ಸಾರಾಂಶ
ಭಟ್ಕಳ: ಮಹಾಶಿವರಾತ್ರಿ ಅಂಗವಾಗಿ ಭಟ್ಕಳ ರಂಜನ್ ಇಂಡೇನ್ ಗ್ಯಾಸ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತರಾಮ ನೇತೃತ್ವದಲ್ಲಿ ೧೫ ವರ್ಷಗಳಿಂದ ಚೋಳೇಶ್ವರದಿಂದ ಮುರುಡೇಶ್ವರ ಪಾದಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶಿವಾರಾತ್ರಿಯ ಪರ್ವಕಾಲದಲ್ಲಿ ಮುರುಡೇಶ್ವರನ ದರ್ಶನ ಪಡೆದರು.ಬುಧವಾರ ಬೆಳಗಿನಜಾವ 4 ಗಂಟೆಗೆ ಪಟ್ಟಣದ ಚೋಳೇಶ್ವರದ ದೇವಸ್ಥಾನದಿಂದ ಪಾದಯಾತ್ರಿಗಳು ಶಿವನ ನಾಮಸ್ಮರಣೆ ಮಾಡುತ್ತಾ ಮುಖ್ಯ ರಸ್ತೆಯ ಮಾರ್ಗವಾಗಿ ಹೆದ್ದಾರಿ ಮೂಲಕ ಅಂದಾಜು ೧೫-೨೦ ಕಿ.ಮೀ ಪಾದಯಾತ್ರೆ ಮಾಡಿ ಮುರುಡೇಶ್ವರ ತಲುಪಿದರು. ಭಕ್ತರು ಬೈಂದೂರು, ಶಿರೂರು ಸೇರಿದಂತೆ ಭಟ್ಕಳದಿಂದಲೂ ತಡರಾತ್ರಿಯೇ ಪಾದಯಾತ್ರೆ ಆರಂಭಿಸಿ ದೇವರ ಬಾಗಿಲು ತೆಗೆಯುವ ಸಮಯಕ್ಕಾಗಲೇ ಮುರುಡೇಶ್ವರ ತಲುಪಿ ದೇವರ ದರ್ಶನ ಪಡೆದಿರುವುದು ಈ ವರ್ಷದ ಪಾದಯಾತ್ರೆಯ ವಿಶೇಷವಾಗಿದೆ.
ಪಾದಯಾತ್ರೆಯಲ್ಲಿ ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು ಭಕ್ತಿಯಿಂದ ಭಾಗವಹಿಸಿರುವುದು ವಿಶೇಷವಾಗಿತ್ತು. ಪಾದಯಾತ್ರೆಯ ಮೂಲಕ ಬರುವ ಭಕ್ತರು ಕಾಯ್ಕಿಣಿಯ ಬಸ್ತಿಯಲ್ಲಿ ಭಟ್ಕಳದ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.ಪಾದಯಾತ್ರೆಯಿಂದ ಬರುವ ಭಕ್ತರಿಗೆ ಶೀಘ್ರ ದರ್ಶನಕ್ಕಾಗಿ ಮುರುಡೇಶ್ವರ ದೇವಾಲಯವನ್ನು ಮುಂಜಾನೆ ೩ ಘಂಟೆಗೆ ತೆರೆದಿದ್ದರೂ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ಸರತಿ ಸಾಲು ಉದ್ದಕ್ಕೆ ಸಾಗಿತ್ತು. ಈ ಸಲವೂ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಾದಯಾತ್ರೆಯ ಭಕ್ತರು ದೇವರ ದರ್ಶನ ಪಡೆದು ಮುರುಡೇಶ್ವರ ದೇವಸ್ಥಾನದ ವತಿಯಿಂದ ವ್ಯವಸ್ಥೆ ಮಾಡಲಾದ ಫಲಾಹಾರ ಸೇವಿಸಿದರು.
ಭಟ್ಕಳದಿಂದ ಮುರುಡೇಶ್ವರಕ್ಕೆ ಪಾದಯಾತ್ರೆಯಲ್ಲಿ ತೆರಳಿದ ಭಕ್ತರು ಶಿವನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವುದು.