ಉಡುಪಿ : ಶಿಕ್ಷಣವು ಕೇವಲ ಅಕ್ಷರಾಭ್ಯಾಸ ಅಥವಾ ಪದವಿ ಪಡೆಯುವುದಲ್ಲ, ಅದು ಮನುಷ್ಯನ ವ್ಯಕ್ತಿತ್ವ ಮತ್ತು ಬದುಕನ್ನು ರೂಪಿಸುವ ಪ್ರಮುಖ ಅಸ್ತ್ರವಾಗಿದೆ ಎಂದು ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಅಭಿಪ್ರಾಯಪಟ್ಟರು.

ಅವರು ಶನಿವಾರ ಕಕ್ಕುಂಜೆ ಅನುಗ್ರಹ ಪಾಲನ ಕೇಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ, ದಿ. ತೆರೆಸಾ ಕರ್ನೆಲಿಯೋ ಕುಟುಂಬ ಕೆಮ್ಮಣ್ಣು, ಎಮ್ ಸಿ ಸಿ ಬ್ಯಾಂಕ್ ಹಾಗೂ ಕ್ಯಾಪ್ ಸೆಲ್ ಕಲ್ಯಾಣಪುರ ವಲಯ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉತ್ತಮ ಶಿಕ್ಷಣದಿಂದ ಉದ್ಯೋಗಾವಕಾಶಗಳು ದೊರೆತು, ವ್ಯಕ್ತಿ ಹಾಗೂ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇಂದು ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿದ್ದು ಅದರ ಸದುಪಯೋಗವನ್ನು ಪಡೆದು ಜೀವನದಲ್ಲಿ ಯಶಸ್ಸು ಹೊಂದುವತ್ತ ಕಾರ್ಯಪ್ರವೃತ್ತರಾಗಬೇಕು. ಶಿಕ್ಷಣ ಪಡೆದ ವ್ಯಕ್ತಿಗಳು ಸಮಾಜದ ಆಸ್ತಿಯಾಗಿ ಬದಲಾಗುತ್ತಾರೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎಂದರು.ಸಮಾಜಕ್ಕೆ ಮರಳಿ ನೀಡಿ: ಕೆಥೊಲಿಕ್ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕರಾದ ಅನಿಲ್ ಡಿಸೋಜಾ ಮಾತನಾಡಿ ನಾವು ಸಮಾಜದಿಂದ ಏನನ್ನು ಪಡೆದುಕೊಳ್ಳುತ್ತೇವೆ ಎನ್ನುವುದಕ್ಕಿಂತ, ಸಮಾಜಕ್ಕೆ ಏನನ್ನು ಮರಳಿ ನೀಡುತ್ತೇವೆ ಎನ್ನುವುದರಲ್ಲೇ ನಮ್ಮ ಜೀವನದ ನಿಜವಾದ ಯಶಸ್ಸು ಅಡಗಿದೆ. ಸ್ವಾರ್ಥಕ್ಕಾಗಿ ಬದುಕುವುದಕ್ಕಿಂತ, ಇತರರ ಮುಖದಲ್ಲಿ ನಗು ತರಿಸುವುದರಲ್ಲಿ ಅಥವಾ ಯಾರಿಗಾದರೂ ಸಹಾಯ ಮಾಡುವುದರಲ್ಲಿ ಸಿಗುವ ನೆಮ್ಮದಿ ಮತ್ತು ತೃಪ್ತಿ ಅಪಾರವಾದುದು ಎಂದರು. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಮ್ಯಾಕ್ಷಿಮ್ ಆರಾನ್ಹ ವಹಿಸಿದ್ದರು. ವಿದ್ಯಾರ್ಥಿವೇತನ ವಿತರಣೆ: ಕಾರ್ಯಕ್ರಮದಲ್ಲಿ ಸಮುದಾಯದ 100 ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಐಸಿಯು ರಾಜ್ಯ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕ್ಯಾಪ್ ಸೆಲ್ ಕಲ್ಯಾಣಪುರ ವಲಯದ ಸಂಚಾಲಕ ವಾಲ್ಟರ್ ಸಿರಿಲ್ ಪಿಂಟೊ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ನಿಯೋಜಿತ ಅಧ್ಯಕ್ಷರಾದ ಲೂವಿಸ್ ಡಿಸೋಜಾ, ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್ ಉಪಸ್ಥಿತರಿದ್ದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಕಾರ್ಯದರ್ಶಿ ಜುಲಿಯೆಟ್ ಗಿಲ್ಬರ್ಟ್ ಡಿಸೋಜಾ ಧನ್ಯವಾದವಿತ್ತರು. ಕಾರ್ಯಕ್ರಮದ ಸಂಚಾಲಕ ಡಾ. ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.