ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಮುಂಗಾರು ಮಳೆ ಇಲ್ಲದೇ ಕೆರೆ ಕಟ್ಟೆಗಳು ಸಂಪೂರ್ಣ ಬರಿದಾಗಿವೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಹೋಗಿದ್ದು, ಇದರಿಂದ ರೈತರ ಕೊಳವೆಬಾವಿಗಳು ಬತ್ತುತ್ತಿವೆ. ಇತ್ತ ಸಿಂಗಟಾಲೂರು ಬ್ಯಾರೇಜ್‌ಗೂ ಶೂನ್ಯ ಒಳ ಹರಿವು ಇದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕುಡಿವ ನೀರಿಗೂ ಕುತ್ತು ಬರಲಿದೆ.ಮಲೆನಾಡು ಪ್ರದೇಶದಲ್ಲಿ ಮಳೆ ಇಲ್ಲದೇ ತುಂಗಭದ್ರಾ ನದಿ ಬಹುತೇಕ ಬತ್ತಿ ಹೋಗುತ್ತಿದೆ. ಸಿಂಗಟಾಲೂರು ಬ್ಯಾರೇಜ್ 509 ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಸದ್ಯ 507.04 ಅಡಿಗಳಷ್ಟು ಅಂದರೆ 2.2 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಮಳೆ ಇಲ್ಲದ ಸ್ಥಿತಿ ಹೀಗೆ ಇದ್ದರೇ ಈ ನೀರು 2 ತಿಂಗಳಿಗೆ ಮಾತ್ರ ಇರಲಿದೆ. ಶೂನ್ಯ ಒಳ ಹರಿವು ಹಿನ್ನೆಲೆಯಲ್ಲಿ ಆದ್ಯತೆ ಕುಡಿವ ನೀರಿಗೆ ನೀಡಲಾಗಿದೆ. ಯೋಜನೆಯ ಕಾಲುವೆಗಳಿಗೆ ಮತ್ತು ಕೆರೆಗಳಿಗೆ ನೀರು ಹರಿಯುವುದಿಲ್ಲ. ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಬಂದರೆ ಮಾತ್ರ ರೈತರ ಜಮೀನುಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಬ್ಯಾರೇಜ್ ಹೊರಹರಿವು ಕೂಡ ಶೂನ್ಯ ಇರುವ ಕಾರಣ ಹಗರಿಬೊಮ್ಮನಹಳ್ಳಿ, ಕೊಪ್ಪಳ, ಕೊಟ್ಟೂರು ಸೇರಿದಂತೆ ಬ್ಯಾರೇಜ್ ಕೆಳಗಿನ ಪ್ರದೇಶದಲ್ಲಿರುವ ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿಗೆ ನೀರಿಲ್ಲದೇ ಜನ ತೊಂದರೆ ಅನುಭವಿಸುತ್ತಿದ್ದಾರೆ.ಮಳೆಗಾಲದಲ್ಲಿಯೂ ನದಿ ತೀರದ ಗ್ರಾಮಗಳ ಹೊರತು ಪಡಿಸಿ ಉಳಿದ ಗ್ರಾಮಗಳಲ್ಲಿ, ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮೀಣ ಕುಡಿವ ನೀರು, ನೈರ್ಮಲ್ಯ ಇಲಾಖೆಯು ವಿವಿಧ ಕಡೆಗಳಲ್ಲಿನ 7 ರೈತರ ಕೊಳವೆಬಾವಿಗಳ ಬಾಡಿಗೆ ಪಡೆದು ಜನರಿಗೆ ನೀರು ಒದಗಿಸುತ್ತಿದ್ದಾರೆ.
ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ, ಹಳೆ ಕೊಳವೆಬಾವಿಗಳ ರೀ ಬೋರಿಂಗ್, ಪೈಪ್‌ಲೈನ್, ಹೊಸ ಕೊಳವೆಬಾವಿಗಳ ಕೊರೆಸುವುದು ಹೀಗೆ, 18 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಗತ್ಯ ಕ್ರಮಗಳ ಕೈಗೊಳ್ಳಲಾಗಿದೆ. ಕುಡಿವ ನೀರಿಗಾಗಿ ಬಾಡಿಗೆ ಪಡೆದ ರೈತರ ಕೊಳವೆ ಬಾವಿಗಳಿಗೆ, ಅಂತರ್ಜಲ ಕುಸಿದ ಪರಿಣಾಮ ನೀರಿಲ್ಲದೇ ಬತ್ತಿ ಹೋಗಿವೆ. ಕೊಳವೆಬಾವಿ ನೀರು ನೆಚ್ಚಿಕೊಂಡು ಬಿತ್ತನೆ ಮಾಡಿರುವ ರೈತರ ಕೊಳವೆ ಬಾವಿಗಳು ಬತ್ತಿರುವುದರಿಂದ ಬೆಳೆಗಳನ್ನು ರೈತರು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತೋಟಗಾರಿಕೆ, ರೇಷ್ಮೆ ಬೆಳೆಗಳು ಕೂಡ ನೀರಿಲ್ಲದೇ ಒಣಗಿ ಹೋಗಿವೆ. ರೈತರಿಗೆ ಆತಂಕ ಎದುರಾಗಿದೆ.
ನೀರು ಪೂರೈಕೆ:ಕುಡಿವ ನೀರಿಗಾಗಿ ₹50 ಲಕ್ಷ ಕ್ರಿಯಾ ಯೋಜನೆ ರೂಪಿಸಿ, 18 ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. 7 ರೈತರ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಕೆ ಮಾಡಿದ್ದೇವೆ ಎನ್ನುತ್ತಾರೆ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕೆ.ಪ್ರದೀಪಕುಮಾರ ಎಇಇ.
ಮಲೆನಾಡಿನಲ್ಲಿ ಮಳೆ ಇಲ್ಲದೇ ಸಿಂಗಟಾಲೂರು ಬ್ಯಾರೇಜ್‌ಗೆ ಒಳಹರಿವು ಇಲ್ಲ. ಸದ್ಯ 2.2 ಟಿಎಂಸಿ ನೀರು ಸಂಗ್ರಹವಾಗಿದೆ. ಇದು 2 ತಿಂಗಳಿಗೆ ಮಾತ್ರ ಆಗಲಿದೆ. ಉಳಿದಂತೆ ಕೆರೆಗಳು, ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ರಾಘವೇಂದ್ರ.ಕೊಳವೆಬಾವಿ ನೀರು ನಂಬಿಕೊಂಡು ರೇಷ್ಮೆ ಕೃಷಿ ಮಾಡಿದ್ದೇವೆ. ಮಳೆ ಇಲ್ಲದೇ ಅಂತರ್ಜಲ ಪಾತಾಳಕ್ಕೆ ಹೋಗಿದೆ. ಇದರಿಂದ ಇದ್ದ 2 ಕೊಳವೆಬಾವಿಗಳು ಬತ್ತಿ ಹೋಗಿವೆ. ರೈತನ ಬದುಕು ನಿತ್ಯ ಮುಗಿಲತ್ತ ನೋಡುವಂತಾಗಿದೆ ಎನ್ನುತ್ತಾರೆ ಮಾಗಳ ರೈತ ಡಿ.ಕೋಟೆಪ್ಪ.