ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಮತ್ತು ಕಾರ್ಯಕ್ರಮಕ್ಕೆ ಕೆಲವು ನಿರ್ಬಂಧ ಹೇರಿರುವ ಜಿಲ್ಲಾಡಳಿತದ ಧೋರಣೆಯನ್ನು ಖಂಡಿಸಿ ಬುಧವಾರ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷದ್-ಭಜರಂಗದಳದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾ ನೇತೃತ್ವವನ್ನು ಭಜರಂಗದಳದ ಜಿಲ್ಲಾ ಸಂಯೋಜಕ ರವಿಚಂದ್ರ ವಹಿಸಿ ಮಾತನಾಡಿ, ಈ ದೇಶದ ಬಹು ಸಂಖ್ಯಾತ ಹಿಂದೂಗಳ ಭಾವನಾತ್ಮಕ ಹಬ್ಬವಾಗಿರುವ ಗೌರಿ ಗಣೇಶ ಹಬ್ಬವಾಗಿದ್ದು ಈ ಹಬ್ಬಕ್ಕೆ ಆಧ್ಯಾತ್ಮಿಕವಾದ ಹಿನ್ನೆಲೆ ಇದ್ದು, ದೇಶಕ್ಕೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ದ ಹೋರಾಡಲು ದೇಶಭಕ್ತರನ್ನು ಸಂಘಟಿಸಲು ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಹಬ್ಬವನ್ನು ಜಾರಿಗೆ ತಂದರು. ಅಂದಿನಿಂದಲೂ ಸಹ ಗಣೇಶೋತ್ಸವವನ್ನು ಅದ್ಧೂರಿಯಾಗಿ ಸಮಸ್ತ ಹಿಂದೂ ಸಮಾಜ ಮಾಡಿಕೊಂಡು ಬರುತ್ತಿದೆ ಎಂದರು.
ಈ ಬಾರಿಯ ಗಣೇಶ ಉತ್ಸವದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ವಿಘ್ನ ನಿವಾರಕನ ಉತ್ಸವಕ್ಕೆ ರಾಜ್ಯ ಸರ್ಕಾರವು ಹಲವು ನಿಯಮಗಳನ್ನು ಜಾರಿಗೆ ತಂದಿದ್ದು ಇವುಗಳನ್ನು ಗಣೇಶನ ಭಕ್ತರ ಮೇಲೆ ಹೇರುತ್ತಿರುವುದು ಸರಿಯಲ್ಲ ಎಂದರು.ಚಿತ್ರದುರ್ಗದಲ್ಲಿ ಶನಿವಾರ ನಡೆಯಲಿರುವ ಗಣೇಶೋತ್ಸವದ ಶೋಭಾಯಾತ್ರೆಗೆ ಭಾಗವಹಿಸಲು ವಿಶ್ವಹಿಂದೂ ಪರಿಷದ್ ನ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಅವರು ಬರುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಅವರಿಗೆ ಚಿತ್ರದುರ್ಗ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಿರುವುದು ಯಾವ ನ್ಯಾಯ ಚಿತ್ರದುರ್ಗ ಏನು ಪಾಕಿಸ್ತಾನದಲ್ಲಿಯೇ? ಹಿಂದೂ ದೇಶದಲ್ಲಿ ಹಿಂದೂಗಳು ಸ್ವತಂತ್ರವಾಗಿ ಒಡಾಡಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ವಿಎಚ್‌ಪಿಯ ಅಧ್ಯಕ್ಷ ಮಾಚನಾಯ್ಕನಹಳ್ಳಿ ಜಯಣ್ಣ ಮಾತನಾಡಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಇನ್ನು ಹಲವು ಜಿಲ್ಲೆಗಳಲ್ಲಿ ಡಿಜೆಯನ್ನು ಬ್ಯಾನ್ ಮಾಡಿದ್ದು ಮದ್ದೂರು, ಸಾಗರ ಸೇರಿದಂತೆ ಇನ್ನು ಅನೇಕ ಸ್ಥಳಗಳಲ್ಲಿ ಗಣೇಶ ಮೂರ್ತಿಯ ಶೋಭಾಯಾತ್ರೆ ಹಾಗೂ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಹೊತ್ತಿರುವ ಕಿಡಿಗೇಡಿಗಳಿಂದ ಮೆರವಣಿಗೆಗಳ ಮೇಲೆ ಕಲ್ಲುತೂರಾಟ ನಡೆಯುತ್ತಿದೆ. ಇವರ ಮೇಲೆ ರಾಜ್ಯ ಸರ್ಕಾರ ಯಾವುದೇ ಬಲವಾದ ಕಾನೂನು ಕ್ರಮ ಕೈಗೊಂಡಿಲ್ಲ ಎಂದರು.ರಾಜ್ಯದಲ್ಲಿ ವಿಎಚ್‌ಪಿಯ ಅನೇಕ ಮುಖಂಡರ ಮೇಲೆ ವಿಧಿಸಿರುವ ಜಿಲ್ಲಾ ಪ್ರವೇಶ ನಿರ್ಬಂಧ ಆದೇಶವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದರಿಗೆ ಕಠಿಣ ಶಿಕ್ಷೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಮಸ್ತ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದರು.
ವಿವಿಧ ಹಿಂದೂ ಪರ ಸಂಘಟನೆಗಳ ಪ್ರಮುಖರಾದ ಮಂಜುನಾಥ್, ರಾಮು, ಬಲರಾಮ್, ಕಿರಣ್ ಕೋರಿಪ್ರಸಾದ್, ಹನುಮಂತ್ ಮಡಿವಾಳ್, ತರಕಾರಿ ಮಂಜುನಾಥ್, ವಿರೇಶ್, ಕಾಯಿ ಮಂಜುನಾಥ್, ಅಣ್ಣೋಜಿರಾವ್, ಸಿದ್ದನಗೌಡ, ಮಹೇಶ್ ಮೊದಲಾದವರು ಹಾಜರಿದ್ದರು.