ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾವರ
ಕೊಡಾಣಿ ಗ್ರಾಪಂ ಕಚೇರಿಯನ್ನು ಈಗ ನಡೆಸುತ್ತಿರುವ ಸಭಾಭವನದಲ್ಲಿಯೇ ಮುಂದುವರಿಸಬೇಕು. ಬೇರಂಕಿಯ ಮೂಲ ಸ್ಥಳದಲ್ಲಿ ಬೇಡ ಎಂದು ಆಗ್ರಹಿಸಿ ಗ್ರಾಪಂ ವ್ಯಾಪ್ತಿಯ ಕೊಡಾಣಿ, ಅನಿಲಗೋಡ, ಹಿನ್ನೂರು ಗ್ರಾಮಸ್ಥರು ಸೋಮವಾರ ತಾಪಂ ಹಾಗೂ ತಹಸೀಲ್ದಾರ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಶರಾವತಿ ನದಿಯ ದಡದಲ್ಲಿದ್ದ ಕೊಡಾಣಿ ಗ್ರಾಪಂ ಕಚೇರಿಯನ್ನು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವರದಿ ನೀಡಿದ ಹಿನ್ನೆಲೆ ಕೊಡಾಣಿ ಗ್ರಾಮದ ರಸ್ತೆ ಪಕ್ಕದಲ್ಲಿರುವ ಸಭಾಭವನಕ್ಕೆ ಮಳೆಗಾಲದಲ್ಲಿ ಸ್ಥಳಾಂತರಿಸಲಾಗಿತ್ತು. ಗ್ರಾಪಂ ಕಚೇರಿಯನ್ನು ಪುನಃ ಮೂಲಸ್ಥಾನಕ್ಕೇ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಬೇರಂಕಿ ಗ್ರಾಮದ ಜನರು ಅ. 3 ರಂದು ತಾಪಂ ಹಾಗೂ ತಹಸೀಲ್ದಾರ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಕೊಡಾಣಿ ಗ್ರಾಪಂ ವ್ಯಾಪ್ತಿಯ ಉಳಿದ ಮೂರು ಗ್ರಾಮಗಳ ಜನರು ಹಾಗೂ ಗ್ರಾಪಂ ಪ್ರಸ್ತುತ ಇರುವ ಏಳು ಸದಸ್ಯರಲ್ಲಿ ಅಧ್ಯಕ್ಷರೂ ಸೇರಿದಂತೆ ಐದು ಸದಸ್ಯರು, ಗ್ರಾಪಂ ಕಚೇರಿ ಈಗ ಸ್ಥಳಾಂತರ ಗೊಂಡಿರುವ ಸಭಾಭವನದಲ್ಲೆ ಮುಂದುವರಿಯಬೇಕು ಎಂದು ಮನವಿ ಸಲ್ಲಿಸಿದ್ದಾರೆ.ಈಗಾಗಲೇ ಸ್ಥಳಾಂತರ ಮಾಡಿರುವ ಜಾಗ ಹೊನ್ನಾವರ-ಮಣ್ಣಿಗೆ-ನಗರಬಸ್ತಿಕೇರಿ ಮುಖ್ಯ ರಸ್ತೆಬಳಿ ಇದ್ದು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಅನುಕೂಲಕರವಾದ ಮಧ್ಯದ ಸ್ಥಳವಾಗಿದೆ. ಗ್ರಾಪಂ ಕಚೇರಿಯನ್ನು ಇಲ್ಲಿಯೇ ಮುಂದುವರಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚು ಲಾಭವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮೂಲಸ್ಥಾನದಲ್ಲಿರುವ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅಲ್ಲದೆ ಇಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆಯೆಂದು ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ. ಅಲ್ಲದೇ ಇಲ್ಲಿಗೆ ಹೋಗಲು ಸರಿಯಾದ ರಸ್ತೆ, ವಾಹನ ಸೌಲಭ್ಯವಿಲ್ಲ. ಆದ್ದರಿಂದ ಶರಾವತಿ ನದಿಬದಿ ಇರುವ ಮೂಲಸ್ಥಾನದಲ್ಲಿ ಕಚೇರಿ ಕಟ್ಟಡ ಸುರಕ್ಷಿತವೂ ಅಲ್ಲ, ಅನುಕೂಲವೂ ಇಲ್ಲ ಎಂದು ಮನವಿಯಲ್ಲಿ ವಿವರಿಸಿದ್ದಾರೆ.ಹಾಗಾಗಿ ಒಂದು ಗ್ರಾಮದ ಕೆಲವರ ಪ್ರತಿಭಟನೆಗೆ ಮಣಿದು ಈಗಿರುವ ಸಾರ್ವಜನಿಕರಿಗೆ ಅನುಕೂಲ ಆಗುವ ಸ್ಥಳದಿಂದ ಮೂಲಸ್ಥಾನಕ್ಕೆ ಸ್ಥಳಾಂತರಿಸಿದರೆ ಉಳಿದ ಮೂರು ಗ್ರಾಮಗಳ ಸಾರ್ವಜನಿಕರು ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ತಹಸೀಲ್ದಾರರ ಕಾರ್ಯಾಲಯದಲ್ಲಿ ತಹಸೀಲ್ದಾರ ಪ್ರವೀಣ ಕರಾಂಡೆ, ತಾಪಂ ಕಾರ್ಯಾಲಯದಲ್ಲಿ ಆಡಳಿತಾಧಿಕಾರಿ ಪರವಾಗಿ ಯೋಜನಾಧಿಕಾರಿ ಲತಾ ನಾಯ್ಕ ಮನವಿ ಸ್ವೀಕರಿಸಿದರು.ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ಉಪಾಧ್ಯಕ್ಷೆ ಸುಲೋಚನಾ ನಾಯ್ಕ, ಸದಸ್ಯರಾದ ಚೇತನಾ ಮಡಿವಾಳ, ಗೀತಾ ಗೊಂಡ, ವಿನಾಯಕ ಶ್ರೀಧರ ನಾಯಕ, ಮುಖಂಡರಾದ ರವಿ ರೊಡ್ರಗೀಸ್, ಸಾಯಿಲ್ ಮಡಿವಾಳ, ಎಂ.ಅರ್. ಹೆಗಡೆ, ಆರ್.ಎನ್. ಹೆಗಡೆ, ವಾಸುದೇವ ಕಿಣಿ ಮತ್ತಿತರರ ನೇತೃತ್ವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.