ಒಂದು ಕಡೆಯಿಂದ ಮತೊಂದು ಕಡೆಗೆ ಸಾಗುವುದು ಸಂಚಾರವಾಗಿದ್ದು, ಆ ಸಮಯದಲ್ಲಿ ಮಕ್ಕಳಲ್ಲಿ ಕಾಲ್ನಡಿಗೆ ಅಥವಾ ವಾಹನ ಚಾಲನೆಯ ಸುರಕ್ಷತೆಯ ಬಗ್ಗೆ ಆಲೋಚನೆ ಸಹ ಇರಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ರಾಮನಗರ

ಸಾರಿಗೆ ಸುರಕ್ಷತೆಯು ಶಿಕ್ಷಣದ ಪ್ರಮುಖ ಭಾಗವಾಗಿದ್ದು, ಸಂಚಾರಿ ನಿಯಮ, ಸುರಕ್ಷಿತ ಅಂಶಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು ಅತೀ ಮುಖ್ಯವಾಗಿದೆ ಎಂದು ಸಾರಿಗೆ ಇಲಾಖೆ ನಿವೃತ್ತ ಅಧೀಕ್ಷಕ ಎಂ.ಜಿ.ಎನ್.ಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಜಿಲ್ಲಾಡಳಿತ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

18ರ ವಯೋಮಾನದ ಒಳಗಿರುವ ಶಾಲಾ ಮಕ್ಕಳು ಕಾಲ್ನಡಿಗೆಯಲ್ಲಿ ರಸ್ತೆಯ ಬಳಕೆ ಮತ್ತು ವಾಹನಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಎಚ್ಚರಿಕೆ, ಜಾಗರೂಕತೆ ಜೊತೆಗೆ ರಸ್ತೆ ಸಂಚಾರದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಹೆಲ್ಮೆಟ್ ಬಳಕೆ, ಸಂಚಾರ ನಿಯಮ ಪಾಲನೆಗಳನ್ನು ತಿಳಿಸಿಕೊಡುವ ಕೆಲಸವನ್ನು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ತಿಳಿಸಲಾಗುತ್ತದೆ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್‌ ಬಾಬು ಮಾತನಾಡಿ, ಒಂದು ಕಡೆಯಿಂದ ಮತೊಂದು ಕಡೆಗೆ ಸಾಗುವುದು ಸಂಚಾರವಾಗಿದ್ದು, ಆ ಸಮಯದಲ್ಲಿ ಮಕ್ಕಳಲ್ಲಿ ಕಾಲ್ನಡಿಗೆ ಅಥವಾ ವಾಹನ ಚಾಲನೆಯ ಸುರಕ್ಷತೆಯ ಬಗ್ಗೆ ಆಲೋಚನೆ ಸಹ ಇರಬೇಕಾಗುತ್ತದೆ. ಹಾಗಾಗಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿ ಜಿಲ್ಲೆಯ ಮಕ್ಕಳಲ್ಲಿ ಸಂಚಾರಿ ನಿಯಮ ಪಾಲನೆಗಳು, ಹೆಲ್ಮೆಟ್ ಬಳಕೆ, ಸಿಗ್ನಲ್ ದೀಪದ ಬಗ್ಗೆ ಮನವರಿಕೆ, ಕೆಲವೆಡೆ ಗುರುತಿಸಲಾದ ಕುರುಡು ಚುಕ್ಕೆಗಳ ಕಡೆಯಿಂದ ವಾಹನವನ್ನು ಸಮೀಪಿಸದಿರುವುದು, ಜಾಗರೂಕತೆಯಿಂದ ಸಂಚಾರಿ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತೆಯ ನಾಯಕರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲಾ ವಿದ್ಯಾರ್ಥಿಗಳು ವಾಹನ ಸಂಚಾರಿ ನಿಯಮಗಳು, ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ನಿಯಮಗಳ ಉಲ್ಲಂಘನೆ, ಅವಘಡಗಳ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಉತ್ತರ ಪಡೆದುಕೊಂಡರು. ಈ ವೇಳೆ ಮೋಟಾರ್ ವಾಹನ ನಿರೀಕ್ಷಕಿ ಎನ್.ವಿದ್ಯಾ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದ ಮುಖ್ಯೋಪಾಧ್ಯಾಯ ಶಿವಸ್ವಾಮಿ, ಬಾಲಾಜಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕ ವಾಸು ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.