೇಶಕ ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ಕನ್ನಂಡ ಕವಿತ ಕಾವೇರಮ್ಮ, ಕಾಂಡೇರ ಲಲ್ಲು, ಪಾಲೆಯಂಡ ರೂಪ, ಪೆಮ್ಮಡಿಯಂಡ ಉತ್ತಪ್ಪ, ಪುಲ್ಲೆರ ವಸಂತ್ , ಮಡಿಕೇರಿ ಸಮಾಜದ ಸದಸ್ಯರು, ಕೊಡವ ಕೇರಿ ಪದಾಧಿಕಾರಿಗಳು ಭಾಗವಹಿಸಿದ್ದರು.ಉಪಾದ್ಯಕ್ಷ ಕೇಕಡ ವಿಜು ದೇವಯ್ಯ ನಿರೂಪಿದರು. ಗೌರವ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷ ಕೇಕಡ ವಿಜುದೇವಯ್ಯ ಸ್ವಾಗತಿಸಿ, ನಿರ್ದೇಶಕ ನಂದಿನೆರವಂಡ ರವಿ ಬಸಪ್ಪ ಅತಿಥಿ ಪರಿಚಯಿಸಿ, ಜಂಟಿ ಕಾರ್ಯದರ್ಶಿ ನಂದನೆರವಂಡ ದಿನೇಶ್ ವಂದಿಸಿದರು.
ನಂತರ ಕೊಡವ ಸಂಪ್ರದಾಯದೊಂದಿಗೆ ಕೊಡವ ಸಮಾಜದಿಂದ ಕೋಲ್ ಮಂದ್ ಗೆ ಮೆರವಣಿಗೆ ತೆರಳಿದರು. ಕಾವೇರಿ ಕೇರಿಯವರು ಮಂದ್ ಗೆ ಸ್ವಾಗತಿಸಿದರು. ನಂತರ ಕೋಲಾಟ್, ಬೊಳಕಾಟ್, ಕತ್ತಿಯಾಟ್ ಉಮ್ಮತಾಟ್ ಹಾಗು ವಾಲಗತಾಟ್ ನಡೆಯಿತು.