ಸಾರಾಂಶ
ಆದಾಯ ನಷ್ಟದ ಕಾರಣ ನೀಡಿ ರೈಲುಗಳ ನಿಲುಗಡೆ ರದ್ದುಗೊಳಿಸಿರುವ ಕಾರಣ ಕಮಲನಗರದಿಂದ ಹಾದು ಹೋಗುವ ನಾಂದೇಡ - ಬೆಂಗಳೂರು ( 16593 - 16594) ಹಾಗೂ ಸಾಯಿ ನಗರ ಶಿರಡಿಗೆ ಹೋಗುವ ಎಕ್ಸ್ ಪ್ರೆಸ್ ರೈಲುಗಳ ತಡೆ ಮಾಡಿದ್ದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದೆ.
ಕನ್ನಡಪ್ರಭ ವಾರ್ತೆ ಕಮಲನಗರ
ಆದಾಯ ನಷ್ಟದ ಕಾರಣ ನೀಡಿ ರೈಲುಗಳ ನಿಲುಗಡೆ ರದ್ದುಗೊಳಿಸಿರುವ ಕಾರಣ ಕಮಲನಗರದಿಂದ ಹಾದು ಹೋಗುವ ನಾಂದೇಡ - ಬೆಂಗಳೂರು ( 16593 - 16594) ಹಾಗೂ ಸಾಯಿ ನಗರ ಶಿರಡಿಗೆ ಹೋಗುವ ಎಕ್ಸ್ ಪ್ರೆಸ್ ರೈಲುಗಳ ತಡೆ ಮಾಡಿದ್ದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದೆ.ಸಾಯಿ ನಗರ ಶಿರಡಿ 2 ತಿಂಗಳಿನಿಂದ ಹಾಗೂ ನಾಂದೇಡ -ಬೆಂಗಳೂರು ಸೆಪ್ಟೆಂಬರ್ 19ರಿಂದ ಈ ರೈಲುಗಳ ನಿಲುಗಡೆ ರದ್ದುಗೊಳಿಸಿದ ದಕ್ಷಿಣ ಮಧ್ಯ ರೈಲ್ವೆ ಹಠಾತ್ ನಿರ್ಧಾರದಿಂದ ಸ್ಥಳಿಯರು ಮತ್ತು ವ್ಯಾಪಾರ ವರ್ಗ ಆತಂಕಗೊಂಡಿದೆ.
ಕಮಲನಗರ ಪಟ್ಟಣಕ್ಕೆ ಹೊಂದಿಕೊಂಡಿರುವ ಸುತ್ತಮುತ್ತಲಿನ ಹಳ್ಳಿಗರಿಗೆ ಈ ನಿಲ್ದಾಣವು ಕೇಂದ್ರವಾಗಿದ್ದು, ರೈಲ್ವೆ ಅಧಿಕಾರಿಗಳ ಈ ನಿರ್ಧಾರದಿಂದ ತೊಂದರೆ ಆಗುತ್ತಿದ್ದು, ದೂರದ ಭಾಲ್ಕಿ ಹಾಗೂ ಮಹಾರಾಷ್ಟ್ರದ ಉದಗಿರ ರೈಲ್ವೇ ನಿಲ್ದಾಣಗಳಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಶೀಘ್ರವೇ ಎಕ್ಸ್‌ಪ್ರೆಸ್ ರೈಲು ಆರಂಭಿಸಲು ಪ್ರಯತ್ನಿಸಬೇಕು. ರೈಲು ನಿಲ್ದಾಣದಲ್ಲಿ ಕೆಲವೊಂದು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅದನ್ನು ಗಂಭೀರ ವಾಗಿ ಪರಿಗಣಿಸಿ ಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು.
- ಸೋಮನಾಥ ಮುಧೋಳಕರಜಿಲ್ಲಾಧ್ಯಕ್ಷರು, ಕರವೇ (ನಾರಾಯಣ ಗೌಡ) ಬಣ
ಹೆಚ್ಚು ಟಿಕೆಟ್‌ಗಳು ಹಾಗೂ ರಿಜರ್ವೇಶನ್ ಆಗದಿರುವ ಕಾರಣ ಆದಾಯ ನಷ್ಟವಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಸಂಘಟನೆಗಳು ದಕ್ಷಿಣ ಮಧ್ಯ ರೇಲ್ವೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು, ಅವರ ಆದೇಶ ಬಂದರೆ ನಿಲುಗಡೆ ಮಾಡಲಾಗುವುದು.- ಶಶಿಧರ, ಕಮರ್ಷಿಯಲ್ ಇನ್ಸ್‌ಪೆಕ್ಟರ್, ದಕ್ಷಿಣ ಮಧ್ಯ ರೇಲ್ವೆ, ಸಿಕಿಂದರಾಬಾದ್ ವಿಭಾಗ