ಸೋಮಸಾಗರದ ರಸ್ತೆಯ ಬದಿಯ ಜಮೀನುಗಳಲ್ಲಿನ ಕೃಷಿ ಸಾಮಗ್ರಿಗಳು ಮಾಯ
ಕನಕಗಿರಿ: ಹಲವು ತಿಂಗಳಿಂದ ಕಳ್ಳರ ಗುಂಪೊಂದು ಪಟ್ಟಣದ ಅಲ್ಲಲ್ಲಿ ಕೈಚಳಕ ತೋರಿಸುತ್ತಿದ್ದು, ಗುರುವಾರ ತಡರಾತ್ರಿ ಬೇಕರಿ ಹಾಗೂ ಎಸ್ಬಿಐ ಗ್ರಾಹಕರ ಸೇವಾ ಕೇಂದ್ರದಲ್ಲಿನ ಲಕ್ಷಾಂತರ ಹಣ ದೋಚಲಾಗಿದೆ.
ಬಿಜೆಪಿ ಮುಖಂಡನ ಸಹೋದರರೊಬ್ಬರು ಬೈಕ್ ನಲ್ಲಿ ಲಕ್ಷಾಂತರ ರೂ ಇಟ್ಟುಕೊಂಡು ಹೋಗುತ್ತಿರುವಾಗ ಹಗಲಲ್ಲೆ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಪ್ರಕರಣ ಮಾಸುವ ಮುನ್ನವೇ ಜ. 29ರ ತಡರಾತ್ರಿ ಮಾಚಿದೇವ ವೃತ್ತದ ಬಳಿಯ ಇರುವ ಎಚ್ಎಂಎಸ್ ಬೇಕರಿಗೆ ನುಗ್ಗಿದ ಕಳ್ಳರು ₹5 ಸಾವಿರ ನಗದು ಹಾಗೂ ಎಸ್ಬಿಐ ಗ್ರಾಹಕರ ಸೇವಾ ಕೇಂದ್ರದಲ್ಲಿನ ₹1.50 ಲಕ್ಷ ನಗದು ಹಣ ದೋಚಲಾಗಿದೆ.ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಠಾಣೆಯ ಕೂಗಳತೆ ಅಂತರದಲ್ಲಿರುವ ಮಾಚಿದೇವ ವೃತ್ತದಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷಾಂತರ ಕಳ್ಳತನವಾದರೂ ಪೊಲೀಸ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹಲವು ತಿಂಗಳಿಂದ ನಡೆಯುತ್ತಿರುವ ಈ ಕಳ್ಳತನಕ್ಕೆ ಕೆಲ ಪೊಲೀಸರೇ ಕಾವಲುಗಾರರಾಗಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ನಗರದ ನಿರ್ಲೂಟಿ ರಸ್ತೆ, ಮಾಚಿದೇವ ವೃತ್ತದ ಪ್ರದೇಶದಲ್ಲಿರುವ ಅಂಗಡಿ ಮುಂಗಟ್ಟು ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡಿರುವ ಕಳ್ಳರು ಈ ಹಿಂದೆ ರಾತ್ರೋರಾತ್ರಿ ನುಗ್ಗಿ ಹೊಡಿಬಡಿ ಮಾಡಿ ಹಣ ಸಾಮಗ್ರಿಗಳ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಗುರುವಾರ ಮಧ್ಯರಾತ್ರಿ ಬೇಕರಿ ಹಾಗೂ ಎಸ್ಬಿಐ ಬ್ಯಾಂಕಿನ ಸೇವಾ ಕೇಂದ್ರವನ್ನು ಟಾರ್ಗೆಟ್ ಮಾಡಿ ಒಂದುವರೆ ಲಕ್ಷ ಎಗರಿಸಿದ್ದಾರೆ. ಹಣ ದೋಚಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾದರೂ ಕಳ್ಳರನ್ನು ಬಂಧಿಸಲು ಪೊಲೀಸ್ ಇಲಾಖೆ ಮೌನವಹಿಸಿರುವುದೇಕೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.ಪಂಪ್ ಸೆಟ್ ಸಾಮಗ್ರಿ ಕಳವು: ಹಿರೇ ಹಳ್ಳದ ಬಸವೇಶ್ವರ ದೇಗುಲದ ಸುತ್ತಲಿನ ಹೊಲ,ತೋಟಗಳಲ್ಲಿನ ಬೊರವೆಲ್ ಕೇಬಲ್ ಸೇರಿದಂತೆ ಇನ್ನಿತರೆ ಸಾಮಗ್ರಿಗಳು ಕಳ್ಳತನವಾಗಿವೆ. ಅಲ್ಲದೇ ಲಕ್ಷ್ಮೀದೇವಿ ಕೆರೆಗೆ ಹೊಂದಿಕೊಂಡಿರುವ ಸೋಮಸಾಗರದ ರಸ್ತೆಯ ಬದಿಯ ಜಮೀನುಗಳಲ್ಲಿನ ಕೃಷಿ ಸಾಮಗ್ರಿಗಳು ಮಾಯವಾಗಿದ್ದು, ರೈತರು ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿ ಸಾಮಗ್ರಿಗಳ ಕಳ್ಳತನ ಮಾಡಿರುವವರನ್ನು ಬಂಧಿಸುವಂತೆ ರೈತ ಸಂಘ ಈ ಹಿಂದೆ ಮಾಡಿಕೊಂಡಿರುವ ಮನವಿಗೆ ಪೊಲೀಸ್ ಇಲಾಖೆ ಸ್ಪಂದಿಸುತ್ತಿಲ್ಲ. ಹೀಗೆ ನಿತ್ಯವೂ ರೈತರ ಹೊಲ, ತೋಟಗಳಿಗೆ ನುಗ್ಗಿ ಕೃಷಿ ಸಾಮಗ್ರಿಗಳ ಕಳ್ಳತನವಾಗುತ್ತಿರುವುದು ಮುಂದುವರೆದಿದ್ದು, ರೈತ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗಿವೆ.
ಎಸ್ಬಿಐ ಗ್ರಾಹಕರಿಗೆ ಹಣ ನೀಡುವುದಕ್ಕಾಗಿ ಸೇವಾ ಕೇಂದ್ರದ ಡ್ರಾದೊಳಗೆ ₹1.50 ಲಕ್ಷ ಇಡಲಾಗಿತ್ತು. ಆದರೆ, ಕಳ್ಳರಿಬ್ಬರು ಕೇಂದ್ರದ ಸೆಟ್ರಸ್, ಬೀಗ ಮುರಿದು ಎಲ್ಲ ಹಣ ದೋಚಿಕೊಂಡು ಹೋಗಿದ್ದಾರೆ. ಕಳ್ಳತನ ಮಾಡುವ ವಿಡಿಯೋಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಪುಟೇಜ್ ನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಎಸ್ಬಿಐ ಸೇವಾ ಕೇಂದ್ರದ ಮಾಲೀಕ ವಿರೇಶ ತಿಳಿಸಿದ್ದಾರೆ.ಕನಕಗಿರಿ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಇಲಾಖೆ ಸನ್ನದ್ಧವಾಗಿದೆ.ಸಾರ್ವಜನಿಕರ ಹಿತ ಕಾಯುವುದು ನಮ್ಮ ಧ್ಯೇಯವಾಗಿದೆ. ಕಳ್ಳರ ಗುಂಪನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ವರಿಷ್ಠಾಧಿಕಾರಿ ರಾಮ್ ಎಲ್.ಅರಸಿದ್ಧಿ ತಿಳಿಸಿದ್ದಾರೆ.