ಶ್ರದ್ಧಾ ಭಕ್ತಿಯಿಂದ ನೆರವೇರಿದ ಚೆಲುವನಾರಾಯಣಸ್ವಾಮಿಗೆ ತೀರ್ಥಸ್ನಾನ

| Published : Mar 27 2024, 01:00 AM IST

ಶ್ರದ್ಧಾ ಭಕ್ತಿಯಿಂದ ನೆರವೇರಿದ ಚೆಲುವನಾರಾಯಣಸ್ವಾಮಿಗೆ ತೀರ್ಥಸ್ನಾನ
Share this Article
  • FB
  • TW
  • Linkdin
  • Email

ಸಾರಾಂಶ

ಸ್ನಪನ ಶೆಲ್ವರಿಗೆ ನಾಡಿನ ಸುಭೀಕ್ಷತೆಗಾಗಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕದ ನಂತರ ಕಲ್ಯಾಣಿ ತಾಯಿಗೆ ಪೂಜೆ ನೆರವೇರಿಸಿ ಸ್ನಪರಶೆಲ್ವರನ್ನು ಕಲ್ಯಾಣಿಗೆ ಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು. ಕಲ್ಯಾಣಿಯ ನಾಲ್ಕೂಕಡೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಾವಿರಾರು ಭಕ್ತರು ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಿದರು. ಸಂಜೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀನಾರಾಯಣಸ್ವಾಮಿ ಭೂ ಲೋಕಕ್ಕೆ ಅವಿರ್ಭವಿಸಿದ ಜಯಂತ್ಯುತ್ಸವದ ಪವಿತ್ರ ದಿನವಾದ ಮೀನಮಾಸದ ಹಸ್ತನಕ್ಷತ್ರದ ಮಂಗಳವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ಧಾಭಕ್ತಿಂದ ನೆರವೇರಿತು.

ಸ್ನಪನ ಶೆಲ್ವರಿಗೆ ನಾಡಿನ ಸುಭೀಕ್ಷತೆಗಾಗಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕದ ನಂತರ ಕಲ್ಯಾಣಿ ತಾಯಿಗೆ ಪೂಜೆ ನೆರವೇರಿಸಿ ಸ್ನಪರಶೆಲ್ವರನ್ನು ಕಲ್ಯಾಣಿಗೆ ಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು.

ಕಲ್ಯಾಣಿಯ ನಾಲ್ಕೂಕಡೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಾವಿರಾರು ಭಕ್ತರು ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಿದರು. ಬೆಳಗ್ಗೆ ತಂಗಳನ್ನದ ಮಂಟಪಕ್ಕೆ ಚೆಲುವನಾರಾಯಣಸ್ವಾಮಿಯ ಉತ್ಸವ ನಡೆದ ನಂತರ ದೇವಾಲಯದ ಅಮ್ಮನವರ ಸನ್ನಿಧಿಯಲ್ಲಿ ಸಂಧಾನಸೇವೆ ನೆರವೇರಿತು. ಮದ್ಯಾಹ್ನ 1 ಗಂಟೆ ವೇಳೆಗೆ ಸ್ವಾಮಿ ಉತ್ಸವ ಕಲ್ಯಾಣಿಗೆ ಸಾಗಿದ ನಂತರ ಅಲ್ಲಿ ತೀರ್ಥಸ್ನಾನದ ಪ್ರಕ್ರಿಯೆಗಳು ಆರಂಭವಾಗಿ 2-45ರ ವೇಳೆಗೆ ಮುಕ್ತಾಯವಾದವು.

ಬೆಳಗ್ಗೆ 5 ಗಂಟೆಯಿಂದಲೇ ಕಾರ್ಯ ಪ್ರವೃತ್ತರಾಗಿದ್ದ ಇನ್ಸ್‌ಪೆಕ್ಟರ್ ಸಿದ್ಧಪ್ಪ ಮತ್ತು ಸುಮಾರಾಣಿ ನೇತೃತ್ವದ ಮೇಲುಕೋಟೆ ಪೊಲೀಸರ ತಂಡ ತೀರ್ಥಸ್ನಾನ ವಾಗುವವರೆಗೆ ದೇವಾಲಯದ ಸಾಂಪ್ರದಾಯಿಕ ಪದ್ಧತಿಯಂತೆ ಕಲ್ಯಾಣಿಯ ಪವಿತ್ರ ತೀರ್ಥ ಸ್ಪರ್ಷಿಸದಂತೆ ಕಟ್ಟೆಚ್ಚರ ವಹಿಸಿ ಬಂದೋಬಸ್ತ್ ಮಾಡಿದ್ದರು.

ರಾಜಮುಡಿ ಕಿರೀಟಧಾರಣೆ ಮುಕ್ತಾಯ:

ಸಂಜೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯಗಳು ನೆರವೇರಿದವು. ಮಾ.21ರ ವೈರಮುಡಿ ಉತ್ಸವದ ರಾತ್ರಿಯಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ಬ್ರಹ್ಮೋತ್ಸವದ ಕೊನೆಯ ಉತ್ಸವವಾದ ಪಟ್ಟಾಭಿಷೇಕ ಉತ್ಸವದಲ್ಲಿ ಕೊನೆಯ ಭಾರಿ ಅಲಂಕರಿಸಿತ್ತು. ರಾಜಮುಡಿ ಮುಡಿ ಅಲಂಕಾರ ಮುಕ್ತಾಯವಾಗುತ್ತಿದ್ದಂತೆ ಸ್ವಾಮಿಗೆ ಸಮರ ಭೂಪಾಲ ವಾಹನೋತ್ಸವ ವೈಭವದಿಂದ ನೆರವೇರಿತು.

ಸ್ಥಾನೀಕರಿಗೆ ಮಾಲೆಮರ್ಯಾದೆ:

ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿಗೆ ಶ್ರಮಿಸಿದ ನಾಲ್ಕೂಮಂದಿ ಸ್ಥಾನೀಕರಿಗೆ ರಾಮಾನುಜಾಚಾರ್ಯರ ಕಾಲದಿಂದಲೂ ನಡೆದು ಬಂದ ಪರಂಪರೆಯಂತೆ ಪಟ್ಟಾಭಿಷೇಕ-ಸಮರಭೂಪಾಲವಾಹನ ನಂತರ ದೇವಾಲಯದ ಚಿನ್ನದ ದ್ವಜಸ್ತಂಭದ ಮುಂಭಾಗ ಚೆಲುವನಾರಾಯಣಸ್ವಾಮಿಯ ಸಾನ್ನಿಧ್ಯದಲ್ಲಿ ಮಾಲೆಮರ್ಯಾದೆ ಮಾಡಿ ಗೌರವಿಸಲಾಯಿತು.

4ನೇ ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಪ್ರಥಮ ಸ್ಥಾನೀಕ ಕರಗಂರಾಮಪ್ರಿಯ ಮೂರನೇ ಸ್ಥಾನೀಕ ಕೋವಿಲ್ ನಂಬಿ ಮುಕುಂದನ್ ಸ್ವಾಮಿಯ ಮಾಲೆಮರ್ಯಾದೆ ಸ್ವೀಕರಿಸಿದರು.

ಕಲ್ಯಾಣಿಗೆ ಗರುಡ ಪ್ರದಕ್ಷಿಣೆ:

ಕಲ್ಯಾಣಿಯಲ್ಲಿತೀರ್ಥಸ್ನಾನ ನಡೆಯುತ್ತಿದ್ದ ವೇಳೆ ದಿಢೀರ್ ಕಾಣಿಸಿಕೊಂಡ ಗರುಡ ಸ್ನಪನ ಶೆಲ್ವರಿಗೆ ತೀರ್ಥ ಸ್ನಾನವಾಗುತ್ತಿದ್ದ ವೇಳೆ ಕಲ್ಯಾಣಿಯಲ್ಲಿ ಪ್ರದಕ್ಷಿಣೆ ಹಾಕಿದ ವೇಳೆ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಬೆಳಗ್ಗೆಯಿಂದಲೂ ಕಲ್ಯಾಣಿಯತ್ತ ಸುಳಿಯದ ಗರುಡ ತೀರ್ಥಸ್ನಾನದ ವೇಳೆ ಆಗಮಿಸಿ ಭಕ್ತರ ಹರ್ಷೋದ್ಘಾರಕ್ಕೆಕಾರಣವಾಯಿತು.