ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕಕ್ಕುಂದ ಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾನ್ಯಾಸವನ್ನು ನೆರವೇರಿಸಲಾಯಿತು.ಉಡುಪಿಯ ಸದಾಶಿವ ಉಪಾಧ್ಯಾಯ, ಕಾರ್ಕಳದ ರೋಹಿತ ಹಾಗೂ ಅರ್ಚಕ ಸುಧೀರ್ ಕುಮಾರ ಮೂಲ ನಕ್ಷತ್ರ ಸಂಕಷ್ಟ ಚತುರ್ಥಿ ದಿನದಂದು ಪೂಜಾ ವಿಧಿ ವಿಧಾನಗಳೊಂದಿಗೆ ಶಿಲಾನ್ಯಾಸವನ್ನು ನೆರವೇರಿಸಿದರು.ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಜೀರ್ಣೋದ್ಧಾರ ಮಾಡಿ ದೇವರ ಅನುಗ್ರಹ ಪಡೆಯುವ ಉದ್ದೇಶದಿಂದ ಕಕ್ಕುಂದ ಕಾಡಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯ ತತ್ಪರವಾಗಿದೆ. ತೀರ್ಥರೂಪಿಣಿಯಾದ ಕಾವೇರಿ ನದಿಯು ಹರಿಯುವ ನಾಪೋಕ್ಲು ಸಮೀಪದ ಕಕ್ಕುಂದಕಾಡು ಎಂಬಲ್ಲಿ 25 ವರ್ಷಗಳ ಹಿಂದೆ ಸತ್ಯನಾರಾಯಣ ಪೂಜೆಯೊಂದಿಗೆ ಆರಂಭವಾದ ಈ ಕ್ಷೇತ್ರ ತದನಂತರ ಸಂಕೀರ್ಣವಾದ ಸ್ಥಳದಲ್ಲಿ ವೆಂಕಟೇಶ್ವರ ದೇವರು, ಗಣಪತಿ ಹಾಗೂ ನವಗ್ರಹ ದೇವತೆಗಳ ಆರಾಧನೆ ನಡೆಯುತ್ತಿದೆ. ಈ ದೇವಾಲಯದ ನಿರ್ಮಾಣ ಕಾಲದಲ್ಲಿ ತತ್ಕಾಲಕ್ಕೆ ಬೇಕಾದ ಕನಿಷ್ಠ ಅವಶ್ಯಕತೆ ಯೋಜನೆಯಲ್ಲಿ ಗರ್ಭಗುಡಿ, ತೀರ್ಥ ಮಂಟಪ, ಗಣಪತಿ ದೇವರಗುಡಿ ಇತ್ಯಾದಿಗಳನ್ನು ನಿರ್ವಹಿಸಿದ್ದು ಇದು ದೇವಾಲಯಗಳ ವಾಸ್ತು ವಿನ್ಯಾಸಕ್ಕೆ ಹೊರತಾಗಿದೆ. ಅಂತೆಯೇ ವಾಸ್ತು ತಜ್ಞ ಉಡುಪಿ ಗುಂಡಿಬೈಲು ಸುಬ್ರಮಣ್ಯ ಅವಧಾನಿಗಳನ್ನು ಕರೆಸಿ, ವಾಸ್ತು ವಿಮರ್ಶೆ ನಡೆಸಲಾಯಿತು. ದೇವಾಲಯ ಶಿಥಿಲಾವಸ್ಥೆಯಲ್ಲಿ ಇರುವ ಕಾರಣದಿಂದ ದೇವಾಲಯವನ್ನು ಮೂಲದಿಂದಲೇ ಬದಲಾವಣೆ ಮಾಡಬೇಕೆಂದು ಅವರು ತಿಳಿಸಿದ್ದು ದೇವಾಲಯದ ಜೀರ್ಣೋದ್ಧಾರ ಸಮಿತಿ ನೀಲಿನಕಾಶೆಯನ್ನು ಸಿದ್ಧಪಡಿಸಿ ದೇವಾಲಯದ ಸಮಗ್ರ ಜೀರ್ಣೋದ್ಧಾರಕ್ಕೆ ಸುಮಾರು ಎರಡು ಕೋಟಿ ರು. ವೆಚ್ಚ ತಗಲಬಹುದು ಎಂದು ಅಂದಾಜಿಸಿದೆ. ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ತಾಮ್ರದ ಹೊದಿಕೆ, ನೈವೆದ್ಯ ಕೋಣೆ, ಗಣಪತಿ ದೇವರ ಗುಡಿ, ನಾಗದೇವರಿಗೆ ಪೂಜಾ ಸ್ಥಳ ನವಗ್ರಹ ದೇವತೆಗಳ ಸ್ಥಳ, ನೂತನ ದ್ವಜಸ್ಥಂಭ ಇತ್ಯಾದಿಗಳ ಯೋಜನೆಗಳೊಂದಿಗೆ ಪ್ರಾರಂಭಿಸುವ ಮಹತ್ಕಾರ್ಯಕ್ಕೆ ಜೀರ್ಣೋದ್ಧಾರ ಸಮಿತಿ ಸನ್ನದ್ದಾಗಿದ್ದು ಭಕ್ತಾದಿಗಳು ತನು ಮನ ಧನಗಳಿಂದ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಪಿ ಗೋಪಾಲ, ಉಪಾಧ್ಯಕ್ಷ ಟಿ.ವಿ ಭವಾನಿ, ಗೌರವಾಧ್ಯಕ್ಷ ದೇವಿ ಪ್ರಸಾದ, ಕಾರ್ಯದರ್ಶಿ ದಿವ್ಯ ಮಂದಪ್ಪ, ಖಜಾಂಚಿ ಟಿ.ಕೆ.ಸೂರ್ಯಕುಮಾರ್, ದೇವಸ್ಥಾನ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಟಿ.ಎನ್ ರಮೇಶ, ಕಾರ್ಯದರ್ಶಿ ಸಜಿಕುಮಾರ್, ಟಿ.ಎ. ಸಮಿತಿ ಸದಸ್ಯರಾದ ಸೀನಾ, ಮಾಧವ, ಮಂದಪ್ಪ , ಪ್ರಕಾಶ ಹಿರಿಯರಾದ ರಾಧಾಕೃಷ್ಣ, ಪುಟ್ಟಣ್ಣ ಹಾಗೂ ಊರಿನ ಸದಸ್ಯರು ಉಪಸ್ಥಿತರಿದ್ದರು.ನಾಪೋಕ್ಲು ಸಮೀಪದ ಕಕ್ಕುಂದ ಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾನ್ಯಾಸ ನೆರವೇರಿಸಲಾಯಿತು.