ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಾರಿಗೆ ಅಡ್ವೋಕೇಟ್ ಸ್ಟಿಕ್ಕರ್ ಹಾಕಿ ಅಕ್ರಮವಾಗಿ ಕಾರಿನಲ್ಲಿ ಗೋಮಾಂಸ ತುಂಬಿ ಮಾರಾಟ ಮಾಡಲು ಮುಂದಾದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ರಾಜ್ಯದಲ್ಲಿ ಗೋ ರಕ್ಷಣೆಗಾಗಿ ಪ್ರಬಲವಾದ ಕಾನೂನು ಇದ್ದರೂ ಕೂಡ ಪಟ್ಟಣದಲ್ಲಿ ಗೋವಿನ ಹತ್ಯೆ, ಅಕ್ರಮ ಗೋ ಸಾಗಾಟ, ಗೋ ಕಳ್ಳತನಗಳು ಸಾಮಾನ್ಯವಾಗಿದೆ. ಹಾಸನ ಕಡೆಯಿಂದ ಬೈಪಾಸ್ ರಸ್ತೆಯಲ್ಲಿ ಕೆಎ-೦೪ ಎಂಎ-೧೪೮೨ ಸ್ಯಾಂಟ್ರೋ ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿರುವ ಖಚಿತವಾದ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ದತ್ತಪೀಠ ಮುಕ್ತಿ ಹೋರಾಟ ಸಮಿತಿಯ ಕಾರ್ಯಕರ್ತರು ದೂರದಿಂದ ಕಾರನ್ನು ಹಿಂಬಾಲಿಸಿದಾಗ ಕಾರಿನ ಹಿಂಭಾಗದ ವಿನ್ ಸಿಲ್ಡ್ ಗ್ಲಾಸ್ ಮೇಲೆ ವಕೀಲರು ಎಂಬ ಸ್ಟಿಕ್ಕರ್ ಅಂಟಿಸಿ, ಕಾರಿನ ಒಳಗಡೆ ಟಾರ್ಪಲ್ ಹಾಕಿ ಮುಚ್ಚಲಾಗಿತ್ತು. ಕಾರಿನ ಒಳಗಡೆ ಗೋಮಾಂಸ ಇರುವುದನ್ನು ಖಚಿತ ಪಡಿಸಿಕೊಂಡ ಕಾರ್ಯಕರ್ತರು ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಠಾಣೆಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕಾರು ಸಕಲೇಶಪುರ ನಗರ ಬೈಪಾಸ್ ರಸ್ತೆಯಿಂದ ಕಪ್ಪಿನಕೋಡಿ ಸಮೀಪ ಕುಶಾಲನಗರ ಬಡಾವಣೆ ಒಳಗೆ ತಿರುಗುತ್ತಿದ್ದಂತೆ ತಡೆದು ಪರಿಶೀಲನೆ ನಡೆಸಿದ್ದಾರೆ. ಕಾರಿನ ಒಳಗೆ ಸುಮಾರು ೧೦೦ ಕೆ.ಜಿಗೂ ಅಧಿಕ ಗೋಮಾಂಸವಿದ್ದು ಹಾಸನ ಮೂಲದ ರೋಷನ್ ಎಂಬುವನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಕೆಲದಿನಗಳ ಹಿಂದಷ್ಟೇ ಪ್ರೆಸ್ ಎಂಬ ಸ್ಟಿಕ್ಕರ್ ಇದ್ದ ಸ್ಕಾರ್ಫಿಯೋ ಕಾರೊಂದರಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದದ್ದು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರು ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿದ್ದರು. ಇದೀಗ ಕಾರಿನ ಮೇಲೆ ಅಡ್ವೋಕೇಟ್ ಸ್ಟಿಕ್ಕರ್ ಹಾಕಿ ಈ ಗೋಮಾಂಸ ಮಾರಾಟ ಮಾಡಲು ಮುಂದಾಗಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಗೋಮಾಂಸ ಮಾರಾಟ ಮಾರುವವರು ಮಾತ್ರವಲ್ಲದೆ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಕೆಲವರು ಪ್ರೆಸ್, ಅಡ್ವೋಕೇಟ್, ಡಾಕ್ಟರ್‌ಗಳ ಸ್ಟಿಕ್ಕರನ್ನು ಕಾರುಗಳಿಗೆ ಅಂಟಿಸಿಕೊಂಡಿರುವುದು ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ.