ಸಾರಾಂಶ
ಧಾರವಾಡ: ಇಲ್ಲಿಯ ಮಂಗಳವಾರಪೇಟೆಯ ಕಟ್ಟಿಮಠ ಮನೆತನವು ಮಹಾನವಮಿ ನಿಮಿತ್ತ ಒಂಬತ್ತು ದಿನಗಳ ಕಾಲ ವಿಶಿಷ್ಟ್ಯವಾಗಿ ದೇವಿ ಆರಾಧನೆ ಮಾಡುತ್ತಿದ್ದು, ಈ ವರ್ಷ ಶಕ್ತಿ ಕಲ್ಪನೆಯಲ್ಲಿ ದೇವಿ ಆರಾಧನೆಗೆ ಸಿದ್ಧತೆಗಳು ಪೂರ್ಣಗೊಂಡಿವೆ.
ಕಿತ್ತೂರು ಸಂಸ್ಥಾನ ಮಠದೊಂದಿಗೆ ಸಂಪರ್ಕ ಹೊಂದಿದ್ದ ಕಟ್ಟಿಮಠ ಮನೆತನಕ್ಕೆ ಪುರಾತನ ಇತಿಹಾಸವಿವೆ. ಈ ಕುಟುಂಬದ ಕಾರ್ತಿಕ್ ಎಂಬುವರು ಕಳೆದ 16 ವರ್ಷಗಳಿಂದ ತಮ್ಮ ಮನೆತನದ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ. ಕಾರ್ತಿಕ್ ವೃತ್ತಿಯಲ್ಲಿ ಎಂಜಿನಿಯರ್. ಕಾನ್ಪುರದಲ್ಲಿ ಐಐಟಿ ಮುಗಿಸಿ ಸದ್ಯ ಮುಂಬೈನಲ್ಲಿ ರಿಲೈನ್ಸ್ ಕಂಪನಿಯಲ್ಲಿ ಡಿಸೈನ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಪ್ರತಿ ವರ್ಷ ದೇವಿ ಆರಾಧನೆ ಹಿನ್ನೆಲೆಯಲ್ಲಿ ತಿಂಗಳಾಗುಟ್ಟಲೇ ಧಾರವಾಡಕ್ಕೆ ಆಗಮಿಸಿ ಒಂಬತ್ತು ದಿನಗಳ ಕಾಲ ಸ್ವತಃ ದೇವಿಗೆ ಅಲಂಕಾರ ಮಾಡಿ ಧಾರವಾಡದ ಜನತೆ ಕಣ್ತುಂಬಿಕೊಳ್ಳುವಂತೆ ಮಾಡುತ್ತಾರೆ.ಐಐಟಿ ಅಂತಹ ಉನ್ನತ ಶಿಕ್ಷಣ ಪಡೆದ ಈಗಿನ ಯುವ ಜನತೆ ಪೂಜೆ- ಪುನಸ್ಕಾರ, ಸಂಪ್ರದಾಯ, ಹಬ್ಬ-ಹರಿದಿನಗಳಲ್ಲಿ ಆಸಕ್ತಿಗಿಂತ ನಿರಾಸಕ್ತಿಯೇ ಜಾಸ್ತಿ. ಅಂತಹ ವಾತಾವರಣದಲ್ಲಿ ಕಾರ್ತಿಕ್ ನವರಾತ್ರಿ ಉತ್ಸವದಲ್ಲಿ ಪ್ರತಿ ವರ್ಷ ಒಂದೊಂದು ಕಲ್ಪನೆಯಲ್ಲಿ ಒಂಬತ್ತು ದಿನಗಳ ಕಾಲ ದೇವಿ ಮೂರ್ತಿ ಸಿದ್ಧಪಡಿಸುವುದು, ಅಲಂಕಾರ ಸೇರಿದಂತೆ ದೇವಿ ಆರಾಧನೆ ಮಾಡುತ್ತಿದ್ದಾರೆ. ಈಗಾಗಲೇ ಈ ಹಿಂದಿನ ವರ್ಷಗಳಲ್ಲಿ ತೀರ್ಥ, ನವರಸ, ವಾರಣಾಸಿ ಅಂತಹ ಕಲ್ಪನೆಯಲ್ಲಿ ದೇವಿ ಮೂರ್ತಿ ಪೂಜಿಸಿದ್ದು, ಈ ಬಾರಿ ಶಕ್ತಿ ಕಲ್ಪನೆಯಲ್ಲಿ ದೇವಿ ಪೂಜೆಗೆ ಸಿದ್ಧರಾಗಿದ್ದಾರೆ. ಬರೀ ಅಲಂಕಾರ ಮಾತ್ರವಲ್ಲದೇ ಪ್ರತಿ ಬಾರಿ ದರ್ಶನ ಪಡೆಯುವ ಸಾವಿರಾರು ಭಕ್ತರಿಗೆ ದೇವಿಯ ಅವತಾರಗಳ ಬಗ್ಗೆಯೂ ಕಾರ್ತಿಕ್ ಮಾಹಿತಿ ನೀಡುತ್ತಾರೆ ಎಂಬುದು ವಿಶೇಷವೇ ಸರಿ.
ಇದು ರಾಜಗುರು ಮನೆತನ: ಕಟ್ಟಿಮಠವು ಕಿತ್ತೂರು ಸಂಸ್ಥಾನದ ರಾಜಗುರು ಮನೆತನ. ಕಟ್ಟಿಮಠದ ಮೂಲಪುರುಷ ಸದ್ಗುರು ರಾಚೋಟೇಶ್ವರ ಸ್ವಾಮೀಜಿ (ಹುಚ್ಚಪ್ಪಜ್ಜನವರು)ಗೆ ದೊರೆ ಮಲ್ಲಸರ್ಜನನಿಂದ ಅವಮಾನಗೊಂಡು ಅವರಿಗೆ ಶಾಪಕೊಟ್ಟು ಧಾರವಾಡ ದಾರಿ ಹಿಡಿದು ದಾರಿ ಮಾರ್ಗದ ಮಾಧನಬಾವಿ ಬಳಿ ಸಮಾಧಿಸ್ಥರಾಗುತ್ತಾರೆ. ಅಲ್ಲಿಂದ ಈ ಮನೆತನ ಸಮೀಪದ ಧಾರವಾಡದಲ್ಲಿ ವಾಸವಾಗುತ್ತದೆ. ಸುಮಾರು 200 ವರ್ಷಗಳ ಮನೆ ಇದಾಗಿದ್ದು, ಪ್ರತಿ ದಸರಾದಲ್ಲಿ ದೇವಿ ಆರಾಧನೆ ವಿಶೇಷವಾಗಿ ನಡೆಯುತ್ತದೆ. ಪೂಜೆ- ಆರಾಧನೆ, ಸಂಗೀತ ಕಾರ್ಯಕ್ರಮ, ಪ್ರವಚನ, ಕಲಾವಿದರಿಗೆ ಗೌರವ, ಒಂಬತ್ತು ದಿನಗಳಕಾಲ ಪ್ರಸಾದ ವ್ಯವಸ್ಥೆಯೂ ಇರುತ್ತದೆ. ಕೊನೆ ದಿನ ಹುಬ್ಬಳ್ಳಿಯ ಮೂರುಸಾವಿರಮಠದ ಸ್ವಾಮೀಜಿ ಅವರಿಂದ ಆಶೀರ್ವಚನ ಇರಲಿದೆ ಎಂದು ಕಟ್ಟಿಮಠದ ವ್ಯವಸ್ಥಾಪಕರಾದ ವೀರೇಶ ಕಟ್ಟಿಮಠ, ಪ್ರೊ. ವಿಜಯಲಕ್ಷ್ಮಿ ಕಟ್ಟಿಮಠ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಸೆ. 22 ರಿಂದ ಅ. 2ರ ವರೆಗೆ ಧಾರವಾಡದ ಕಟ್ಟಿಮಠದಲ್ಲಿ ನಡೆಯುವ ದೇವಿಪೂಜೆ
ಸೆ. 22ರ ಸೋಮವಾರ - ಮಹಾಮಾಯೆಸೆ. 23ರ ಮಂಗಳವಾರ - ಜಗದ್ದಾತ್ರಿ
ಸೆ. 24ರ ಬುಧವಾರ - ಸರಸ್ವತಿಸೆ. 25ರ ಗುರುವಾರ - ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ (ಖಾದಿ ಪೂಜಾ)
ಸೆ. 26ರ ಶುಕ್ರವಾರ - ಕೊಲ್ಲಾಪೂರ ಶ್ರೀ ಮಹಾಲಕ್ಷ್ಮಿ (ಪಂಕಪೂಜಾ)ಸೆ. 27ರ ಶನಿವಾರ - ಭೈರವಿ
ಸೆ. 28ರ ಭಾನುವಾರ - ಅಪರಾಜಿತ ದುರ್ಗಾಸೆ. 29ರ ಸೋಮವಾರ - ಅಪರಾಜಿತ ದುರ್ಗಾ (ದೀಪ ದುರ್ಗಾಪೂಜಾ)
ಸೆ. 30 ಮಂಗಳವಾರ - ಅಪರಾಜಿತ ದುರ್ಗಾ (ಸಂಧೀ ಪೂಜಾ)ಅ. 1 ಬುಧವಾರ - ಅಪರಾಜಿತ ದುರ್ಗಾ (ದುರ್ಗೋತ್ಸವ ಪೂಜಾ)
ಅ. 2ರ ಗುರುವಾರ ಅಪರಾಜಿತ ದುರ್ಗಾ (ವಿಜಯದಶಮಿ ಪೂಜಾ).