ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆದರ 28 ರು. ಹೆಚ್ಚಿಸಿದ ನಂದಿನಿ

| Published : Nov 06 2025, 02:00 AM IST

ಸಾರಾಂಶ

ಕೆಎಂಎಫ್‌ ಇದೀಗ ಏಕಾಏಕಿ ನಂದಿನಿ ತುಪ್ಪದ ದರ ಪ್ರತಿ ಲೀಟರ್‌ಗೆ ₹90 ಮತ್ತು ಕೆ.ಜಿ. ಬೆಣ್ಣೆಗೆ ₹28 ಹೆಚ್ಚಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯಿಂದ ಹಾಲಿನ ಉತ್ಪನ್ನಗಳ ಮಾರಾಟ ದರ ಇಳಿಕೆ ಮಾಡಿದ್ದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ(ಕೆಎಂಎಫ್‌) ಇದೀಗ ಏಕಾಏಕಿ ನಂದಿನಿ ತುಪ್ಪದ ದರ ಪ್ರತಿ ಲೀಟರ್‌ಗೆ ₹90 ಮತ್ತು ಕೆ.ಜಿ. ಬೆಣ್ಣೆಗೆ ₹28 ಹೆಚ್ಚಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡಿದ ನಂತರ ಸೆ.20ರಂದು ಕೆಎಂಎಫ್‌ ಹಾಲು ಉತ್ಪನ್ನಗಳ ದರ ಇಳಿಕೆ ಮಾಡಲಾಗಿತ್ತು. ಹಾಗಾಗಿ ತುಪ್ಪ (ಪೌಚ್‌) ಲೀಟರ್‌ಗೆ ₹650 ಇದ್ದದ್ದು ₹610ಕ್ಕೆ ಇಳಿಕೆಯಾಗಿತ್ತು. ಬೆಣ್ಣೆ (ಉಪ್ಪುರಹಿತ) ಅರ್ಧ ಕೇಜಿಗೆ ₹305 ಇದ್ದದ್ದು ₹286ಕ್ಕೆ ಇಳಿಕೆ ಮಾಡಲಾಗಿತ್ತು.

ಆದರೆ ಈಗ ತುಪ್ಪ ಕೆ.ಜಿ.ಗೆ ₹610 ಇದ್ದ ದರ ₹700ಕ್ಕೆ ಏರಿಕೆಯಾಗಿದೆ. ಅದೇ ರೀತಿ ಬೆಣ್ಣೆ ಕೆ.ಜಿ.ಗೆ ₹544 ಇದ್ದ ದರ ₹570ಕ್ಕೆ ತಲುಪಿದೆ. ಬುಧವಾರದಿಂದಲೇ (ನ.5) ನೂತನ ದರ ಜಾರಿಗೆ ಬಂದಿದೆ ಎಂದು ಕೆಎಂಎಫ್‌ ತಿಳಿಸಿದೆ.

ದರ ಹೆಚ್ಚಳ ಯಾಕೆ?:

ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹4 ಹೆಚ್ಚಳ ಮಾಡಿದ ದಿನದಿಂದ ಪ್ರತಿ ದಿನ 1 ಕೋಟಿ ಹೆಚ್ಚು ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಇದರಿಂದ ಹಾಲು ಒಕ್ಕೂಟಗಳಿಗೆ ಆರ್ಥಿಕವಾಗಿ ಸ್ವಲ್ಪ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಒಕ್ಕೂಟಗಳು ಆರ್ಥಿಕವಾಗಿ ಸದೃಢವಾಗಿರಬೇಕೆಂಬ ಹಿನ್ನೆಲೆಯಲ್ಲಿ ತುಪ್ಪ ಮತ್ತು ಬೆಣ್ಣೆ ದರದಲ್ಲಿ ಸ್ವಲ್ಪ ಪರಿಷ್ಕರಣೆ ಮಾಡಿದ್ದೇವೆ. ರೈತರಿಂದ ಖರೀದಿಸುತ್ತಿರುವ ಹಾಲಿನ ದರದಲ್ಲಿ ಸ್ವಲ್ಪವೂ ಕಡಿಮೆಯಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ದರ ಜಾಸ್ತಿ ಮಾಡಿದ್ದೇವೆ ಎಂದು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ದರ ಹೆಚ್ಚಳ ಸಮರ್ಥಿಸಿಕೊಂಡರು.

ಕಳೆದ ವರ್ಷ ಕೇವಲ ಒಂದು ದಿನ ಮಾತ್ರ ಒಂದು ಕೋಟಿ ಲೀಟರ್‌ ಹಾಲು ಸಂಗ್ರಹವಾಗಿತ್ತು. ಪ್ರಸ್ತುತ ಪ್ರತಿ ದಿನ ಸರಿ ಸುಮಾರು 1.01 ಕೋಟಿ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಏ.1ರಿಂದ ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿಗೆ 4 ರು.ಹೆಚ್ಚಳ ಮಾಡಿದ್ದರಿಂದ ಮೇ 23ರಿಂದ ಇಲ್ಲಿಯವರೆಗೆ ನಿರಂತರವಾಗಿ ಒಂದು ಕೋಟಿ ಲೀಟರ್‌ಗೂ ಅಧಿಕ ಹಾಲು ಸಂಗ್ರಹವಾಗುತ್ತಿದೆ. ರೈತರು ಉತ್ಪಾದಿಸುವ ಹಾಲು ಖರೀದಿ ಮಾಡಲೇಬೇಕಿದೆ. ಆದ್ದರಿಂದ ಈ ದರ ಹೆಚ್ಚಳ ಅನಿವಾರ್ಯ ಎಂದರು.

ತಿಂಗಳಿಗೆ 2500 ಮೆಟ್ರಿಕ್‌ ಟನ್‌ ತುಪ್ಪ ಮಾರಾಟವಾಗುತ್ತದೆ. ಸರಾಸರಿ ದಿನಕ್ಕೆ 80ರಿಂದ 90 ಟನ್‌ ಮಾರಾಟ ಆಗುತ್ತದೆ. ತುಪ್ಪ ಹೆಚ್ಚು ಮಾರಾಟವಾಗುತ್ತಿರುವುದು ಕರ್ನಾಟಕದಲ್ಲಿ ಮಾತ್ರ. ಮುಂಬೈ ಸೇರಿ ದೇಶ-ವಿದೇಶಗಳಲ್ಲೂ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಆದರೆ ಪೂರೈಕೆ ಕಡಿಮೆಯಾಗಿದೆ. ದರ ಹೆಚ್ಚಳದಿಂದ ತುಪ್ಪದ ಮಾರಾಟದ ಮೇಲೆ ಹೆಚ್ಚಿನ ಪರಿಣಾಮ ಬೀರಲ್ಲ. ಏಕೆಂದರೆ ನಂದಿನಿ ತುಪ್ಪ ಮತ್ತು ಬೆಣ್ಣೆಯ ಗುಣಮಟ್ಟ ಚೆನ್ನಾಗಿದೆ. ಬೆಲೆಯೂ ಇತರ ಖಾಸಗಿ ಸಂಸ್ಥೆಗಳ ತುಪ್ಪ, ಬೆಣ್ಣೆಗಿಂತ ಕಡಿಮೆಯಿದೆ ಎಂದ ಅವರು, ಹಾಲಿನ ದರ ಏರಿಕೆ ಕುರಿತು ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದರು.