ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿರುವ ಹಿನ್ನೆಲೆ ತುರ್ತಾಗಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಕಾಲುವೆಗೆ ನೀರು ಬಿಡುವ ಕುರಿತು ಚರ್ಚಿಸಬೇಕಿದೆ. ಆದರೆ, ಸಭೆ ನಡೆಸುವ ಕುರಿತು ತುಂಗಭದ್ರಾ ಕಾಡಾ ಕಚೇರಿಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ತುಂಗಭದ್ರಾ ಜಲಾಯಶಕ್ಕೆ ಪ್ರತಿ ವರ್ಷವೂ ಜುಲೈನಲ್ಲಿ ಒಳಹರಿವು ಹೆಚ್ಚಳವಾಗುತ್ತಿದ್ದರೆ, ಈ ಬಾರಿ ಜೂನ್‌ನಲ್ಲಿಯೇ ಹೆಚ್ಚಿದೆ. ಕ್ರಸ್ಟ್‌ಗೇಟ್‌ ಆತಂಕದ ನಡುವೆಯೂ ರೈತರು ತಿಂಗಳು ಮೊದಲೇ ನಾಟಿ ಪ್ರಾರಂಭಿಸಿದ್ದು, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ರೈತರ ಸಂಭ್ರಮ ಮನೆ ಮಾಡಿದೆ.

ಕಳೆದ ವರ್ಷ ಇದೇ ದಿನ (ಜೂ.18) ಜಲಾಶಯದಲ್ಲಿ 5.979 ಟಿಎಂಸಿ ನೀರು ಸಂಗ್ರಹವಾಗಿದ್ದರೆ ಈ ಬಾರಿ 30.487 ಟೆಎಂಸಿ ಸಂಗ್ರಹವಾಗಿದೆ. ಕಳೆದ ಹತ್ತು ವರ್ಷದಲ್ಲಿ ಜಲಾಶಯದಲ್ಲಿ ಈ ದಿನದ ಸರಾಸರಿ ಕೇವಲ 12.784 ಟಿಎಂಸಿ ಮಾತ್ರ. ಮಲೆನಾಡು ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ ಭರ್ಜರಿ ನೀರು ಬಂದಿದೆ. ಮುಂಗಾರು ಹಂಗಾಮಿಗೆ ಬಹುತೇಕ ಜುಲೈನಲ್ಲಿ ಜಲಾಶಯದಿಂದ ಕಾಲುವೆಗೆ ನೀರು ಬಿಡಲಾಗುತ್ತಿದೆ. ಕೆಲ ಸಂದರ್ಭದಲ್ಲಿ ಬೇಗ ಭರ್ತಿಯಾದಾಗ ಜೂನ್‌ನಲ್ಲಿ ನೀರು ಬಿಟ್ಟಿರುವ ಉದಾಹರಣೆ ಇದ್ದು ಈ ರೀತಿಯೂ ನೀರು ಬಿಡುವ ಸಾಧ್ಯತೆ ಇದೆ.

ಶೀಘ್ರ ಸಭೆ ನಡೆಸಿ:

ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿರುವ ಹಿನ್ನೆಲೆ ತುರ್ತಾಗಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಕಾಲುವೆಗೆ ನೀರು ಬಿಡುವ ಕುರಿತು ಚರ್ಚಿಸಬೇಕಿದೆ. ಆದರೆ, ಸಭೆ ನಡೆಸುವ ಕುರಿತು ತುಂಗಭದ್ರಾ ಕಾಡಾ ಕಚೇರಿಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದಕ್ಕೆ ತುಂಗಭದ್ರಾ ಬೋರ್ಡ್‌ ಹಾಗೂ ನೀರಾವರಿ ಸಲಹಾ ಸಮಿತಿಯ ಹೊಂದಾಣಿಕೆಯ ಕೊರತೆಯೇ ಕಾರಣವೆಂದು ಹೇಳಲಾಗುತ್ತಿದೆ.

ಕಳೆದ ಆಗಸ್ಟ್‌ನಲ್ಲಿ ಮುರಿದಿರುವ 19ನೇ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕವಾಗಿ ಸ್ಟಾಫ್‌ ಲಾಕ್‌ ಅಳವಡಿಸಲಾಗಿತ್ತು. ಇದೀಗ ಪೂರ್ಣ ಪ್ರಮಾಣದ ದುರಸ್ತಿಗೆ ಗುತ್ತಿಗೆ ನೀಡಲಾಗಿದೆಯಾದರೂ ಕ್ರಸ್ಟ್‌ಗೇಟ್‌ ನಿರ್ಮಾಣವೇ ಆಗಿಲ್ಲ. ಜುಲೈ ಮೊದಲ ವಾರದಲ್ಲಿ ಕ್ರಸ್ಟ್‌ಗೇಟ್‌ ಅಳವಡಿಸುವ ಸಿದ್ಧತೆ ನಡೆದಿದೆ. ಆದರೆ, ಜೂನ್‌ ತಿಂಗಳಲ್ಲಿಯೇ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಕ್ರಸ್ಟ್‌ಗೇಟ್ ಅಳವಡಿಸಲು ಸಮಸ್ಯೆಯಾಗಬಹುದು. ಹರಿದು ಬರುವ ನೀರನ್ನು ನದಿಗೆ ಬಿಡಬೇಕೋ ಅಥವಾ ಹಿಡಿದಿಟ್ಟುಕೊಳ್ಳಬೇಕೋ ಎಂಬ ಕುರಿತು ತಿರ್ಮಾನಿಸಬೇಕಿದೆ.

ಭರವಸೆ ಹಿನ್ನೆಲೆ ನಾಟಿ:

ಮುಂಗಾರು ಹಂಗಾಮಿಗೆ ರೈತರಿಗೆ ನೀರು ಕೊಡುತ್ತೇವೆ ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ಭರವಸೆ ನೀಡಿದ್ದರು. ಹೀಗಾಗಿಯೇ ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿ ಸೇರಿದಂತೆ ಜಲಾಶಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ರೈತರು ಭತ್ತದ ನಾಟಿ ಪ್ರಾರಂಭಿಸಿದ್ದಾರೆ. ಒಂದು ವೇಳೆ ಕಾಲುವೆಗೆ ನೀರು ಹರಿಯದೆ ಇದ್ದರೂ ಪಂಪ್‌ಸೆಟ್‌ ಮೂಲಕ ಬೆಳೆ ಬೆಳೆದರೆ ಆಯಿತು ಎಂದು ನಾಟಿ ಆರಂಭಿಸಿದ್ದಾರೆ.ನೀರಾವರಿ ಸಲಹಾ ಸಮಿತಿ ಸಭೆಯನ್ನು ತುರ್ತಾಗಿ ನಡೆಸಬೇಕು ಮತ್ತು ರೈತರಿಗೆ ಮುಂಗಾರು ಹಂಗಾಮಿಗೆ ನೀರು ಬಿಡುವ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು.

ಉಮೇಶ ಪಲ್ಲೇದ, ರೈತರು ಹಿಟ್ನಾಳ ಗ್ರಾಮ