ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ನಿರಂತರವಾಗಿ ಮಳೆ ಸುರಿದಿದೆ. ಭಾರಿ ಮಳೆ ಬಿದ್ದ ಪರಿಣಾಮ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ತೊಂದರೆಗಳು ಉಂಟಾಗಿದೆ. ಪಟ್ಟಣ ವ್ಯಾಪ್ತಿಯ ಎಲ್‌ಐಸಿ ಕಚೇರಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ೧೭ರ ಅಂಚಿನಲ್ಲಿರುವ ಗುಡ್ಡ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿಯ ಮೇಲೆ ಬಿದ್ದ ಮಣ್ಣನ್ನು ಐಆರ್‌ಬಿ ಜೆಸಿಬಿ ಮತ್ತು ಸಿಬ್ಬಂದಿ ಮೂಲಕ ತೆರವುಗೊಳಿಸಲಾಗಿದೆ. ತಹಶೀಲ್ದಾರ ಸ್ಥಳ ಪರಿಶೀಲನೆ ನಡೆಸಿದರು. ಮಣ್ಣು ಬಿದ್ದ ಹಿನ್ನೆಲೆ ರಸ್ತೆಯಲ್ಲಿ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಲ್ಲದೆ ಮಣ್ಣು ಇನ್ನಷ್ಟು ಕುಸಿಯಬಹುದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮದ ಸಲುವಾಗಿ ಗುಡ್ಡ ಕುಸಿಯಬಹುದಾದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.ಕಾಸರಕೋಡಿನ ಸಮೀಪದ ಹೊಸ ಪಟ್ಟಣ ಗ್ರಾಮದ ಧರ್ಮ ಗೌಡರಿಗೆ ಸಂಬಂಧಿಸಿದ ಭಾಗಾಯ್ತು ತೋಟದಲ್ಲಿ ಕಾಡು ಜಾತಿಯ ಮರವೊಂದು ಮುರಿದು ಬಿದ್ದು ಅಂದಾಜು 13 ಅಡಕೆ ಮರಗಳು ಹಾನಿಯಾಗಿವೆ. ಇನ್ನು ಸಾಲಕೋಡ್ ಗ್ರಾಪಂ ವ್ಯಾಪ್ತಿಯ ಕವಲಕ್ಕಿಯಿಂದ ಕೆರೆಮನೆ ಕಚ್ಚರಿಕೆ ಹೋಗುವ ರಸ್ತೆ ಕುಸಿದಿರುತ್ತದೆ. ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬ ನೆಲಕ್ಕೆ ಉರುಳಿದ್ದು ಯಾವುದೇ ಜನ-ಜಾನುವಾರುಗಳಿಗೆ ಹಾನಿ ಸಂಭವಿಸಿಲ್ಲ. ಸೀಮಾ ವೆಂಕಟ್ರಮಣ ಹಳ್ಳೇರ ಜಲವಳ್ಳಿ ಇವರ ವಾಸ್ತವ್ಯದ ಮನೆಯ ಪಕ್ಕ ಇರುವ ಧರೆ ಕುಸಿದು ಮನೆಗೆ ಹಾನಿ ಆಗಿರುತ್ತದೆ. ಯಾವುದೇ ಜೀವಹಾನಿ ಆಗಿರುವುದಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಸದ್ರಿ ಮನೆಯ ಜನರಿಗೆ ವಾಸ್ತವ್ಯ ಬದಲಿಸಲು ತಿಳಿಸಲಾಗಿದೆ. ಹೊನ್ನಪ್ಪ ಗಣಪತಿ ನಾಯ್ಕ ಹೊಳೆಬದಿಕೇರಿ ಜಲವಳ್ಳಿ ಇವರ ಮನೆಯ ಮೇಲೆ ತೆಂಗಿನ ಮರ ಮುರಿದುಬಿದ್ದು ಮನೆಗೆ ಹಾನಿ ಆಗಿದೆ. ಈ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಳಿದಂತೆ ಮಳೆ ಇನ್ನು ಜೋರಾಗಿ ಬೀಳುತ್ತಿದ್ದು ತಾಲೂಕಿನ ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಹಾಗೂ ಮರಗಳು ಬೀಳುವ ಭಯದಲ್ಲಿ ಜನರು ಕಳೆಯುವಂತಾಗಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಕರೆಂಟ್ ಹಾಗೂ ಮೊಬೈಲ್ ಸಿಗ್ನಲ್ ಸಂಪರ್ಕಗಳು ಕಡಿತಗೊಂಡು ಜನರು ಪರತಪಿಸುವಂತಾಗಿದೆ. ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ ಇರುವುದರಿಂದ ಇನ್ನೆರಡು ಮೂರು ದಿನ ಮಳೆ ಬೀಳುವ ಲಕ್ಷಣಗಳು ದಟ್ಟವಾಗಿದೆ.