ಆಗ ಕನಸಿನಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬಂದು ಇಲ್ಲಿತನಕ ನಾನು ನಿನ್ನನ್ನು ಹಿಂಬಾಲಿಸಿದ್ದೇನೆ, ನಾನು ಇಲ್ಲಿಯೇ ನೆಲೆಸಲು ಅಪೇಕ್ಷಿಸುತ್ತೇನೆ. ನಿನ್ನ ಬಳಿಗೆ ಬಲ್ಲಾಳರಾಯನನ್ನು ಎಚ್ಚರಿಸಿ ಇಲ್ಲಿಗೆ ಕಳುಹಿಸುತ್ತೇನೆ.
ಕನ್ನಡಪ್ರಭ ವಾರ್ತೆ ಅರಕಲಗೂಡು
ನಾಡಿನ ‘ದಕ್ಷಿಣ ಕಾಶಿ’ ಖ್ಯಾತಿಯ ರಾಮನಾಥಪುರದಲ್ಲಿ ನ. 26ರಂದು ನಡೆಯುವ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಜಾತ್ರೆಯ ಸಡಗರ ಮೇಳೈಸಿದೆ.ಸುಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಮೈಸೂರು ಸೀಮೆ ಭಾಗದಲ್ಲಿ ನಡೆಯುವ ಮೊದಲ ಜಾತ್ರಾ ಮಹೋತ್ಸವ ಎಂಬ ಪ್ರಸಿದ್ಧಿಗೆ ಪಾತ್ರವಾಗಿರುವ ರಾಮನಾಥಪುರ ಶ್ರೀ ಸುಬ್ರಹ್ಮಣ್ಯಸ್ವಾಮಿ ರಥೋತ್ಸವದ ಯಶಸ್ಸಿಗೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸ್ಥಳೀಯ ಗ್ರಾಪಂ ಸಹಕಾರದಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.
ದೇವಸ್ಥಾನದಲ್ಲಿ ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಯಾಗಶಾಲಾ ಪ್ರವೇಶ, ಅಂಕುರಾರ್ಪಣ, ಮಯೂರ ವಾಹನೋತ್ಸವ, ಅಶ್ವ ವಾಹನೋತ್ಸವ, ಶೇಷ ವಾಹನೋತ್ಸವ, ಪಂಚಮಿ ಉತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಗಿದೆ. ಶನಿವಾರ ನಡೆಯುವ ಮಹಾ ರಥೋತ್ಸವಕ್ಕೆ 35ಅಡಿ ಎತ್ತರದ ರಥ ಸಿಂಗಾರಗೊಳ್ಳುತ್ತಿದೆ. ಬೆಳಗ್ಗೆ ಪೂಜಾ ವಿಧಾನಗಳನ್ನು ಪೂರೈಸಿದ ಬಳಿಕ ಅಲಂಕೃತ ರಥದ ಮೇಲೆ ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಭಕ್ತರ ಸಂಭ್ರಮದ ನಡುವೆ ಮಧ್ಯಾಹ್ನ 12 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ತೇರು ಎಳೆಯಲಿದ್ದಾರೆ.ಜಾತ್ರಾ ಮಹೋತ್ಸವ ರಂಗು ಪಡೆದುಕೊಂಡಿದ್ದು, ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಒಳಾಂಗಣದಲ್ಲಿ ಆಕರ್ಷಕವಾದ ಹೂವಿನ ತೋರಣ ಕಟ್ಟುವ ಕಾರ್ಯ ಸಾಗಿದೆ. ಷಷ್ಠಿ ಜಾತ್ರೆ ಪ್ರಯುಕ್ತ ದೇವಸ್ಥಾನದ ರಥ ಬೀದಿ ಹಾಗೂ ಶ್ರೀ ರಾಮೇಶ್ವರ ದೇವಾಲಯ ಬೀದಿಯಲ್ಲಿ ವಿವಿಧ ಜಾತ್ರೆ ವ್ಯಾಪಾರ ಮಳಿಗೆಗಳು ತಲೆ ಎತ್ತಿವೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಖಾಸಗಿ ಭೂಮಿಯಲ್ಲಿ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ತಾತ್ಕಾಲಿಕವಾಗಿ ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಹಾಗೂ ಕಾವೇರಿ ನದಿಯ ಸ್ನಾನಘಟ್ಟಗಳಲ್ಲಿ ಹೂಳೆತ್ತಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.
ಸುಕ್ಷೇತ್ರದ ಇತಿಹಾಸ ಪ್ರಸಿದ್ಧ ಶ್ರೀ ರಾಮೇಶ್ವರ, ಅಗಸ್ತೇಶ್ವರ, ಪಟ್ಟಾಭಿರಾಮ ಸೇರಿ ಅನೇಕ ದೇವಸ್ಥಾನಗಳಿವೆ. ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಸಾಕಷ್ಟು ಭಕ್ತಗಣ ಹೊಂದಿದ್ದು ಜಾತ್ರೆಯ ವೈಭವಕ್ಕೆ ಮೆರಗು ನೀಡಲಿದೆ.ದೇವಾಲಯದ ಐತಿಹಾಸಕ ಮಹತ್ವ:
ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯ ನಿರ್ಮಾಣದ ಹಿಂದೆ ಐತಿಹ್ಯವಿದೆ. ಕುಕ್ಕೆ ಸುಬ್ರಹ್ಮಣ್ಯ ಮಠದ ಗುರು ಪರಂಪರೆಯ 14ನೇಯ ಶ್ರೀ ವಿಭುದೇಶ ತೀರ್ಥ ಪಾದಂಗಳವರು ಯಾತ್ರಾರ್ಥವಾಗಿ ಹೊರಟು ಶ್ರೀ ಕ್ಷೇತ್ರ ರಾಮನಾಥಪುರಕ್ಕೆ ಬಂದು ಇಲ್ಲಿಯ ಸಂಕ್ರಾಂತಿ ಮಂಟಪದಲ್ಲಿ ಬಿಡಾರ ಹೂಡಿದ್ದರು. ಆಗ ಕನಸಿನಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬಂದು ಇಲ್ಲಿತನಕ ನಾನು ನಿನ್ನನ್ನು ಹಿಂಬಾಲಿಸಿದ್ದೇನೆ, ನಾನು ಇಲ್ಲಿಯೇ ನೆಲೆಸಲು ಅಪೇಕ್ಷಿಸುತ್ತೇನೆ. ನಿನ್ನ ಬಳಿಗೆ ಬಲ್ಲಾಳರಾಯನನ್ನು ಎಚ್ಚರಿಸಿ ಇಲ್ಲಿಗೆ ಕಳುಹಿಸುತ್ತೇನೆ, ಅವನ ಜೊತೆಗೆ ಹೊಳೆನರಸೀಪುರದ ಪಾಳೇಗಾರ ನರಸಪ್ಪನಾಯಕನ ಸಹಾಯದಿಂದ ನನ್ನನ್ನು ಇಲ್ಲಿ ಪ್ರತಿಷ್ಠಾಪಿಸುವಂತೆ ಹೇಳಿ ಹೊಳೆನರಸೀಪುರ ಪಾಳೇಯಗಾರ ನರಸಪ್ಪನಾಯಕನಿಗೂ ಕಾಣಿಸಿಕೊಂಡು, ರಾಮನಾಥಪುರದಲ್ಲಿ ಗುರುಗಳ ಇಚ್ಛೆಯಂತೆ ನಡೆದುಕೊಂಡರೆ ನಿನಗೆ ಸಂತಾನ ಪ್ರಾಪ್ತಿಯಾಗುವುದು ಎಂದು ಕಳುಹಿಸಿ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀ ವಿಭುದೇಶ ತೀರ್ಥರು ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿರುವ ಕುರಿತು ಇತಿಹಾಸದಲ್ಲಿ ಉಲ್ಲೇಖವಾಗಿದೆ.ಈ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದು, ಸಾಕಷ್ಟು ದೊಡ್ಡದಾದ ದೇವಾಲಯವಾಗಿದೆ. ಅಂದಿನಿಂದಲೂ ಜಾತ್ರೆ ಉತ್ಸವಗಳು ಇಲ್ಲಿ ನಡೆಯುತ್ತಿವೆ. ಪಂಚಮಿಯಂದು ರಥೋತ್ಸವ ನಡೆಯುತ್ತದೆ. ಮಾರ್ಗಶಿರ ಶುದ್ಧ ಷಷ್ಠಿಯಂದು ನಡೆಯುವ ರಥೋತ್ಸವ ಮೈಸೂರು ಸೀಮೆಯ ಜಾತ್ರೆಯ ಪೈಕಿ ರಾಮನಾಥಪುರದ ರಥೋತ್ಸವ ಪ್ರಥಮವಾಗಿದೆ. ರಥವನ್ನು ವಿವಿಧ ಅಲಂಕಾರಗಳಿಂದ ವರ್ಣರಂಜಿತವಾಗಿಸಿ ತೇರಿನಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿ ರಥ ಎಳೆಯುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಯಾತ್ರಾರ್ಥಿಗಳು ಪಾಲ್ಗೊಂಡು ದೇವರ ದರ್ಶನಕ್ಕೆ ಪಾತ್ರರಾಗುತ್ತಾರೆ.
ಮಹಾ ರಥೋತ್ಸವ ಜರುಗಿದ ದಿನದಿಂದ ಒಂದು ತಿಂಗಳವರೆಗೂ ಜಾತ್ರೆ ನಡೆಯುತ್ತದೆ. ನಂತರ ಡಿ. 26ರಂದು ‘ತಿಂಗಳ ಷಷ್ಠ್ಟಿ’ ತೇರು ನೆರವೇರುತ್ತದೆ. ಏಪ್ರಿಲ್- ಮೇ ತಿಂಗಳ ವೈಶಾಖಮಾಸದಲ್ಲಿ ಇಂದ್ರಾಕ್ಷಮ ವಿಗ್ರಹದ ರಥೋತ್ಸವ ಇರುತ್ತದೆ. ಈ ಕ್ಷೇತ್ರದಲ್ಲಿ ಮಾಘ ಬಹುಳ ಮಹಾಶಿವರಾತ್ರಿ ಮರುದಿನ ಅಗಸ್ತ್ಯೇಶ್ವರ, ವೈಶಾಖ ಶುದ್ಧ ಮೃಗಶಿರ ನಕ್ಷತ್ರದಲ್ಲಿ ಪಟ್ಟಾಭಿರಾಮ ಮತ್ತು ವೈಶಾಖ ಶುದ್ಧ ಚತುರ್ದಶಿ ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ.---------
‘ರಾಮನಾಥಪುರ ಜಾತ್ರೆ ಈ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಪಂ ವತಿಯಿಂದ ಸ್ವಚ್ಛತೆ ಕಾರ್ಯ ನಡೆಸಲಾಗಿದೆ. ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುವುದು. ಪೂಜೆ ಸಲ್ಲಿಸುವಾಗ ನೂಕು ನುಗ್ಗಲು ತಪ್ಪಿಸುವ ಸಲುವಾಗಿ ಬ್ಯಾರಿಕೇಡ್ ನಿರ್ಮಿಸಿ ಸರದಿ ಸಾಲಿನಲ್ಲಿ ಬರಲು ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ಹಣ್ಣು- ತುಪ್ಪ ನೈವೇದ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದ ಅವ್ಯವಸ್ಥೆ ಎದುರಾಗದಂತೆ ಭಕ್ತರು ಸಹಕಾರ ನೀಡಬೇಕು.’-ರಮೇಶ್ ಭಟ್ ನೆಲ್ಲಿತೀರ್ಥ, ದೇವಸ್ಥಾನ ಪಾರುಪತ್ತೇದಾರ್, ರಾಮನಾಥಪುರ.