ಲಕ್ಷ್ಮೇಶ್ವರ: ನಮಗೆ ಉಸಿರಿಗೆ ಉಸಿರಾಗಿರುವ ಪರಿಸರವನ್ನು ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಪರಿಸರ ಉಳಿದರೆ ಮಾತ್ರ ಭೂಮಿ ಮೇಲೆ ಜೀವಿಗಳು ಉಳಿಯಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು ಎಂದು ವಕೀಲ ಬಿ.ಎಸ್. ಬಾಳೇಶ್ವರಮಠ ತಿಳಿಸಿದರು.

ಪಟ್ಟಣದ ಬಾಳೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಪರಿಸರ ದಿನಾಚರಣೆ ಅಂಗವಾಗಿ ಮೈತ್ರಿ- ೮೫ ಬಳಗದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಘ- ಸಂಸ್ಥೆಗಳು ಇದ್ದು, ಅವು ಪರಿಸರ ಉಳಿಸಲು ಮುಂದಾಗಬೇಕಾದ ಅನಿವಾರ್ಯತೆ ಉದ್ಭವಿಸಿದೆ. ಸಂಘ- ಸಂಸ್ಥೆಗಳ ಸದಸ್ಯರು ಹೆಚ್ಚೆಚ್ಚು ಗಿಡ- ಮರ ಬೆಳೆಸುವ ಮೂಲಕ ಪರಿಸರ ಬೆಳೆಸಲು ಪ್ರತಿಜ್ಞೆ ಮಾಡಬೇಕು. ಈ ನಿಟ್ಟಿನಲ್ಲಿ ಬಳಗ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಸಿಗಳನ್ನು ಹೆಚ್ಚಿಕೊಂಡು ಬರುತ್ತಿರುವ ಮೈತ್ರಿ- ೮೫ ಬಳಗದ ಕೆಲಸ ಶ್ಲಾಘನೀಯ ಎಂದರು.ಬಳಗದ ಅಧ್ಯಕ್ಷ ಸುರೇಶ ಚೋಟಗಲ್ಲ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ನಮ್ಮ ಮೈತ್ರಿ- ೮೫ ಬಳಗದ ವತಿಯಿಂದ ಪರಿಸರ ದಿನಾಚರಣೆಯಂದು ಸಸಿ ಹಚ್ಚಿಕೊಂಡು ಬರುತ್ತಿದ್ದೇವೆ. ನಾವು ಹಚ್ಚಿದ ಸಸಿಗಳು ಹೆಮ್ಮರವಾಗಿ ಬೆಳೆದು ನೆರಳು ನೀಡುತ್ತಿರುವುದು ಶ್ರಮವನ್ನು ಸಾರ್ಥಕ ಮಾಡಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಮತ್ತಷ್ಟು ಗಿಡಗಳನ್ನು ಬೆಳೆಸಲು ನಿರ್ಧರಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬಳಗದ ಸದಸ್ಯ ಬಸವರಾಜ ಹೆಬ್ಬಾಳ, ಮೌನೇಶ ಬಾಲೇಹೊಸೂರ, ಮಾಬಳೇಶ್ವರ ಮೇಡ್ಲೇರಿ, ನಾಗರಾಜ ಹಣಗಿ, ಚಂದ್ರಶೇಖರ ವಡಕಣ್ಣವರ, ಶೇಖರಗೌಡ ಪಾಟೀಲ, ಯಲಪ್ಪ ಮಾಚೇನಹಳ್ಳಿ, ಮೌನೇಶ ಹವಳದ, ಖಾಜಾಮೈನುದ್ದೀನ ಫಿರ್ಜಾದೆ, ರುದ್ರಗೌಡ ಪಾಟೀಲ, ಶಿವಶಂಕರ ಯರ್ಲಗಟ್ಟಿ, ಸೋಮನಗೌಡ ಪಾಟೀಲ ಇದ್ದರು. ಲಂಡಿಹಳ್ಳದ ಕಸ ಕಡ್ಡಿ ಸ್ವಚ್ಛಗೊಳಿಸಲು ಆಗ್ರಹ

ಲಕ್ಷ್ಮೇಶ್ವರ: ಪಟ್ಟಣದ ಕೆಂಚಲಾಪುರ ಓಣಿ, ಭಜಂತ್ರಿ ಓಣಿ, ಬನಶಂಕರಿ ಬಡಾವಣೆ, ಹಳ್ಳದಕೇರಿ ಓಣಿಯ ಪಕ್ಕದಲ್ಲಿ ಹರಿಯುತ್ತಿರುವ ಲಂಡಿ ಹಳ್ಳದಲ್ಲಿ ಕಳೆದ ಹಲವು ವರ್ಷಗಳಿಂದ ಗಿಡ ಗಂಟಿಗಳು ಬೆಳೆದು ಹಳ್ಳದಲ್ಲಿ ಮಳೆ ನೀರು ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಗೋಳು ಹೇಳತೀರದಾಗಿದೆ. ಹಳ್ಳದ ನೀರು ಹಲವು ಬಾರಿ ಹತ್ತಿರ ಇರುವ ಮನೆಗಳಿಗೆ ನುಗ್ಗಿ ಮನೆಯಲ್ಲಿ ಇದ್ದ ವಸ್ತುಗಳು ಹಾಳಾಗಿ ಹೋಗಿರುವ ಉದಾಹರಣೆಗಳು ಇವೆ. ಮಳೆಯ ನೀರಿನಲ್ಲಿ ದನಕರುಗಳು ಹಾಗೂ ಮನುಷ್ಯರು ತೇಲಿ ಹೋದ ಉದಾಹರಣೆಗಳು ಇವೆ.ಮಳೆಯ ನೀರಿನ ಜತೆ ಹಾವು, ಚೇಳುಗಳು ಮನೆಯೊಳಗೆ ಬಂದ ಉದಾಹರಣೆಗಳು ಯಥೇಚ್ಛವಾಗಿವೆ. ಈ ಕುರಿತು ಸಾಕಷ್ಟು ಬಾರಿ ಇಲ್ಲಿನ ನನಿವಾಸಿಗಳು ಪುರಸಭೆ ಆಡಳಿತ ಮಂಡಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಒಂದು ವಾರದಲ್ಲಿ ಲಂಡಿ ಹಳ್ಳದಲ್ಲಿನ ಕಸ ಹಾಗೂ ಗಿಡ ಗಂಟಿ ಸ್ವಚ್ಛಗೊಳಿಸದೇ ಹೋದಲ್ಲಿ, ಪುರಸಭೆ ಅಧಿಕಾರಿಗಳ ವಿರುದ್ಧ ಈ ಭಾಗದ ಸಾರ್ವಜನಿಕರು ಹಾಗೂ ರೈತರು ಸೇರಿ ಎತ್ತು ಚಕ್ಕಡಿಗಳೊಂದಿಗೆ ಪಟ್ಟಣದ ಶಿಗ್ಲಿ ಕ್ರಾಸ್ ಬಳಿಯ ಪಾಳಾ ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ರೈತ ಮುಖಂಡ ಮಂಜುನಾಥ ಮಾಗಡಿ ಹೇಳಿದ್ದಾರೆ.