ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಅಭಿವೃದ್ಧಿಗಾಗಿ ಸಹಯೋಗ ಮತ್ತು ಸಹಕಾರ ಅಭಿಯಾನ ಅಂಗವಾಗಿ ಜಿಎಸ್‌ಎಸ್ ಯೋಗ ಮತ್ತು ಗ್ರಾಮ್ ಸಂಸ್ಥೆ ಸಂಯುಕ್ತವಾಗಿ ಮಾ.1ರ ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೇವಾ ಸಂಕ್ರಮಣ- 2025 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಎಸ್‌ಎಸ್ ಯೋಗ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ತಿಳಿಸಿದರು.ಸೇವಾ ಸಂಕ್ರಮಣ- ಇದು ಸಂಪೂರ್ಣ ಉಚಿತ ಕಾರ್ಯಕ್ರಮವಾಗಿದೆ. ಇದರಲ್ಲಿ ಕಾರ್ಪೊರೇಟ್ ವೃತ್ತಿಪರರು, ಸಿಎಸ್‌ಆರ್ ನಾಯಕರು, ಎನ್ ಜಿಒಗಳು, ಸರ್ಕಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ನಗರದ ಭವಿಷ್ಯಕ್ಕಾಗಿ ಇರುವ ಸವಾಲುಗಳಿಗೆ ಪರಿಹಾರ ರಚಿಸಲು ಬದ್ಧರಾಗಿರುವ ನಾಗರೀಕರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿಎಸ್‌ಆರ್‌ಮಾಸ್ಟರ್‌ಕ್ಲಾಸ್, ಪ್ಯಾನೆಲ್‌ಚರ್ಚೆಗಳು, ನೆಟ್‌ವರ್ಕಿಂಗ್‌ಕಾರ್ಯಾಗಾರಗಳು ಮತ್ತು ಪ್ರದರ್ಶನಗಳು ನಡೆಯಲಿವೆ. ಶಿಕ್ಷಣ , ಕೌಶಲ್ಯ ವಿಕಾಸ, ಸುಸ್ಥಿರ ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ ಹಾಗೂ ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿ ಕುರಿತು ಚರ್ಚಿಸಲು ವೇದಿಕೆ ಕಲ್ಪಿಸಲಾಗಿದೆ ಎಂದರು.ಉದ್ಘಾಟನಾ ಅಧಿವೇಶನ ಮತ್ತು ಫೈರ್‌ಸೈಡ್ ಚಾಟ್ ಕಾರ್ಯಕ್ರಮ ಸಂಜೆ 4.30ಕ್ಕೆ ನಡೆಯಲಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್‌ಅಸೀಫ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಎನ್.ಆರ್. ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪವನ್ ರಂಗ ಅವರು ಮೈಸೂರಿನ ಅಭಿವೃದ್ಧಿ ವಿಷಯಗಳ ಕುರಿತು ಪ್ರಮುಖ ಚರ್ಚೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ವಿವರಿಸಿದರು.
ಸಂಜೆ 5.30 ರಿಂದ 6.30 ರವರೆಗೆ ಮೈಸೂರು ಸಬಲೀಕರಣ: ಶಿಕ್ಷಣ, ಕೌಶಲ್ಯ ಮತ್ತು ಜೀವನೋಪಾಯದ ಮೂಲಕ ಭವಿಷ್ಯ ನಿರ್ಮಾಣ ಹಾಗೂ ಸಂಜೆ 6.30 ರಿಂದ 7.30 ರವರೆಗೆ ಮೈಸೂರು ಪೋಷಣೆ: ಸುಸ್ಥಿರತೆ, ಆರೋಗ್ಯ ಮತ್ತು ಆರೋಗ್ಯಕರ ಭವಿಷ್ಯಕ್ಕೆ ಪ್ರೋತ್ಸಾಹ ಕುರಿತ ಸಂವಾದ ನಡೆಯಲಿದೆ ಎಂದರು.ಮೈಸೂರಿನ ಸುಸ್ಥಿರ ಬೆಳವಣಿಗೆಗೆ ಕ್ರಿಯಾತ್ಮಕ ತಂತ್ರ ರೂಪಿಸಲು ಪರಿಸರ ಜ್ಞಾನ ವಿನಿಮಯಕ್ಕೆ ವೇದಿಕೆ ಸೃಷ್ಟಿಸಿ, ಸಹಭಾಗಿತ್ವಕ್ಕೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಮಾಸ್ಟರ್ ಕ್ಲಾಸ್, ವಿಷಯಾಧಾರಿತ ಚರ್ಚೆ, ನೆಟ್ ವರ್ಕಿಂಗ್ ಕಾರ್ಯಾಗಾರ ಇರಲಿವೆ ಎಂದು ಅವರು ವಿವರಿಸಿದರು.
ಗ್ರಾಮ್ ಸಂಸ್ಥೆಯ ಸಿಇಒ ಡಾ. ಬಸವರಾಜ್ ಆರ್. ಶ್ರೇಷ್ಠ, ಕಾರ್ಯಕ್ರಮದ ಸಂಯೋಜಕ ಭಗವಾನ್ ಬಿದರಕೋಟೆ ಇದ್ದರು.