ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಬಿಜ್ಜರಗಿ ಬಜಾಜ್ ಟ್ರಯಂಪ್ ಶೋರೂಂ ಸಹಯೋಗದಲ್ಲಿ ಪುರುಷರ ಮಾನಸಿಕ ಆರೋಗ್ಯ ಹಾಗೂ ಪ್ರಾಸ್ಟೇಟ್ (ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಸಹಾಯಕ ಗ್ರಂಥಿ) ಕ್ಯಾನ್ಸರ್ ಜಾಗೃತಿ ಮೂಡಿಸುವ ಸಲುವಾಗಿ ಡಿಸ್ಟಿಂಗವಿಶ್ಡ್ ಜಂಟಲ್ ಮನ್ ರೈಡ್ (DGR) ಹಮ್ಮಿಕೊಳ್ಳಲಾಗಿತ್ತು. ಜಾಗೃತ ಕಾರ್ಯಕ್ರಮದಲ್ಲಿ 16 ವಿವಿಧ ಟ್ರಯಂಪ್ ವಾಹನಗಳಿದ್ದು, ಜಿಲ್ಲೆಯ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಸಿಂದಗಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮುಧೋಳ ಹಾಗೂ ಕಲಬುರಗಿಯಿಂದ 40ಕ್ಕೂ ಅಧಿಕ ರೈಡರ್ಸ್ ಭಾಗವಹಿಸಿದ್ದರು. ಜಾಗೃತಿ ರೈಡ್ ನಗರದ ಗೋಳಗುಮ್ಮಟ, ಸಿದ್ಧೇಶ್ವರ ದೇವಸ್ಥಾನ, ಗಾಂಧಿ ಚೌಕ್, ಬಿಎಲ್‌ಡಿಇ ಆಸ್ಪತ್ರೆ, ಎಂಜಿನಿಯರಿಂಗ್ ಕಾಲೇಜು, ಸೈನಿಕ ಶಾಲೆ, ಆಲ್ ಅಮೀನ್ ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧೆಡೆ ಸಂಚರಿಸಿ ಪುರುಷರ ಮಾನಸಿಕ ಆರೋಗ್ಯ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಕ್ಯಾನ್ಸರ್ ತಜ್ಞ ಡಾ.ಉದಯ ಕಾರಜೋಳ ಮಾತನಾಡಿ, ಪ್ರಾಸ್ಟೇಟ್ ಕ್ಯಾನ್ಸರ್ ರೋಗ ಶೇ.50 ರಷ್ಟು ಅನುವಂಶಿಕತೆಯಿಂದ ಬಂದರೆ, ಇನ್ನರ್ಧ ಯುವ ಸಮುದಾಯ ಗುಟಕಾ, ತಂಬಾಕು ಸೇವನೆಯಿಂದ ಬರುತ್ತದೆ. ಈಗ ಕ್ಯಾನ್ಸರ್ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಸೂಕ್ತ ಚಿಕೆತ್ಸೆ ಪಡೆದು ಗುಣಮುಖರಾಗಬಹುದು. ಉಸಿರಾಟ ತೊಂದರೆ, ತಲೆ ಸುತ್ತುವುದು, ರಾತ್ರಿ ವೇಳೆ ಅತೀ ಹೆಚ್ಚು ಮೂತ್ರ ವಿಸರ್ಜನೆ ಹಾಗೂ ಉರಿತ ಕಂಡುಬರುತ್ತದೆ. ಇಂತಹ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕ ಮಾಡಬೇಕು. ಪ್ರಾಸ್ಟೇಟ್ ಕ್ಯಾನ್ಸರ್ ರೋಗವನ್ನು ರಕ್ತ ತಪಾಸಣೆಯಲ್ಲಿಯೇ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಬಹುದು ಎಂದರು.
ಡಾ.ಮಂಜುನಾಥ ಮಸಳಿ ಮಾತನಾಡಿ, ಪುರುಷರ ಮಾನಸಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರು. ನಾವು ಆಧುನಿಕ ಭರಾಟೆಯಲ್ಲಿ ಒತ್ತಡದ ಜೀವನದಲ್ಲಿ ಬದುಕುತಿದ್ದೇವೆ. ದೈನಂದಿನ ಕೆಲಸದ ಒತ್ತಡದಿಂದಾಗಿ ಮಧುಮೇಹಕ್ಕೆ ಒಳಗಾಗುತ್ತಿದ್ದೇವೆ. ಭಾರತ ಇಂದು ಜಗತ್ತಿನ ಮಧುಮೇಹ ರಾಜಧಾನಿಯಾಗಿ ಹೊರಹೊಮ್ಮಿದೆ. ಮುಖ್ಯವಾಗಿ ನಾವು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಬಿಜ್ಜರಗಿ ಬಜಾಜ್ ಶೋರೂಮ್ ಮಾಲೀಕ ಸಂದೀಪ ಬಿಜ್ಜರಗಿ ಮಾತನಾಡಿ, ಅಮೇರಿಕಾ, ರಷ್ಯಾ ಸೇರಿದಂತೆ ಜಗತ್ತಿನಾದ್ಯಂತ ಪುರುಷರ ಮಾನಸಿಕ ಆರೋಗ್ಯ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿಗಾಗಿ ಡಿಜಿಆರ್ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಬಾರಿ ವಿಜಯಪುರದಲ್ಲಿ ನಡೆಸಿದ್ದು, ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಬಿಜ್ಜರಗಿ ಶೋರೂಮ್ ಮಾಲೀಕ ರವೀಂದ್ರ ಬಿಜ್ಜರಗಿ, ಮಹಾಂತೇಶ ಬಿಜ್ಜರಗಿ, ಪ್ರಕಾಶ ಗುಡ್ಡೋಡಗಿ, ಷಣ್ಮುಖೇಶ ಗುಡ್ಡೋಡಗಿ, ನಾಗೇಶ ಹೊಸಮನಿ, ಸಿದ್ದು ಹಳಕಟ್ಟಿ, ಸುರೇಶ ರೆಡ್ಡಿ, ಚೇತನ ಅವಟಿ, ನಾಗೇಶ ಕೋರೆ, ಆನಂದ ರಾಥೋಡ, ಮುರುಗೇಂದ್ರ ತೊರ್ಲಿ, ಕೈಪಿಯತ್ ಹುಸೇನ್, ಮೃತ್ಯುಂಜಯ ಹಿರೇಮಠ, ಸುಹಾಸ ಜಗದಾಳೆ, ಮುತ್ತುರೆಡ್ಡಿ, ಅಮಿತ್ ಪಠಾಣಕರ, ಸಂತೋಷಕುಮಾರ ಕೋಳಿ ಸೇರಿ ಹಲವರು ಉಪಸ್ಥಿತರಿದ್ದರು.