ಮಲೆನಾಡ ಸೆರಗಲ್ಲೇ ಬತ್ತಿರುವ ಹೇಮಾವತಿ ಹರಿವು

| Published : Mar 27 2024, 01:00 AM IST

ಸಾರಾಂಶ

ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದ್ದು, ಕಳೆದ ಬಾರಿಯ ವಾಡಿಕೆಗಿಂತ ಕಡಿಮೆ ಮಳೆಯಾದ ಕಾರಣ ತಾಲೂಕಿನ ಬಹುತೇಕ ಜಲಮೂಲಗಳಲ್ಲಿ ಅಂರ್ತಜಲ ಬತ್ತಿದ್ದು, ಹೇಮಾವತಿ ನದಿ ಕೂಡ ಬತ್ತಿಹೋಗಿರುವುದು ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಲು ಕಾರಣವಾಗಿದೆ.

ಶ್ರೀವಿದ್ಯಾ ಸಕಲೇಶಪುರತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದ್ದು, ಕಳೆದ ಬಾರಿಯ ವಾಡಿಕೆಗಿಂತ ಕಡಿಮೆ ಮಳೆಯಾದ ಕಾರಣ ತಾಲೂಕಿನ ಬಹುತೇಕ ಜಲಮೂಲಗಳಲ್ಲಿ ಅಂರ್ತಜಲ ಬತ್ತಿದ್ದು, ಹೇಮಾವತಿ ನದಿ ಕೂಡ ಬತ್ತಿಹೋಗಿರುವುದು ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಲು ಕಾರಣವಾಗಿದೆ.

ತಾಲೂಕಿನ ಜೀವನದಿ ಹೇಮಾವತಿ ಸೇರಿದಂತೆ ಪ್ರಮುಖ ಏಳು ಉಪನದಿಗಳು ಹಾಗೂ ೩೧೦ ಕ್ಕೂ ಹೆಚ್ಚಿನ ಸರ್ಕಾರಿ ಕೆರೆಗಳು,೮೬೨ ಕ್ಕೂ ಅಧಿಕ ತೊರೆಗಳಿದ್ದು ಇವುಗಳ ಪೈಕಿ ಸಾಕಷ್ಟು ನದಿ, ತೊರೆ, ಕೆರೆಗಳು ಎಂದಿಗೂ ಬತ್ತದಂತ ನೀರಿನ ಸೆಲೆ ಹೊಂದಿದ್ದವು. ಆದರೆ, ಈ ಬಾರಿ ಹೇಮಾವತಿ ನದಿಯೆ ಉಹೆಗೂ ನಿಲುಕದಂತೆ ಬರಿದಾಗುತ್ತಿದ್ದು ನದಿಯನ್ನು ಕಾಲ್ನಡಿಗೆಯಲ್ಲಿ ಹಾಗೂ ವಾಹನಗಳಲ್ಲಿ ದಾಟಬಹುದಾಗಿದೆ. ಈ ನದಿ ನೀರಿನ ಹರಿವಿಗೆ ನದಿಯಂಚಿನ ಕಾಫಿ ಬೆಳೆಗಾರರು ಹಾಗೂ ಇಟ್ಟಿಗೆ ಭಟ್ಟಿಯ ಮಾಲೀಕರು ಪೀಡಕರಾಗಿ ಕಾಡುತ್ತಿದ್ದು ತಾಲೂಕಿನಲ್ಲಿ ಹರಿಯುವ ೬೫ ಕಿ.ಮಿ ನದಿಪಾತ್ರದಲ್ಲಿ ಮುನ್ನೂರಕ್ಕೂ ಅಧಿಕ ಮೋಟರ್‌ಗಳಲ್ಲಿ ನೀರು ಮೇಲೆತ್ತುತ್ತಿರುವುದು ನದಿ ನೀರಿನ ಹರಿವು ಗಣನೀಯವಾಗಿ ಕುಸಿಯಲು ಮತ್ತೊಂದು ಕಾರಣವಾಗಿದೆ.ನದಿಪಾತ್ರದಲ್ಲಿರುವ ಮೋಟರ್‌ಗಳನ್ನು ತೆರವುಗೊಳಿಸಲು ತಾಲೂಕು ಆಡಳಿತ ಕಾರ್ಯಚರಣೆ ನಡೆಸುತ್ತಿದ್ದರು ಯಾವುದೆ ಉಪಯೋಗವಾಗಿಲ್ಲ. ಇನ್ನೂ ಮೇ ತಿಂಗಳ ಮುನ್ನ ಎಂದಿಗೂ ಬತ್ತದ ಜಾನೇಕರೆ ಹಳ್ಳ ತನ್ನ ಹರಿವು ನಿಲ್ಲಿಸಿ ವಾರಗಳೇ ಕಳೆಯುತ್ತಿದೆ. ಈ ಹಳ್ಳದ ನೀರು ನಂಬಿದ್ದ ಹಲವು ಬೇಸಿಗೆ ಬೆಳೆಗಾರರು ಕಂಗಾಲಾಗಿದ್ದರೆ, ಜಾನುವಾರುಗಳಿಗೆ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಐಗೂರು ಹೊಳೆ ಸಹ ಹರಿವು ನಿಲ್ಲಿಸಿದ್ದು ನದಿಯ ಮಡುವಿನಲ್ಲಿರುವ ನೀರು ಸದ್ಯ ಪ್ರಾಣಿಗಳಿಗೆ ಹಾಗು ಬೇಸಿಗೆ ಬೆಳೆಗಳಿಗೆ ನೀರು ನೀಡುತ್ತಿದ್ದು ಇನ್ನೊಂದು ವಾರದಲ್ಲಿ ಐಗೂರು ಹೊಳೆ ಸಂಪೂರ್ಣ ಬತ್ತಿ ಹೋಗುವುದರಲ್ಲಿ ಯಾವುದೆ ಅನುಮಾನವಿಲ್ಲ. ಇನ್ನೂ ಎಂದು ಬತ್ತದ ನದಿಗಳಾದ ಪಶ್ಚಿಮಘಟ್ಟದಲ್ಲಿ ಹುಟ್ಟಿ ಹರಿಯುವ, ಹೊಂಗಡಹಳ್ಳಹೊಳೆ, ಚೀರಿ ಹಳ್ಳ,ಕಾಡುಮನೆ ಹೊಳೆ,ಎತ್ತಿನಹೊಳೆಗಳಲ್ಲಿ ನೀರಿನ ಹರಿವು ಕೊಲ್ಲಿಯಂತಾಗಿದೆ.

ಪಶ್ಚಿಮಪಟ್ಟದಲ್ಲಿ ಭತ್ತಿದ ಜರಿಗಳು:

ತಾಲೂಕಿನ ಹೆತ್ತೂರು ಹಾಗೂ ಹಾನುಬಾಳ್ ಹೋಬಳಿಯನ್ನು ಹೊದ್ದುಕೊಂಡಿರುವ ಪಶ್ಚಿಮಘಟ್ಟದಲ್ಲಿ ೨೩೧ ಸಣ್ಣಪುಟ್ಟ ಜರಿಗಳಿದ್ದು ಇವುಗಳಲ್ಲಿ ಹಲವು ಜರಿಗಳು ಡಿಸಂಬರ್ ತಿಂಗಳಾಂತ್ಯಕ್ಕೆ ಕಣ್ಮರೆಯಾದರೆ ಸಾಕಷ್ಟು ತೊರೆಗಳು ಬೇಸಿಗೆಯಲ್ಲೂ ಹರಿಯುವ ಮೂಲಕ ಕಾಡುಪ್ರಾಣಿಗಳ ದಾಹ ಇಂಗಿಸುತ್ತಿದ್ದವು. ಆದರೆ, ಪ್ರಸಕ್ತವರ್ಷ ಬಹುತೇಕ ಜರಿ,ತೊರೆಗಳ ಹರಿವು ಪೇಬ್ರವರಿ ತಿಂಗಳಿನಲ್ಲಿ ನಿಲುಗಡೆಯಾಗಿದ್ದು ವನ್ಯಮೃಗಗಳ ನೀರಿಗೂ ತತ್ವಾರ ಎದುರಾಗಿದೆ.

ಪಟ್ಟಣಕ್ಕೂ ತಟ್ಟಿದ ಕುಡಿಯುವ ನೀರಿನ ಸಮಸ್ಯೆ:

ಪಟ್ಟಣದ ಮೂರು ದಿಕ್ಕಿನಲ್ಲಿ ಹೇಮಾವತಿ ನದಿ ಹರಿಯುತ್ತಿದ್ದು ತಾಲೂಕಿನ ಹೆನ್ನಲಿ ಗ್ರಾಮ ಸಮೀಪ ಪಟ್ಟಣಕ್ಕೆ ಕುಡಿಯುವ ನೀರು ಪೊರೈಸಲು ಚೆಕ್ ಡ್ಯಾಂ ಕಟ್ಟಲಾಗಿದೆ. ಆದರೆ. ಚೆಕ್ ಡ್ಯಾಂ ನಿರ್ವಹಣೆ ನಿರ್ಲಕ್ಷಿಸಿರುವುದರಿಂದ ಡ್ಯಾಂನಲ್ಲಿ ನೀರು ಸಂಗ್ರಹವಾಗದಾಗಿದೆ. ಈಗಾಗಲೇ ಅತ್ಯಂತ ಕ್ಷೀಣವಾಗಿ ಹರಿಯುತ್ತಿರುವ ನದಿಯಿಂದ ಇನ್ನೂ ಕೆಲವು ದಿನಗಳ ಮಾತ್ರ ಪಟ್ಟಣದ ಜನರಿಗೆ ಕುಡಿಯುವ ನೀರು ನೀಡಬಹುದಾಗಿದ್ದು ಈಗಾಗಲೇ ನಿತ್ಯ ನೀರು ಬಿಡುವ ಬದಲು ಹಲವು ಬಡಾವಣೆಗಳಲ್ಲಿ ವಾರಕ್ಕೆ ಎರಡು ಬಾರಿ ನೀರು ನೀಡಲಾಗುತ್ತಿದೆ.

ಕಲುಷಿತ ನೀರು ಪೂರೈಕೆ:

ರಾಡಿ ನೀರು ನದಿಯಲ್ಲಿ ನೀರಿನ ಹರಿವು ತೀವ್ರ ಪ್ರಮಾಣದಲ್ಲಿ ಕುಸಿತಗೊಂಡಿರುವುದರಿಂದ ಮೋಟರ್‌ಗಳಲ್ಲಿ ನೀರೆತ್ತುವ ವೇಳೆ ಕೆಸರು ಮಿಶ್ರಿತ ನೀರು ಟ್ಯಾಂಕ್ ಸೇರುತ್ತಿದ್ದು ಇದೆ ನೀರನ್ನು ಪಟ್ಟಣದ ಜನರಿಗೆ ಪೊರೈಸಲಾಗುತ್ತಿದೆ. ಹೀಗೆ ಹೊಳೆಯಿಂದ ನೇರ ಮನೆ ಸೇರುತ್ತಿರುವ ನೀರಿನಲ್ಲಿ ಮೀನು,ಸತ್ತ ಕಪ್ಪೆ,ಎರೆಹುಳು ಸಹ ಬರುತ್ತಿದ್ದು ಜನರು ಗಾಬರಿಗೊಳ್ಳುವಂತೆ ಮಾಡಿದೆ. ಒಂದು ಬಕೇಟ್ ನೀರಿನಲ್ಲಿ ಕನಿಷ್ಠ ೨೦೦ ರಿಂದ ೩೦೦ ಗ್ರಾಂ ಕೆಸರು ಮನೆ ಸೇರುತ್ತಿರುವುದು ಜನರ ಆರೋಗ್ಯದೃಷ್ಟಿಯಿಂದಲು ಕಳವಳಕಾರಿಯಾಗಿದೆ.

ನೀರಿನಿಂದಲೇ ಸೃಷ್ಟಿಯಾಗುವ ಮಲೇರಿಯದಂತ ಸಂಕ್ರಾಮಿಕರೋಗಗಳು ಯಾವ ಕ್ಷಣದಲ್ಲಿ ಬೇಕಿದ್ದರು ಜನರನ್ನು ಕಾಡಬಹುದಾಗಿದೆ. ಕೇವಲ ಒಂದು ವರ್ಷದ ಹಿಂದೆ ಸುಮಾರು ೭೫ ಲಕ್ಷ ವೆಚ್ಚದಲ್ಲಿ ನೀರು ಶುದ್ದಿಕರಿಸುವ ಉದ್ದೇಶದಿಂದ ಪೀಲ್ಟರ್ ಆಳವಡಿಸಲಾಗಿದ್ದು ಪೀಲ್ಟರ್ ಅಳವಡಿಸಿದ ಒಂದೆ ವರ್ಷಕ್ಕೆ ರಾಡಿ ನೀರು ಮನೆ ಸೇರುತ್ತಿರುವುದರಿಂದ ಕಾಮಗಾರಿಯ ಬಗ್ಗೆಯೆ ಜನರು ಸಂಶಯದಿಂದ ನೋಡುವಂತೆ ಮಾಡಿದೆ. ಇನ್ನೂ ತಾಲೂಕಿನ ೨೬ ಗ್ರಾ.ಪಂಗಳ ೨೮೧ ಕಂದಾಯ ಗ್ರಾಮಗಳು ಸೇರಿದಂತೆ ಒಟ್ಟು ೫೨೦ ಗ್ರಾಮಗಳಿದ್ದು ಈ ಪೈಕಿ ಫೆಬ್ರವರಿ ತಿಂಗಳನಂಚಿನಲ್ಲೆ ೧೮ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರತೊಂದರೆ ಕಾಣಿಸಿಕೊಂಡಿದ್ದರೆ, ೫೪ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಬಹುದು ಎಂದು ತಾಲೂಕು ಆಡಳಿತ ಅಂದಾಜಿಸಿತ್ತು. ಆದರೆ, ಈ ಅಂಕಿ ಅಂಶಕ್ಕಿಂತ ಎರಡು ಪಟ್ಟು ಹೆಚ್ಚಿನ ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದೆ ಎಂಬುದು ಹೆಸರು ಹೇಳಲಿಚ್ಚಿಸದ ತಾಪಂ ಅಧಿಕಾರಿಯೊಬ್ಬರ ಮಾತು.

ನಿರಾಸೆ ತಂದ ಮೋಡ: ತಾಲೂಕಿನಲ್ಲಿ ಈಗಾಗಲೇ ೩೪ ರಿಂದ ೩೬ ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದ್ದು ಪರಿಣಾಮ ಭಾರಿ ಪ್ರಮಾಣದಲ್ಲಿ ಜಲಮೂಲಗಳು ಬರಿದಾಗುತ್ತಿವೆ. ಇದರಿಂದಾಗಿ ಕಾಫಿ ಬೆಳೆಗಾರರು ಆರಳಿರುವ ಹೂವು ಉಳಿಸಿಕೊಳ್ಳಲು ಹಾಗೂ ಹೊಸತೋಟದ ಉಳಿವಿಗಾಗಿ ಹನಿನೀರಾವರಿ ಮಾಡಲೇ ಬೇಕಿದೆ ಆದರೆ, ಜಲಮೂಲಗಳು ಬತ್ತಿರುವುದರಿಂದ ಹನಿನೀರಾವರಿ ಅಸಾದ್ಯವಾಗಿದ್ದು ಮಳೆಯ ಅವಶ್ಯಕತೆ ತೀವ್ರ ಪ್ರಮಾಣದಲ್ಲಿದೆ. ಸದ್ಯ ಮಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ತಾಲೂಕಿನಲ್ಲಿ ಶುಕ್ರವಾರ ಹಾಗೂ ಶನಿವಾರ ತೀವ್ರ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಮೋಡಗಳು ಇನ್ನೇನು ಮಳೆಯನ್ನು ಸುರಿಸಿಯೆ ಬಿಟ್ಟವು ಎಂಬ ನೀರಿಕ್ಷೆಯನ್ನು ಸೃಷ್ಟಿಸಿದ್ದವು. ಆದರೆ, ಆಸೆ ಹುಟ್ಟಿಸಿದ ಮೋಡಗಳು ಮಳೆ ಸುರಿಸದೆ ನಿರಾಸೆ ಮೂಡಿಸಿದವು.

ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂದ ಹಲವು ಸುತ್ತಿನ ಅಧಿಕಾರಗಳ ಸಭೆ ನಡೆಸಲಾಗಿದೆ.

-ಸಿಮೆಂಟ್ ಮಂಜು. ಶಾಸಕ.ಕಳೆದ ಹಲವು ದಿನಗಳಿಂದ ಕುಡಿಯುವ ನೀರು ಬಾರದ ಕಾರಣ ದೂರದಿಂದ ವಾಹನಗಳಲ್ಲಿ ನೀರು ತರಲಾಗುತ್ತಿದೆ. -ಸುಧೀರ್‌ಭಟ್ಟ್. ಅರೇಹಳ್ಳಿ ಬೀದಿ ನಿವಾಸಿ. ಸಕಲೇಶಪುರ.