ಕಲ್ಯಾಣ ಕರ್ನಾಟಕದ‌ ಮಕ್ಕಳಲ್ಲಿ ವಿಶೇಷ ಸೃಜನಶೀಲತೆ ಇದೆ: ನಳಿನ್‌ ಅತುಲ್‌

| Published : Sep 21 2025, 02:00 AM IST

ಕಲ್ಯಾಣ ಕರ್ನಾಟಕದ‌ ಮಕ್ಕಳಲ್ಲಿ ವಿಶೇಷ ಸೃಜನಶೀಲತೆ ಇದೆ: ನಳಿನ್‌ ಅತುಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕದ‌ ಮಕ್ಕಳಲ್ಲಿ ವಿಶೇಷ ಸೃಜನಶೀಲತೆ ಇದೆ.

ಚಿಗುರು ಸಾಹಿತ್ಯ ಶಿಬಿರ ಉದ್ಘಾಟಿಸಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ಕಲ್ಯಾಣ ಕರ್ನಾಟಕದ‌ ಮಕ್ಕಳಲ್ಲಿ ವಿಶೇಷ ಸೃಜನಶೀಲತೆ ಇದೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ನಳಿನ್‌ ಅತುಲ್ ಹೇಳಿದರು.

ನಗರದ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿಗುರು ಸಾಹಿತ್ಯ ಶಿಬಿರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಲ್ಲಿನ ಮಕ್ಕಳು ಕ್ರಿಯಾಶೀಲವಾಗಿ ಯೋಚಿಸುತ್ತಾರೆ. ಬೆಂಗಳೂರು ಮೂಲದ ಎನ್‌ಜಿಒ ಒಂದು ಸಂಗ್ರಹಿಸಿದ ಕ್ರಿಯಾಶೀಲ ಯೋಜನೆಗಳಲ್ಲಿ ಬೆಂಗಳೂರು ವಿಭಾಗದ 18, ಕಲಬುರ್ಗಿ ವಿಭಾಗದ ಯಾದಗಿರಿ ಜಿಲ್ಲೆಯ 22 ಯೋಜನೆ ಆಯ್ಕೆಗೊಂಡಿದ್ದು, ಇದರಲ್ಲಿ ಅತ್ಯಂತ ಹಿಂದುಳಿದ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ ಸೃಜನಶೀಲತೆಯಲ್ಲಿ ಬೆಂಗಳೂರಿಗಿಂತಲೂ ಮುಂದಿದೆ ಎಂಬುದನ್ನು ಒತ್ತಿ ಹೇಳಿದರು. ಈ ಭಾಗದ ಶೈಕ್ಷಣಿಕ ವಾತಾವರಣವನ್ನು ಉತ್ತಮಪಡಿಸಲು ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಗುಣಾತ್ಮಕ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತಿದೆ. ಇಡೀ ರಾಜ್ಯದಲ್ಲಿ ಎಲ್ಲಿಯೂ ಕೈಗೊಳ್ಳದ ಮಾದರಿ ಉಪಕ್ರಮವನ್ನು ಹಗರಿಬೊಮ್ಮನಹಳ್ಳಿಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವುದನ್ನು ಪ್ರಶಂಸಿಸಿದರು.

ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿನ ವಿಷಯಗಳಿಗೆ ಸೀಮಿತರಾಗದೆ, ಗ್ರಂಥಾಲಯ, ಕ್ರಿಯಾ ಯೋಜನೆಗಳು, ಸಾಹಿತ್ಯ ಹಾಗೂ ಕಲಾ ಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮಕ್ಕಳೊಂದಿಗೆ ಸಂವಾದ:

ನಮ್ಮ ಶಾಲೆಗಳ ಮೇಲ್ಚಾವಣಿ ಮಳೆಯಿಂದ ಸೋರುತ್ತಿವೆ, ಇದಕ್ಕೆ ಪರಿಹಾರವೇನೆಂದು ಕೇಳಿದ ವಿದ್ಯಾರ್ಥಿನಿಗೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.ನಾನು ನಿಮ್ಮ ಹಾಗೆ ಐಎಎಸ್ ಅಧಿಕಾರಿಯಾಗಬೇಕಾದರೆ ಏನು ಮಾಡಬೇಕು ಎಂದು ಕೇಳಿದ ಹುಡುಗನಿಗೆ, ನಿಮ್ಮಂತೆ ಕ್ರಿಯಾಶೀಲವಾಗಿ ಆಲೋಚನೆ ಮಾಡುವವರು ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿ ಛಲ ಬಿಡದೆ ಪ್ರಯತ್ನ ಪಟ್ಟರೆ ಖಂಡಿತ ಐಎಎಸ್ ಅಧಿಕಾರಿ ಆಗಬಹುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಇಒ ಮೈಲೇಶ ಬೇವೂರ್, ಎಲ್ಲಾ ಮಕ್ಕಳು 21ನೇ ಶತಮಾನದ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪ್ರಬಲವಾಗಿ ಪ್ರತಿಪಾದಿಸುತ್ತದೆ.

ಈ ನಿಟ್ಟಿನಲ್ಲಿ ನಮ್ಮ ಹಗರಿಬೊಮ್ಮನಹಳ್ಳಿ ತಾಲೂಕು ಇನ್ನು ಒಂದು ಹೆಜ್ಜೆ ಮುಂದಕ್ಕೆ ಸಾಗಿ, ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ಬಣ್ಣದ ಹೆಜ್ಜೆ ತ್ರೈ ಮಾಸಿಕ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸುತ್ತಾ, ಶಾಲೆ ಮತ್ತು ಮಕ್ಕಳ ಕೈಗೆ ತಲುಪಿಸಲಾಗುತ್ತಿದೆ. ಪತ್ರಿಕೆಯ ಗುಣಮಟ್ಟ ಹೆಚ್ಚಿಸಲು ತಾಲೂಕಿನ ಮಕ್ಕಳಿಗೆ ಕತೆ, ಕಾವ್ಯ, ಲೇಖನ, ಚಿತ್ರಕಲಾ ರಚನೆಯ ಕುರಿತಾಗಿ ಚಿಗುರು ಸಾಹಿತ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. 292 ಮಕ್ಕಳು ಭಾಗವಹಿಸಿದ್ದು, ಮಕ್ಕಳಿಗೆ ಇಂತಹ ಸೃಜನಶೀಲ ಶಿಬಿರಗಳು ಅಗತ್ಯವಿದೆ ಎಂಬುದನ್ನು ಇಲ್ಲಿ ಗಮನಿಸಬಹುದು ಎಂದು ಹೇಳಿದರು.

ಶಿಬಿರಕ್ಕೆ ನೆರವು ನೀಡಿದ ಅಮೃತ್ ಪ್ರಿಂಟರ್ ಮಾಲೀಕ ಮಂಜುನಾಥ, ಬಿಸಿಊಟದ ಎಡಿ ರಾಜಕುಮಾರ್ ನಾಯ್ಕ್, ಮಕ್ಕಳ ಸಾಹಿತಿಗಳಾದ ಚಂದ್ರಗೌಡ ಕುಲಕರ್ಣಿ, ಡಾ. ನಿಂಗು ಸೊಲಗಿ ಅವರಿಗೆ ಸನ್ಮಾನಿಸಲಾಯಿತು.ಇದೇ ವೇಳೆ ಮಕ್ಕಳ ಸಾಹಿತಿ ಡಾ. ಪರಮೇಶ್ವರಯ್ಯ ಸೊಪ್ಪಿಮಠ ಅವರ ಮೊಗ್ಗು ಅರಳುವ ಸಮಯ ಕೃತಿ ಲೋಕಾರ್ಪಣೆ ಮಾಡಲಾಯಿತು. ಬಿಆರ್‌ಸಿ ಪ್ರಭಾಕರ್, ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ಪ್ರೌಢಶಾಲಾ ಸಹ ಶಿಕ್ಷಕರ‌ ಸಂಘದ ಅಧ್ಯಕ್ಷ ರವಿಚಂದ್ರ ನಾಯ್ಕ್, ಪ್ರಾಥಮಿಕ ಶಿಕ್ಷಕರ ಸಂಘದ ಬಿ.ಕೊಟ್ರಪ್ಪ, ಸಂಪನ್ಮೂಲ ವ್ಯಕ್ತಿಗಳಾದ ದ್ವಾರಕೀಶ ರೆಡ್ಡಿ, ಕಲಬುರಗಿಯ ರವೀಂದ್ರ ರುದ್ರವಾಡಿ, ಪೆನ್ಸಿಲ್ ಕೊಟ್ರೇಶ, ಆರ್‌.ಬಿ. ಗುರುಬಸವರಾಜ, ಕೆ.ಎಚ್. ಗಂಗಾಧರ, ಬಿ.ಎಚ್‌.ಎಂ. ಗುರುಬಸವರಾಜ, ಶಿವಕುಮಾರ್ ಹಾದಿಮನಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಬಿಆರ್‌ಪಿಗಳು, ಸಿಆರ್‌ಪಿಯವರು ವಿವಿಧ ಶಾಲೆ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.