ಕನ್ನಡಪ್ರಭ ವಾರ್ತೆ ಪಾವಗಡ

ಎರಡು ತಿಂಗಳ ಬಳಿಕ ತಾಲೂಕಿನ ಕೆಂಚಮ್ಮನಹಳ್ಳಿಯ ಬೃಹತ್‌ ಪಂಪ್‌ಹೌಸ್‌ಗೆ ತುಂಗಭದ್ರಾ ಯೋಜನೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಇದರಿಂದ ತಾಲೂಕಿನ ಜನತೆಯಲ್ಲಿ ಸಂತಸ ವ್ಯಕ್ತವಾಗಿದೆ.

ಮಳೆಯ ಅಭಾವದಿಂದ ವಿಜಯ ನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಡ್ಯಾಂನಲ್ಲಿ ನೀರು ಖಾಲಿಯಾಗಿ, ಪಾವಗಡಕ್ಕೆ ಸರಬರಾಜು ಆಗುತ್ತಿದ್ದ ತುಂಗಭದ್ರಾ ಯೋಜನೆ ನೀರು ಸಂಪೂರ್ಣ ಸ್ಥಗಿತವಾಗಿತ್ತು. ಪರಿಣಾಮ ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.

ಈ ಬಗ್ಗೆ ಸಮರ್ಪಕ ಕುಡಿಯುವ ನೀರು ಕಲ್ಪಿಸಿ ಎಂದು ರೈತ ಹಾಗೂ ಇತರೆ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಗಟ್ಟಿ ಧ್ವನಿ ಎತ್ತಿದ್ದರು. ಇದರ ಬೆನ್ನಲ್ಲೇ ಶಾಸಕ ಎಚ್.ವಿ.ವೆಂಕಟೇಶ್‌ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ತಾಲೂಕಿನ ಬೂದಿಬೆಟ್ಟ, ಕನ್ನಮೇಡಿ, ಟಿ.ಎನ್‌.ಪೇಟೆ ಹಾಗೂ ವೈ.ಎನ್‌.ಹೊಸಕೋಟೆ ಮತ್ತು ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಜಿಪಂ ವತಿಯಿಂದ 22ಕ್ಕೂ ಹೆಚ್ಚು ಕುಡಿಯುವ ನೀರಿನ ಕೊಳವೆಬಾವಿಗಳನ್ನು ಕೊರೆಸಿದ್ದರು. ಅಂತರ್‌ ಜಲ ಕುಸಿತದ ಪರಿಣಾಮ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಬರದೆ ಸಮಸ್ಯೆ ಎದುರಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕಳೆದ ವಾರದಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಡ್ಯಾಂಗೆ ನೀರು ತುಂಬಿದ್ದು, ಬುಧವಾರ ರಾತ್ರಿ ಡ್ಯಾಂನ ಪಂಪ್‌ ಪೌಸ್‌ ಮೋಟರ್ ರನ್ ಮಾಡಿದ ಕಾರಣ ಗುರುವಾರ ಬೆಳಗ್ಗೆ ತಾಲೂಕಿನ ಕೆಂಚಮ್ಮನಹಳ್ಳಿಯ ಪಂಪ್‌ ಹೌಸ್‌ ಗೆ ಯೋಜನೆಯ ನೀರು ಸರಬರಾಜು ಆಗಿದ್ದು, ಇಲ್ಲಿಗೆ ಸಮೀಪದ ಲಿಂಗದಹಳ್ಳಿ, ದೊಡ್ಡೇನಹಳ್ಳಿ, ಕೆ.ಟಿ.ಹಳ್ಳಿ, ಕಾರನಾಗನಹಟ್ಟಿ, ಬೆಳ್ಳಿಬಟ್ಟಲು ಹಾಗೂ ಇತರೆ ಅನೇಕ ಗ್ರಾಮಗಳ ತುಂಗಭದ್ರಾ ಯೋಜನೆಯ 150 ಹಾಗೂ 200 ಲಕ್ಷ ಲೀಟರ್‌ ಸಾಮರ್ಥ್ಯದ ಬೃಹತ್‌ ಒವರ್‌ ಹೆಡ್‌ ಟ್ಯಾಂಕ್‌ಗಳಿಗೆ ನೀರು ಸಂಗ್ರಹವಾಗುತ್ತಿದೆ. ಮತ್ತೆ ಯೋಜನೆಯ ನೀರು ಪೂರೈಕೆ ಆಗುತ್ತಿರುವುದಕ್ಕೆ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

------


ಮಳೆಯ ಅಭಾವದಿಂದ ಹೊಸಪೇಟೆ ಡ್ಯಾಂನಲ್ಲಿ ನೀರು ಖಾಲಿಯಾಗಿತ್ತು. ಪರಿಣಾಮ ತಾಲೂಕಿಗೆ ಪೂರೈಕೆ ಮಾಡಲಾಗುತ್ತಿದ್ದ ತುಂಗಭದ್ರಾ ಯೋಜನೆ ನೀರು ಸ್ಥಗಿತಗೊಂಡಿತ್ತು. ಇದರಿಂದ ಕಳೆದ ಎರಡು ತಿಂಗಳಿಂದಲೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ದೇವರ ದಯೆಯಿಂದ ಮಳೆಯ ಪ್ರಮಾಣ ಹೆಚ್ಚಾದ ಕಾರಣ ಡ್ಯಾಂನಲ್ಲಿ ನೀರು ಸಂಗ್ರಹವಾಗಿದ್ದು, ಪೈಪ್‌ ಲೈನ್‌ ಮೂಲಕ ನೀರು ಹರಿಬಿಡಲಾಗಿದೆ. ಇನ್ನೂ ಮೂರು ನಾಲ್ಕು ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ತುಂಗಭದ್ರಾ ಯೋಜನೆಯ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.

ಬಸವಲಿಂಗಪ್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಎಂಜಿನಿಯರ್‌