ಬೋನಿಗೆ ಹಸು ಕಟ್ಟಲಾಗಿತ್ತು. ಹಸಿವಿನಿಂದ ಕಂಗೆಟ್ಟಿದ್ದ ಸುಮಾರು 5 ವರ್ಷದ ಹೆಣ್ಣು ಹುಲಿ ಆಹಾರದ ಆಸೆಗೆ ಹೋಗಿ ಬೋನಿಗೆ ಬಂಧಿಯಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ದೇಪಾಪುರ ಗ್ರಾಮದಲ್ಲಿ ಹುಲಿ ದಾಳಿಯಿಂದ ಎರಡು ಜಾನುವಾರುಗಳ ಬಲಿಯಾಗಿದ್ದು, ಎಚ್ಚೆತ್ತ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹುಲಿಯೊಂದು ಬಂಧಿಯಾಗಿದೆ.

ಕಳೆದ ವಾರ ದೇಪಾಪುರ ಗ್ರಾಮದ ಬಳಿ ಹುಲಿ ದಾಳಿ ನಡೆಸಿ ಎರಡು ಹಸುಗಳ ಜೀವ ಪಡೆದಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್‌ ಹಾಗೂ ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಶಿವಕುಮಾರ್‌ ದೇಪಾಪುರದ ಗ್ರಾಮದ ನಂಜುಂಡಸ್ವಾಮಿ ಅವರ ಜಮೀನಿನಲ್ಲಿ ತುಮಕೂರು ಬೋನು ಇರಿಸಿದ್ದರು.

ತುಮಕೂರು ಬೋನಿಗೆ ಹಸು ಕಟ್ಟಲಾಗಿತ್ತು. ಹಸಿವಿನಿಂದ ಕಂಗೆಟ್ಟಿದ್ದ ಸುಮಾರು 5 ವರ್ಷದ ಹೆಣ್ಣು ಹುಲಿ ಆಹಾರದ ಆಸೆಗೆ ಹೋಗಿ ಬೋನಿಗೆ ಬಂಧಿಯಾಗಿದೆ. ಹುಲಿ ಬೋನಿಗೆ ಬಿದ್ದ ವಿಷಯ ತಿಳಿದ ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿ ಗ್ರಾಮದ ಜನರು ಆಗಮಿಸಿ ಹುಲಿ ನೋಡಲು ಜಮಾಯಿಸಿದ್ದರು.

ಸೆರೆಯಾದ ಹುಲಿಯನ್ನು ಬಂಡೀಪುರದಲ್ಲಿ ಇರಿಸಲಾಗಿದ್ದು, ವೈದ್ಯರ ತಪಾಸಣೆ ಬಳಿಕ ಹಾಗೂ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್‌ ಸೂಚನೆ ಮೇರೆಗೆ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿದೆ ಎಂದು ಎಸಿಎಫ್‌ ಕೆ.ಸುರೇಶ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.ಕಳೆದ 10 ದಿನಗಳ ಹಿಂದೆ ಕೂಡ ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಳಿ ಕೂಡ ಹುಲಿ ಉಪಟಳದ ಹಿನ್ನಲೆ ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯಲಾಗಿತ್ತು ಎಂದು ಹೇಳಿದರು.

ಗುಂಡ್ಲುಪೇಟೆ ಬಫರ್‌ ಜೋನ್‌ ವಲಯದಲ್ಲಿ ಸುಮಾರು 10 ಹುಲಿಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ಬೋನಿಗೆ ಬಂಧಿಯಾದ ಹುಲಿಯನ್ನು ಮೇಲಾಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ದೇಪಾಪುರ ಗ್ರಾಮದಲ್ಲಿ ಹುಲಿ ಕಾಟಕ್ಕೆ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.ಹುಲಿ ಬೋನಿಗೆ ಬಂಧಿಯಾದ ಹಿನ್ನಲೆ ರೈತರು ಹಾಗೂ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.

------- 25ಜಿಪಿಟಿ3

ಗುಂಡ್ಲುಪೇಟೆ ತಾಲೂಕಿನ ದೇಪಾಪುರದ ಬಳಿ ಬೋನಿಗೆ ಬಂಧಿಯಾದ ಹೆಣ್ಣು ಹುಲಿ.

--------------25ಜಿಪಿಟಿ4

ಗುಂಡ್ಲುಪೇಟೆ ತಾಲೂಕಿನ ದೇಪಾಪುರದ ಬಳಿ ತುಮಕೂರು ಬೋನಿನಲ್ಲಿ ಹುಲಿ ಅರ್ಭಟ.

---------------