ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೇ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಸರು ಪಡೆದಿತ್ತು. ಇದೀಗ ಧಾರವಾಡವನ್ನು ಪ್ರತ್ಯೇಕಿಸಿ ಪಾಲಿಕೆಯನ್ನಾಗಿ ಸರ್ಕಾರ ಘೋಷಿಸಿದೆ. ಆದರೆ, ಇದರಿಂದ ಹುಬ್ಬಳ್ಳಿಗೆ ಲಾಭವೋ? ಧಾರವಾಡಕ್ಕೆ ಲಾಭವೋ? ಎಂಬ ಜಿಜ್ಞಾಸೆ ಹುಟ್ಟುಕೊಂಡಿದೆ. ಈ ಬಗ್ಗೆ ಮಹಾನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ.
ಸ್ವಾತಂತ್ರ್ಯ ನಂತರ ಎರಡು ನಗರಗಳು ಪ್ರತ್ಯೇಕ ಸ್ಥಳೀಯ ಸಂಸ್ಥೆಗಳನ್ನೇ ಹೊಂದಿದ್ದವು. ಆಗ ಪುರಸಭೆಗಳಾಗಿದ್ದವು. ಮುಂದೆ 1962ರಲ್ಲಿ ಎರಡನ್ನು ಸೇರಿಸಿ ಹುಬ್ಬಳ್ಳಿ-ಧಾರವಾಡ ನಗರಸಭೆ ಎಂದು ಮಾಡಲಾಗಿತ್ತು. ಮುಂದೆ ಜನಸಂಖ್ಯೆಯಿಂದ 1995ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆನ್ನಾಗಿಸಲಾಯಿತು. 45 ವಾರ್ಡ್‌ಗಳಿಂದ ಶುರುವಾದ ಮಹಾನಗರ ಪಾಲಿಕೆ ಹಂತ-ಹಂತವಾಗಿ ಪರಿಷ್ಕರಣೆ ಹೊಂದುತ್ತಾ ಇದೀಗ 82 ವಾರ್ಡ್‌ಗಳಾಗಿ ಬೆಳೆದಿದೆ. ಇದೀಗ ಸರ್ಕಾರ ಆಡಳಿತಾತ್ಮಕ ವಿಕೇಂದ್ರೀಕರಣವಾಗಲಿ, ಅಭಿವೃದ್ಧಿಯೂ ಹೆಚ್ಚೆಚ್ಚು ಆಗಲಿ ಎಂಬ ಕಾರಣಕ್ಕೆ ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆಯನ್ನಾಗಿ ಆದೇಶಿಸಿದೆ.82 ವಾರ್ಡ್‌ಗಳಲ್ಲಿ 56 ವಾರ್ಡ್ ಹುಬ್ಬಳ್ಳಿಗೆ ಸೇರಿದರೆ, ಧಾರವಾಡಕ್ಕೆ 26 ವಾರ್ಡ್‌ಗಳು ಸೇರಿವೆ. ಇದೀಗ ಎದ್ದಿರುವ ಪ್ರಶ್ನೆಯೆಂದರೆ ಪ್ರತ್ಯೇಕಿಸಿರುವುದು ಹುಬ್ಬಳ್ಳಿಗೆ ಲಾಭವಾಗುತ್ತದೆಯೋ? ಧಾರವಾಡಕ್ಕೆ ಲಾಭವಾಗುತ್ತದೆಯೋ ಎಂಬ ಪ್ರಶ್ನೆ ಉದ್ಭವವಾಗಿದೆ.ಹೆಚ್ಚಿನ ಅನುದಾನ:
ಇದೀಗ ಒಂದೇ ಪಾಲಿಕೆಯಾಗಿದ್ದರಿಂದ ಬರುತ್ತಿದ್ದ ಅನುದಾನದಲ್ಲೇ ಎರಡು ನಗರಗಳು ಹಂಚಿಕೆ ಮಾಡಿಕೊಳ್ಳಬೇಕಿತ್ತು. ಆದರೆ, ಇದೀಗ ಪ್ರತ್ಯೇಕ ಪಾಲಿಕೆ ಆಗಿರುವುದರಿಂದ ಎರಡು ನಗರಗಳು ಅನುದಾನವೂ ಪ್ರತ್ಯೇಕವಾಗಿಯೇ ಬರುತ್ತದೆ. ಇದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ. ಅಧಿಕಾರ ವಿಕೇಂದ್ರೀಕರಣವಾಗಿ ಮೇಯರ್, ಉಪಮೇಯರ್, ಪಾಲಿಕೆ ಆಯುಕ್ತರು, ಎಂಜಿನಿಯರ್‌ಗಳು ಎಲ್ಲರೂ ಧಾರವಾಡದಲ್ಲೇ ಸಿಗುವುದರಿಂದ ಅಲ್ಲಿನ ಕೆಲಸಗಳಿಗೆ ವೇಗ ಸಿಗುತ್ತದೆ. ತಕ್ಷಣವೇ ಜನರ ಸಮಸ್ಯೆಗಳಿಗೆ ಸ್ಪಂದಿಸಬಹುದು. ಹೀಗಾಗಿ ಪ್ರತ್ಯೇಕವಾಗಿರುವುದರಿಂದ ಎರಡು ನಗರಗಳು ಸಮನಾಗಿ ಬೆಳೆಯುತ್ತದೆ. ಮುಂದೆ ಎರಡು ಬೃಹತ್ ಮಹಾನಗರ ಪಾಲಿಕೆಯಾಗಿ ಬೆಳೆಯುತ್ತವೆ ಎಂಬ ಅಭಿಪ್ರಾಯ ಕೆಲವರದು.ವೈಜ್ಞಾನಿಕವಾಗಿಲ್ಲ:
ಮಹಾನಗರ ಪ್ರತ್ಯೇಕ ಮಾಡಿರುವುದು ಉತ್ತಮವೇ. ಆದರೆ, ವಿಂಗಡನೆ ಸರಿಯಾಗಿ ಆಗಿಲ್ಲ. ಧಾರವಾಡಕ್ಕೆ ಬೇಲೂರು ಕೈಗಾರಿಕಾ ಪ್ರದೇಶ, ನರೇಂದ್ರ, ಮಲ್ಲಿಗವಾಡ, ಬೊಮ್ಮಿಗಟ್ಟಿ ನವನಗರ ಪ್ರದೇಶ ಸೇರಿಸಿ ಮಾಡಿದ್ದರೆ ಆರ್ಥಿಕವಾಗಿ ಸಬಲವಾಗುತ್ತಿತ್ತು. ಧಾರವಾಡಕ್ಕೆ 35-40 ವಾರ್ಡ್, ಹುಬ್ಬಳ್ಳಿಗೆ 45 ವಾರ್ಡ್‌ಗಳು ಬಂದಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು.ಪ್ರತ್ಯೇಕ ಪಾಲಿಕೆಯಾಗಿರುವುದರಿಂದ ಮೇಯರ್, ಉಪಮೇಯರ್, ಆಯುಕ್ತರ ಹುದ್ದೆಗಳ ಸೃಷ್ಟಿಯಾಗುವುದು ಬಿಟ್ಟರೆ ಹೆಚ್ಚು ಲಾಭವಾಗಲ್ಲ. ಹುಬ್ಬಳ್ಳಿಗೆ ಇರುವಷ್ಟು ಆರ್ಥಿಕ ಸಂಪನ್ಮೂಲಗಳು ಧಾರವಾಡದಲ್ಲಿ ಇಲ್ಲ. ಮುಂದೆ ಧಾರವಾಡ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. 10-20 ವರ್ಷಗಳ ನಂತರ ಮರಳಿ ಎರಡನ್ನೂ ಸೇರಿಸಿ ಎನ್ನುವ ಬೇಡಿಕೆ ಬಂದರೂ ಅಚ್ಚರಿಯಿಲ್ಲ. ಹೀಗಾಗಿ ಧಾರವಾಡ ಪಾಲಿಕೆಗೆ ಆರ್ಥಿಕ ಸಬಲತೆ ಆಗುವಂತೆ ವಾರ್ಡ್ ಹಾಗೂ ಈ ನಾಲ್ಕೂ ಪಂಚಾಯತಿ, ನವನಗರ ಭಾಗವನ್ನು ಧಾರವಾಡಕ್ಕೆ ಸೇರಿಸಬೇಕು ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಪಾಲಿಕೆಯಿಂದ ಧಾರವಾಡ ಪ್ರತ್ಯೇಕ ಆಗಿರುವುದರಿಂದ ಬಲುಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.ಮಹಾನಗರ ಪಾಲಿಕೆ ಪ್ರತ್ಯೇಕ ಆಗಿರುವುದರಿಂದ ಅಧಿಕಾರ ವಿಕೇಂದ್ರೀಕರಣವಾಗುತ್ತದೆ. ಎರಡು ಪಾಲಿಕೆಗಳಿಗೆ ಪ್ರತ್ಯೇಕವಾಗಿಯೇ ಅನುದಾನ ಬರುವುದರಿಂದ ಅಭಿವೃದ್ಧಿಗೂ ವೇಗ ದೊರೆಯಲಿದೆ. ಇದು ಒಂದು ರೀತಿಯಲ್ಲಿ ಉತ್ತಮ ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದ್ದಾರೆ.ಒಂದು ಮನೆಯಲ್ಲಿ ಅಣ್ಣ-ತಮ್ಮಂದಿರು ಬೇರೆಯಾದರೆ ಭಾವನಾತ್ಮಕವಾಗಿ ಬೇಸರ ಅನಿಸಬಹುದು. ಆದರೆ, ಆ ಎರಡು ಕುಟುಂಬಗಳು ಪ್ರತ್ಯೇಕವಾಗಿಯೇ ಅಭಿವೃದ್ಧಿಯಾಗುತ್ತವೆ. ಅದೇ ರೀತಿ ಇಲ್ಲೂ ಧಾರವಾಡ ಪ್ರತ್ಯೇಕವಾಗಿರುವುದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ತಿಳಿಸಿದ್ದಾರೆ.ಧಾರವಾಡ ಪ್ರತ್ಯೇಕವಾಗಿರುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ವೈಜ್ಞಾನಿಕವಾಗಿ ಮಾಡಬೇಕಿತ್ತು. ಕೆಲವೊಂದಿಷ್ಟು ಪಂಚಾಯತಿ ಹಾಗೂ ನವನಗರದ ಪ್ರದೇಶವನ್ನೂ ಧಾರವಾಡಕ್ಕೆ ಸೇರಿಸಿದರೆ ಆರ್ಥಿಕ ಸಬಲತೆಗೆ ಹೆಚ್ಚು ಅನುಕೂಲವಾಗುತ್ತಿತ್ತು. ಈಗಲಾದರೂ ಈ ಕೆಲಸ ಮಾಡಬೇಕು ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಹೇಳಿದ್ದಾರೆ.