ಹೆಲ್ಮೆಟ್ ಜಾಗೃತಿ ಮೂಡಿಸಿದ ಪ್ರವಾಸಿಗರು

| Published : Oct 07 2025, 01:03 AM IST

ಸಾರಾಂಶ

ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಇಲ್ಲಿನ ಪೊಲೀಸ್ ಠಾಣೆಯಿಂದ ಸೋಮವಾರ ನಡೆಯಿತು.

ಗೋಕರ್ಣ:

ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಇಲ್ಲಿನ ಪೊಲೀಸ್ ಠಾಣೆಯಿಂದ ಸೋಮವಾರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಸ್ಐ ಖಾದರ ಬಾಷಾ, ಬೈಕ್ ಸವಾರರು ತಮ್ಮ ಸುರಕ್ಷತೆ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಟೆಟ್ ಧರಿಸಬೇಕು. ಅದೆಷ್ಟೂ ಅಪಘಾತದಲ್ಲಿ ಹೆಲ್ಮೆಟ್ ಧರಿಸಿರುವುದರಿಂದ ಸವಾರರ ಜೀವ ಉಳಿದಿದೆ. ಹೀಗೆ ಜೀವ ರಕ್ಷಣೆ ಜೊತೆಯಲ್ಲಿ ಸವಾರರ ನಂಬಿದ ಕುಟುಂಬದವರಿಗೂ ಸುರಕ್ಷತೆಯ ಭರವಸೆ ದೊರೆಯಲಿ ಎಂದ ಅವರು, ನಿತ್ಯ ಬೈಕ ಓಡಿಸುವಾಗ ಹೆಲ್ಮೆಟ್ ಧರಸುತ್ತೇನೆ ಎಂದು ಪ್ರತಿಜ್ಞೆ ಸ್ವೀಕರಿಸಿ ಸುರಕ್ಷತೆಯ ಪ್ರಯಾಣ ಮಾಡೋಣ ಎಂದು ಕರೆ ನೀಡಿದರು.

ಬಳಿಕ ಬೈಕ್‌ ಜಾಥಾ ಮೇಲಿನಕೇರಿಯಿಂದ ಗಂಜೀಗದ್ದೆ, ರಥಬೀದಿ ಮಾರ್ಗವಾಗಿ ಮುಖ್ಯಕಡಲತೀರಕ್ಕೆ ಸಾಗಿ ಮರಳಿತು. ಈ ಜಾಥಾದಲ್ಲಿ ಎಎಸ್ಐ, ಹವಾಲ್ದಾರ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದು, ಪ್ರವಾಸಿಗರು ಇವರ ಜೊತೆಯಾಗಿ ಸಾಗಿ ಹೆಲ್ಮೆಟ್ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಹೆಲ್ಮೆಟ್ ಧರಿಸದ ಸವಾರರಿಗೆ ಹೂಮಾಲೆ ಹಾಕಿ ಸನ್ಮಾನ:

ಜೋಯಿಡಾದಲ್ಲಿ ಸೋಮವಾರ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಯಿತು. ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ , ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ, ಪಿಎಸ್ಐ ಮಹೇಶ ಮಾಳಿ, ಪಿಎಸ್ಐ ಮಹಾದೇವಿ ನೈಕೋಡಿ ನೇತೃತ್ವ ವಹಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ, ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಸಹಕಾರ ನೀಡಿದರು. ಈ ಜಾಗೃತಿ ಸಂದರ್ಭದಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಎಷ್ಟು ಮುಖ್ಯ ಎಂಬ ಅರಿವನ್ನು ಮೂಡಿಸಲಾಯಿತು. ಹೆಲ್ಮೆಟ್ ಧರಿಸದ ಸವಾರರಿಗೆ ಹೂಮಾಲೆ ಹಾಕಿ ಸನ್ಮಾನಿಸಲಾಯಿತು. ಇದರಿಂದ ಜನರಲ್ಲಿ ಜಾಗೃತಿಯಾಗಲಿ, ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿ ಜೀವ ಅಪಾಯದಿಂದ ಪಾರಾಗಲಿ ಎಂಬ ಉದ್ದೇಶದಿಂದ ಈ ಅಭಿಯಾನ ಮಾಡಲಾಯಿತು ಎಂದು ಪಿಎಸ್ಐ ಮಹೇಶ ಮಾಳಿ ತಿಳಿಸಿದರು.