ಸಾರಾಂಶ
ಬೆಂಗಳೂರು : ಬಮೂಲ್ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಕನಕಪುರ ಕ್ಷೇತ್ರದ ಡಿ.ಕೆ.ಸುರೇಶ್, ಆನೇಕಲ್‌ನ ಆರ್.ಕೆ.ರಮೇಶ್ ಮತ್ತು ಕುದೂರು ಕ್ಷೇತ್ರದಿಂದ ರಾಜಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಮೂಲ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಮೇ 25ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮೇ 11ರಿಂದ ಆರಂಭಗೊಂಡಿದ್ದು ಮೇ 17 ಅಂತಿಮ ದಿನವಾಗಿತ್ತು. ಈ ಅವಧಿಯಲ್ಲಿ 14 ನಿರ್ದೇಶಕರ ಸ್ಥಾನಕ್ಕೆ ಬರೋಬ್ಬರಿ 80ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಸೋಮವಾರ ಕಡೇಯ ದಿನವಾಗಿದ್ದು 50ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ.
ಪ್ರಸ್ತುತ 14 ನಿರ್ದೇಶಕ ಸ್ಥಾನಗಳ ಪೈಕಿ ಕನಕಪುರ, ಆನೇಕಲ್, ಕುದೂರು ಕ್ಷೇತ್ರದಿಂದ ಕೇವಲ ಒಬ್ಬೊಬ್ಬ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಪಿ.ಮಹೇಶ್ ಅವರು ಈ ಮೂರು ಕ್ಷೇತ್ರದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದ್ದಾರೆ.
ಉಳಿದಂತೆ ಚನ್ನಪಟ್ಟಣದ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಿಂದ ತಲಾ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರೆ, ರಾಮನಗರ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಮಾಗಡಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಹಾರೋಹಳ್ಳಿ ಕ್ಷೇತ್ರಗಳಿಂದ ತಲಾ ಇಬ್ಬರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬಮೂಲ್) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳ ಪೈಕಿ ಕನಕಪುರ, ಆನೇಕಲ್, ಕುದೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದಂತೆ 11 ಕ್ಷೇತ್ರಗಳಲ್ಲಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಮೇ 25ರಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಬೆಂಗಳೂರು ಡೇರಿ ವೃತ್ತದ ಸಮೀಪವಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.