ಸಾರಾಂಶ
ನಾನು ಸರ್ವಧರ್ಮಗಳನ್ನು ಪ್ರೀತಿಸುವ ವ್ಯಕ್ತಿ. ಕ್ಷೇತ್ರದಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಹಲವಾರು ವರ್ಷಗಳಿಂದ ಎಲ್ಲಾ ಧರ್ಮದ ಹಬ್ಬಗಳನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸೋಮವಾರ ನಗರದಲ್ಲಿ ನಡೆದ ಈದ್ ಮೆರವಣಿಗೆ ಸಂದರ್ಭದಲ್ಲಿ ನಾನು ಮಾತನಾಡಿರುವುದನ್ನು ಪೂರ್ಣವಾಗಿ ಪ್ರಸಾರ ಮಾಡದೆ ಕೆಲವರು ಅದನ್ನು ತಿರುಚಿ ಅಪಪ್ರಚಾರದಲ್ಲಿ ತೊಡಗಿದ್ದಾರೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಭದ್ರಾವತಿ
ನಾನು ಸರ್ವಧರ್ಮಗಳನ್ನು ಪ್ರೀತಿಸುವ ವ್ಯಕ್ತಿ. ಕ್ಷೇತ್ರದಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಹಲವಾರು ವರ್ಷಗಳಿಂದ ಎಲ್ಲಾ ಧರ್ಮದ ಹಬ್ಬಗಳನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸೋಮವಾರ ನಗರದಲ್ಲಿ ನಡೆದ ಈದ್ ಮೆರವಣಿಗೆ ಸಂದರ್ಭದಲ್ಲಿ ನಾನು ಮಾತನಾಡಿರುವುದನ್ನು ಪೂರ್ಣವಾಗಿ ಪ್ರಸಾರ ಮಾಡದೆ ಕೆಲವರು ಅದನ್ನು ತಿರುಚಿ ಅಪಪ್ರಚಾರದಲ್ಲಿ ತೊಡಗಿದ್ದಾರೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸ್ಪಷ್ಟಪಡಿಸಿದ್ದಾರೆ.ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕ್ಷೇತ್ರದಲ್ಲಿ ಹಿಂದೂ-ಮುಸ್ಲಿಂ ಹಾಗೂ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟುಮಾಡುವ ನೀಚ ಬುದ್ದಿಯ ಬಿಜೆಪಿ, ಜೆಡಿಎಸ್‌ನವರ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರತಿಯೊಂದು ಧರ್ಮದಲ್ಲಿನ ಆಚರಣೆ, ಸಂಪ್ರದಾಯಗಳನ್ನು ಕಂಡಾಗ ಆ ಆಚರಣೆಗಳನ್ನು, ಆ ಸಂಪ್ರದಾಯಗಳನ್ನು ಅನುಭವಿಸಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತೇನೆ. ಎಲ್ಲಾ ಧರ್ಮಗಳಲ್ಲೂ ಹುಟ್ಟಬೇಕೆಂದು ಹೇಳುವುದು ಸಹಜ. ಇದೆ ರೀತಿ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕೆಂದು ಹೇಳಿರುವುದು ನಿಜ. ಆದರೆ ನಾನು ಮಾತನಾಡಿರುವುದನ್ನು ಪೂರ್ಣವಾಗಿ ಪ್ರಸಾರ ಮಾಡದೆ ಕೆಲವರು ನನ್ನ ಮಾತುಗಳನ್ನು ತಿರುಚಿದ್ದಾರೆ.ನಾನು ಮಾತನಾಡಿದ ಸಂದರ್ಭದಲ್ಲಿ ಇತರೆ ಧರ್ಮದವರು ಸಹ ಇದ್ದರು. ಹಿಂದೂ, ಮುಸ್ಲಿಂ, ಕ್ರೈಸ್ತರು, ದಲಿತರು, ಬೌದ್ಧರಾಗಿ ಹುಟ್ಟಬೇಕೆಂದು ಸಹ ಹೇಳಿದ್ದೇನೆ. ಕೆಲವು ಕೇಡಿಗೇಡಿಗಳು ನಾನು ಮಾತನಾಡಿರುವುದನ್ನು ತಿರುಚಿ ಧರ್ಮಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಸಫಲವಾಗುವುದಿಲ್ಲ ಎಂದರು.
ಕ್ಷೇತ್ರದ ನನ್ನ ಮತದಾರ ದೇವರುಗಳ ಆಶಿರ್ವಾದ ಇರುವವರೆಗೂ ಯಾರು ಸಹ ನನಗೆ ಏನು ಮಾಡಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ನಾನು ಕೈಗೊಳ್ಳುತ್ತಿರುವ ಒಳ್ಳೆಯ ಕಾರ್ಯಗಳನ್ನು ಜನರಿಗೆ ತಿಳಿಸದೆ, ನನ್ನ ಜನ ಬೆಂಬಲವನ್ನು ಸಹಿಸದೇ ಈ ರೀತಿ ಅಪಪ್ರಚಾರ ಮಾಡುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರ ಕಾಯಕವಾಗಿದೆ ಎಂದು ದೂರಿದರು.