ಯಲ್ಲಾಪುರ ಪಟ್ಟಣದ ವಿಶ್ವದರ್ಶನದ ಕೇಂದ್ರೀಯ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಂಸ್ಕಾರ ದೀಕ್ಷಾ ಕಾರ್ಯಕ್ರಮದಲ್ಲಿ ಕರಡೊಳ್ಳಿ ಗೋವರ್ಧನ ಗೋಶಾಲೆಯ ಕಾರ್ಯದರ್ಶಿ ಗಣಪತಿ ಭಟ್ಟ ಕೋಲಿಬೇಣ ಮಾರ್ಗದರ್ಶನ ನೀಡಿದರು.
ಯಲ್ಲಾಪುರ: ಇಂದು ಜಗತ್ತು ಬದಲಾಗಿದೆ. ಸುದೀರ್ಘವಾದ ಜೀವನದಿಂದ ಸಾರ್ಥಕಗೊಳ್ಳಬೇಕಾದ ಮಕ್ಕಳು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಕುಟುಂಬದಲ್ಲಿದ್ದ ಬದ್ಧತೆ, ಭಾವುಕತೆ ಇಂದಿಲ್ಲ ಎಂದು ಕರಡೊಳ್ಳಿ ಗೋವರ್ಧನ ಗೋಶಾಲೆಯ ಕಾರ್ಯದರ್ಶಿ ಗಣಪತಿ ಭಟ್ಟ ಕೋಲಿಬೇಣ ಹೇಳಿದರು.
ಪಟ್ಟಣದ ವಿಶ್ವದರ್ಶನದ ಕೇಂದ್ರೀಯ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಂಸ್ಕಾರ ದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬದುಕಿನಲ್ಲಿ ಬರುವ ಪ್ರತಿಯೊಂದು ಪಾತ್ರಗಳೂ ಮುಖ್ಯ. ಕುಟುಂಬದಲ್ಲಿ ತಂದೆ-ತಾಯಿಗಳು ಎಲ್ಲ ಸಂಬಂಧಗಳಿಗೂ ಪೀಠವಾಗಿ ನಿಲ್ಲುತ್ತವೆ. ನಮ್ಮೊಳಗಿನ ವಿಶಿಷ್ಟ ಚಿಂತನೆಗಳೊಂದಿಗೆ ಭಾರತ ವಿಶ್ವಗುರುವಾಗಬೇಕು ಎಂದು ಹೇಳಿದರು.ರಾಮ ಕೇವಲ ವ್ಯಕ್ತಿತ್ವವಲ್ಲ, ಅದು ಒಂದು ಜೀವನಕ್ರಮ. ಹೆತ್ತೊಡಲು, ಹೊತ್ತೊಡಲು ಮುಖ್ಯ ಎಂದ ರಾಮನ ಸಂದೇಶ ಇಂದಿಗೂ ನಮ್ಮೊಂದಿಗಿದೆ. ಇಂದು ಮಕ್ಕಳಿಗೆ ಸೀಮಿತ ಚೌಕಟ್ಟುಗಳಿಲ್ಲ. ವಿಶ್ವಮಟ್ಟದಲ್ಲಿ ಹೆಸರು ಮಾಡುವ ಅವಕಾಶವಿದ್ದರೂ ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ನಮ್ಮ ಮೂಲವನ್ನು ಮರೆಯಬಾರದು. ಸಂಸ್ಕಾರದ ಹಾದಿಯಲ್ಲಿ ನಾವು ಭಾರತ ಮಾತೆಯ ಮಡಿಲಿನಲ್ಲಿ ಸಾರ್ಥಕತೆ ಕಾಣಬೇಕು ಎಂದರು.
ಸಂಸ್ಕಾರ ಎಂದರೆ ದೋಷಗಳನ್ನು ದೂರ ಮಾಡುವುದು. ನಮ್ಮ ದೋಷಗಳ ಜತೆ ಸಮಾಜದ ದೋಷಗಳೂ ಕೂಡಾ ದೂರವಾಗಬೇಕು. ವಿಶಿಷ್ಟವಾದ ಕರ್ತವ್ಯದಲ್ಲಿ ಸಾಗುವಾಗ ಅಧ್ಯಯನ, ತಿಳಿವಳಿಕೆ, ವಿವೇಕಪ್ರಜ್ಞೆಯ ಚಿತ್ತದಲ್ಲಿರಬೇಕು. ನಮ್ಮಲ್ಲಿರುವ ಪ್ರಜ್ಞಾಶಕ್ತಿಯನ್ನು ಬಳಸಿಕೊಳ್ಳಬೇಕು. ಸನಾತನ ಧರ್ಮವು ಏನನ್ನು ಪಡೆದಿದ್ದೇವೆಯೋ ಅದನ್ನು ದ್ವಿಗುಣವಾಗಿ ಸಮರ್ಪಿಸಬೇಕು ಎಂದು ಹೇಳುತ್ತದೆ. ಮಕ್ಕಳಿಗೆ ಉತ್ತಮವಾದದ್ದನ್ನು ಕೊಡಲು ತಂದೆ-ತಾಯಿ ಸಾಕಷ್ಟು ತ್ಯಾಗ ಮಾಡುತ್ತಾರೆ. ಅವರ ಮನಸ್ಸಿಗೆ ನೋವಾಗದಂತೆ ಬದುಕಿದಾಗ ಮಾತ್ರ ಜೀವನ ಸಾರ್ಥಕ. ತಂದೆ-ತಾಯಿಗಳು ಬೈದರೂ ಅದರಲ್ಲಿ ಪ್ರೀತಿ ಇರುತ್ತದೆ. ತಂದೆ-ತಾಯಿಗಳ ಪ್ರೀತಿಯ ಬಂಧನವೇ ಮಕ್ಕಳಿಗೆ ರಕ್ಷಾಕವಚ ಎಂದರು.ವಿಶ್ವದರ್ಶನ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ದೇಶಕ್ಕೆ ರಾಜನಾದರೂ ತಂದೆ ತಾಯಿಗೆ ಮಗ ಎನ್ನುವ ಮಾತಿದೆ. ಜ್ಞಾನಕ್ಕೆ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ. ಎಲ್ಲ ಸಂಪತ್ತುಗಳಿಗೂ ಭೂಷಣ, ಗೌರವ ಬೇಕಾದರೆ ಅದಕ್ಕೆ ಜ್ಞಾನ ಇರಬೇಕು. ಜ್ಞಾನ ಎನ್ನುವುದಕ್ಕೆ ಸಂಸ್ಕಾರದ ಲೇಪನ ಬೇಕು. ನಮ್ಮ ಭವಿಷ್ಯ ನಮಗೆ ತಿಳಿಯದೇ ಇದ್ದರೂ ಅದನ್ನು ನಿರ್ಮಿಸುವ ಶಕ್ತಿ ಇದ್ದರೆ ಅದಕ್ಕೆ ನಾವು ವಿಧೇಯರಾಗಿರಬೇಕು. ಪರಿಶ್ರಮದೊಟ್ಟಿಗೆ ಶ್ರದ್ದೆ, ಭಕ್ತಿಯೂ ಇರಬೇಕು. ಮನೆಯಲ್ಲಿ ತಂದೆ-ತಾಯಿಗೆ ಗೌರವದಿಂದ ನಡೆದುಕೊಳ್ಳುವವರು ಯಶಸ್ಸನ್ನು ಪಡೆಯುತ್ತಾರೆ ಎಂದರು.
ಚಾರ್ಟರ್ಡ್ ಅಕೌಂಟಂಟ್ ವಿಘ್ನೇಶ್ವರ ಗಾಂವ್ಕರ ಮಾತನಾಡಿ, ಪರೀಕ್ಷೆಯೇ ಜೀವನವಲ್ಲ. ಪರೀಕ್ಷೆ ಹೊರತಾದ ಸಾಕಷ್ಟು ವಿಷಯಗಳಿವೆ. ಅವುಗಳಲ್ಲಿ ಸಂಸ್ಕಾರವೂ ಒಂದು. ತಂದೆ-ತಾಯಿಗಳ ಋಣವನ್ನು ಈ ಮೂಲಕ ಸ್ಮರಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಳ್ಳೆಯ ಹೆಸರು ಸಂಪಾದಿಸುವುದರೊಟ್ಟಿಗೆ ತಂದೆ-ತಾಯಿಗಳ ಜವಾಬ್ದಾರಿಯನ್ನೂ ನಿಭಾಯಿಸಬೇಕು ಎಂದರು.ವಿದ್ಯಾರ್ಥಿಗಳು ತಂದೆ-ತಾಯಿಯರ ಪಾದಪೂಜೆ ಮಾಡಿದರು. ಭಾರತ ಮಾತೆ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ವಿಶ್ವದರ್ಶನ ಕೇಂದ್ರೀಯ ಶಾಲೆಯ ಶಿಕ್ಷಕರು, ಪಾಲಕರು, ಹತ್ತನೇ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಮಹಾದೇವಿ ಭಟ್ಟ ಸ್ವಾಗತಿಸಿದರು. ಭುವನಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಅಧ್ಯಾಪಕಿ ವನಿತಾ ಭಾಗ್ವತ್ ನಿರ್ವಹಿಸಿದರು.