ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಆರ್.ಸುರೇಶ್ ಅವರನ್ನು ಬೇರಡೆ ವರ್ಗಾವಣೆ ಮಾಡಿ, ಆ ಸ್ಥಾನಕ್ಕೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜ್ ಅವರನ್ನು ಪ್ರಭಾರ ಉಪನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಆರ್.ಸುರೇಶ್ ಅವರನ್ನು ಬೇರಡೆ ವರ್ಗಾವಣೆ ಮಾಡಿ, ಆ ಸ್ಥಾನಕ್ಕೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜ್ ಅವರನ್ನು ಪ್ರಭಾರ ಉಪನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.ಈ ನಡುವೆ ಚೆಲುವರಾಜ್ ಅವರು ಪ್ರಭಾರ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲು ಕಚೇರಿಗೆ ತೆರಳಿದ ವೇಳೆ ಎಚ್.ಆರ್.ಸುರೇಶ್ ಅವರು ತಮ್ಮ ಕುರ್ಚಿಯನ್ನು ಬಿಟ್ಟು ಕೊಡದೇ ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದಾಗಿ ಉಪನಿರ್ದೇಶಕರ ಕಚೇರಿಯಲ್ಲಿ ಇಬ್ಬರು ಹಾಜರಾಗಿ ಕರ್ತವ್ಯ ನಿರ್ವಹಿಸಿದ ಘಟನೆ ನಡೆಯಿತು.
ನ.26 ರಂದು ಚೆಲುವರಾಜು ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪನಿರ್ದೇಶಕರನ್ನಾಗಿ ನೇಮಕ ಮಾಡಿದ್ದು ಹಾಲಿ ಡಿಡಿ ಎಚ್.ಆರ್.ಸುರೇಶ್ ಅವರನ್ನು ಇಲಾಖೆಯ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಖಾಲಿ ಇರುವ ಉಪನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯದ ಸರ್ಕಾರದ ಉಪಕಾರ್ಯದರ್ಶಿ ರಂಗನಾಥ ಆದೇಶ ಹೊರಡಿಸಿದ್ದಾರೆ.ವರ್ಗಾವಣೆಗೊಂಡರು ಸುರೇಶ್ ಅವರು ಚೆಲುವರಾಜು ಅವರಿಗೆ ಕುರ್ಚಿ ಬಿಟ್ಟು ಕೊಡದೇ ಸತಾಯಿಸುತ್ತಿದ್ದಾರೆ. ಅಲ್ಲದೇ ಕೆಎಟಿ ಮೊರೆ ಹೋಗಿದ್ದು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಕೆಎಟಿ ನಿರ್ದೇಶನ ನೀಡಿದೆ. ಗುರುವಾರವೂ ಸಹ ಉಪನಿರ್ದೇಶಕರ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಹಾಜರಾಗುವ ಮೂಲಕ ಕರ್ತವ್ಯ ನಿರ್ವಹಿಸಿದರು.
ಎಚ್.ಆರ್.ಸುರೇಶ್ ಮಾತನಾಡಿ, ನನಗೆ ವರ್ಗಾವಣೆಯಾಗಿದೆ. ಆದರೆ, ಇನ್ನೂ ಕೂಡ ಜಿಪಂ ಸಿಇಒ ಬಿಡುಗಡೆ ಆದೇಶ ನೀಡಿಲ್ಲ. ಈಗಾಗಲೇ ಪ್ರಭಾರ ಉಪನಿರ್ದೇಶಕರನ್ನಾಗಿ ಸರ್ಕಾರ ನನ್ನನ್ನು ನೇಮಕ ಮಾಡಿದ್ದು ಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಜಿಪಂ ಸಿಇಒ ಅವರಿಗೆ ಮನವಿ ಮಾಡಿದ್ದೇನೆ. ಅಲ್ಲಿಂದ ಇನ್ನೂ ಆದೇಶ ಬಂದಿಲ್ಲ. ವರ್ಗಾವಣೆಗೊಂಡಿರುವ ಸುರೇಶ್ ಅವರು ಚಾರ್ಜ್ ಕೊಡುತ್ತೇನೆ ಅಂತ ಹೇಳಿ ಇನ್ನೂ ಕೊಟ್ಟಿಲ್ಲ ಎಂದು ಚೆಲುವರಾಜು ಹೇಳಿದರು.ಎಚ್.ಆರ್.ಸುರೇಶ್ ಅವರ ಮೇಲೆ ದೂರುಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ತಾವೇ ಜಿಪಂ ಸಿಇಒ ಅವರಿಗೆ ಬಿಡುಗಡೆ ಮಾಡಿಕೊಡುವಂತೆ ಮನವಿ ಸಲ್ಲಿಸದೇ ಇಲ್ಲಿಯೇ ಉಳಿದಿರುವುದು ಸುರೇಶ್ ಅವರ ಮೇಲೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳು ಮೂಡಲು ಕಾರಣವಾಗಿದೆ.