ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು

| N/A | Published : Nov 06 2025, 12:14 PM IST

DK Suresh
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
Share this Article
  • FB
  • TW
  • Linkdin
  • Email

ಸಾರಾಂಶ

‘ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಷ್ಟೂ ದಿನ ಅವರೇ ಮುಖ್ಯಮಂತ್ರಿಗಳು’ ಎಂದು  ಡಿ.ಕೆ.ಸುರೇಶ್‌ ಹೇಳಿದ್ದಾರೆ. ಜತೆಗೆ, ‘ಅವರಿಗೆ ವಯಸ್ಸಾಗಿಲ್ಲ, ಮುಂದಿನ ಚುನಾವಣೆಗಳನ್ನು ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ’ ಎಂದೂ ಡಿ.ಕೆ.ಸುರೇಶ್‌ ತಿಳಿಸಿದ್ದಾರೆ.

  ಬೆಂಗಳೂರು :  ‘ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಷ್ಟೂ ದಿನ ಅವರೇ ಮುಖ್ಯಮಂತ್ರಿಗಳು’ ಎಂದು ಮಾಜಿ ಸಂಸದ ಹಾಗೂ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ. ಜತೆಗೆ, ‘ಅವರಿಗೆ ವಯಸ್ಸಾಗಿಲ್ಲ, ಮುಂದಿನ ಚುನಾವಣೆಗಳನ್ನು ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ’ ಎಂದೂ ಡಿ.ಕೆ.ಸುರೇಶ್‌ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಷ್ಟೂ ದಿನ ಅವರೇ ಮುಖ್ಯಮಂತ್ರಿ. ಮುಂದೆಯೂ ಅವರೇ ಇರಬಹುದು. ಅವರು ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಪಕ್ಷ ಸಂಘಟಿಸಿ, ಪಕ್ಷ ಕಟ್ಟುತ್ತಿದ್ದೇವೆ. ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ಎಲ್ಲವೂ ಊಹಾಪೋಹಗಳು. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳು ಪಕ್ಷದ ಮುಂದಿಲ್ಲ. ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿಲ್ಲ. ಮುಂದಿನ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳಲ್ಲೂ ಅವರೇ ನೇತೃತ್ವ ವಹಿಸುತ್ತಾರೆ ಎಂದರು.

ಡಿ.ಕೆ.ಶಿವಕುಮಾರ್‌ ದೆಹಲಿ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ನಡೆಯಲಿದೆ. ಆ ವಿಚಾರವಾಗಿ ಡಿ.ಕೆ.ಶಿವಕುಮಾರ್‌ ತೆರಳಿದ್ದು, ಅಧಿಕಾರಿಗಳು ಮತ್ತು ವಕೀಲರ ಜತೆ ಚರ್ಚೆ ನಡೆಸಲಿದ್ದಾರೆ. ಇನ್ನು, ವರಿಷ್ಠರನ್ನು ಭೇಟಿಯಾಗಲೆಂದೇ ದೆಹಲಿಗೆ ತೆರಳಿಲ್ಲ. ಬಿಹಾರ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಇನ್ನು, ಡಿ.ಕೆ.ಶಿವಕುಮಾರ್‌ ಈ ಹಿಂದಿನಿಂದಲೂ ದೆಹಲಿಗೆ ಹೋದಾಗ ಕಾಂಗ್ರೆಸ್‌ ಕಚೇರಿಗೆ ಹೋಗುತ್ತಾರೆ. ವರಿಷ್ಠರು ಸಿಕ್ಕರೆ ಮಾತನಾಡುತ್ತಾರೆ. ಈಗ ದೆಹಲಿಗೆ ತೆರಳಿರುವುದು ರಾಜಕೀಯ ಕೆಲಸದಿಂದಲ್ಲ, ರಾಜ್ಯದ ಹಿತ ಕಾಪಾಡುವ ಕೆಲಸಕ್ಕೆ ಹೋಗಿದ್ದಾರೆ ಎಂದು ತಿಳಿಸಿದರು.

ಎಲ್ಲರಿಂದ ಕಾಂಗ್ರೆಸ್‌ ಪಕ್ಷ:

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕರಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್‌, ಎಲ್ಲ ನಾಯಕರೂ ಸೇರಿ ಕಾಂಗ್ರೆಸ್‌ ಪಕ್ಷವಾಗಿದೆ. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್‌ ಅವರಿಂದ ಮಾತ್ರ ಪಕ್ಷವಿಲ್ಲ. ಎಂ.ಬಿ.ಪಾಟೀಲ್‌, ಡಾ.ಜಿ.ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ, ಮಹದೇವಪ್ಪ ಸೇರಿ ಎಲ್ಲ ಸಮುದಾಯದ ನಾಯಕರು ಸೇರಿ ಪಕ್ಷ ನಡೆಸುತ್ತಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಬದಲಾವಣೆ ತಿಳಿದಿಲ್ಲ:

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರೂ ಮುಂಚೂಣಿಯಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್‌, ಸುಮ್ಮನೇ ಇಲ್ಲದಿರುವ ನನ್ನ ಹೆಸರನ್ನು ಎಳೆಯುವುದು ಬೇಡ. ಅಧ್ಯಕ್ಷರ ಬದಲಾವಣೆ ಕುರಿತು ನನಗೆ ಗೊತ್ತಿಲ್ಲ. ಅದು ವರಿಷ್ಠರಿಗೆ ಬಿಟ್ಟ ವಿಚಾರ. ಅವರು ಏನು ಹೇಳುತ್ತಾರೋ ಅದನ್ನು ಕೇಳುತ್ತೇವೆ. ಯಾವಾಗ ಬೇಕೋ ಆಗ ಅಧ್ಯಕ್ಷರ ಬದಲಾವಣೆ ಆಗಲಿದೆ. ಅದಕ್ಕೆ ಈಗ ಯಾವುದೇ ತುರ್ತು ಇಲ್ಲ ಎಂದು ತಿಳಿಸಿದರು.

Read more Articles on