ಸಾರಾಂಶ
ಗದಗ: ರೋಣ ಪಟ್ಟಣದಲ್ಲಿ ಡಿ. 15ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.
ಅವರು ರೋಣ ತಹಸೀಲ್ದಾರ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಶುಕ್ರವಾರ ಸಂಜೆ ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವ್ಯವಸ್ಥಿತವಾಗಿ ಯಾವುದೇ ಲೋಪಗಳಿಲ್ಲದಂತೆ ಕಾರ್ಯಕ್ರಮ ಆಯೋಜಿಸಲು ವಿವಿಧ ಸಮಿತಿ ರಚಿಸಲಾಗಿದ್ದು, ಸಮಿತಿಯವರು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು ಈಗಾಗಲೇ ಜಿಲ್ಲಾ ಹಾಗು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಏನಾದರೂ ತೊಂದರೆ ಇದ್ದರೆ ಈಗಲೇ ತಿಳಿಸಿ ಪರಿಹಾರ ಕಂಡು ಕಂಡುಕೊಳ್ಳೋಣ ನಂತರ ಸಮಸ್ಯೆಗಳಿವೆ ಎಂದು ಹೇಳಬೇಡಿ ಎಂದರು.
ವಿವಿಧ ಇಲಾಖೆಗಳ ಯೋಜನೆಯ ಮಾಹಿತಿ ಒಳಗೊಂಡ ಸ್ಟಾಲ್ ತೆರೆದು ಯೋಜನೆಗಳ ಜಾಗೃತಿ ಪ್ರದರ್ಶಿಸಿ ಸರ್ಕಾರದಿಂದ ನೀಡಿರುವ ಸವಲತ್ತುಗಳ ಮಾಹಿತಿ ಸಾರ್ವಜನಿಕರಿಗೆ ಒದಗಿಸಬೇಕು. ವೇದಿಕೆ ನಿರ್ವಹಣೆ, ಹೆಲಿಪ್ಯಾಡ್ ನಿರ್ವಹಣೆ, ಅತಿಥಿಗಳನ್ನು ಸ್ವಾಗತಿಸುವ ಕಾರ್ಯ ಸರಿಯಾಗಿ ನಿರ್ವಹಣೆ ಆಗಬೇಕು ಎಂದು ಹೇಳಿದರು.ಅಗ್ನಿಶಾಮಕ ದಳವು ಹರ್ಲಾಪುರ ಗ್ರಾಮ, ಹಾಗು ರೋಣದಲ್ಲಿ ಜರುಗುವ ಕಾರ್ಯಕ್ರಮದ ಹತ್ತಿರ ಅಗ್ನಿಶಾಮಕ ವಾಹನ ಸೇರಿದಂತೆ ಸಂಬಂಧಿಸಿದ ವ್ಯವಸ್ಥೆಯನ್ನು ಸರಿಯಾಗಿಟ್ಟುಕೊಳ್ಳಬೇಕು. ಪ್ರವಾಸಿ ಮಂದಿರಗಳನ್ನು ಸ್ವಚ್ಛ ಗೊಳಿಸಿ ಬಂದ ಅತಿಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ರೋಣ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಬೇಕಾದ ಸಕಲ ಸಿಧ್ಧತೆಯನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಿದ್ಧ ಮಾಡಿಕೊಳ್ಳಬೇಕು ಎಂದರು.
ಜಿಪಂ ಸಿಇಓ ಭರತ್ ಎಸ್ ಮಾತನಾಡಿ, ಕಾರ್ಯಕ್ರಮದ ವಿವಿಧ ಸಮಿತಿಯಲ್ಲಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳ ಸಹಕಾರದೊಂದಿಗೆ ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಹಾಗೂ ವಿವಿಧ ಇಲಾಖೆಯ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡುವವರಿಗೆ ಮುಂಚಿತವಾಗಿ ತಿಳಿಸಬೇಕು ಎಂದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಮಾತನಾಡಿ, ಕಾರ್ಯಕ್ರಮದಲ್ಲಿ ಬರುವ ಎಲ್ಲ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸೂಕ್ತ ಬಂದೂಬಸ್ತ್ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಪೂರ್ಣಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಮಿಥುನಗೌಡ ಪಾಟೀಲ, ಎಸಿ ಗಂಗಪ್ಪ, ತಹಸೀಲ್ದಾರ ನಾಗರಾಜ ಕೆ, ಎರ್ರಿಸ್ವಾಮಿ, ಪುರಸಭೆ ಮುಖ್ಯಾಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಮಹೇಶ ಪೋತದಾರ, ರವಿ ಗುಂಜಿಕರ, ಶರಣು ಗೋಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕೃಷಿ ಇಲಾಖೆಯ ತಾರಾಮಣಿ, ಪ್ರವಾಸೋದ್ಯಮ ಇಲಾಖೆಯ ಕೊಟ್ರೇಶ್ ವಿಭೂತಿ, ಸೇರಿದಂತೆ ಜಿಲ್ಲಾ, ತಾಲೂಕುಗಳ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.