ನಾಡಿನಲ್ಲಿಂದು ಮಾನವೀಯತೆ ಮೌಲ್ಯ ಕುಸಿಯುತ್ತಿದೆ. ಅನೇಕರು ಹೆತ್ತ ತಂದೆ- ತಾಯಂದಿರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ಮೌಲ್ಯವನ್ನು ಹಾಳು ಮಾಡುತ್ತಿದ್ದಾರೆ. ಮಕ್ಕಳು ಬಾಲ್ಯದಿಂದ ತಮ್ಮನ್ನು ಪೋಷಿಸಿದವರನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಠ ಮಾನ್ಯಗಳು ಹಮ್ಮಿಕೊಳ್ಳುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಪಾಲ್ಗೊಳ್ಳುವುದರಿಂದ ಸಮಾಜದಲ್ಲಿನ ಅಸಹಿಷ್ಣುತೆಯನ್ನು ಹೋಗಲಾಡಿಸುವ ಜೊತೆಗೆ ಜನರ ಮನದಲ್ಲಿ ವಿಶಾಲ ಮನೋಭಾವ, ಸಮಾನತೆಯ ಭಾವನೆ ಮೂಡಿ ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.‌ಸಂತೋಷ್‌ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದಲ್ಲಿ ಗುರುವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಜನರು ಏಕಾಂಗಿ ಜೀವನ ಶೈಲಿ ನಡೆಸುತ್ತಿದ್ದಾರೆ. ಶ್ರೀ ಮಠಗಳು ಹಮ್ಮಿಕೊಳ್ಳುತ್ತಿರುವ ಸತ್ಸಂಗ ಸಮಾರಂಭಗಳು ಜನರ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಜಗತ್ತಿನಾದ್ಯಂತ ಧಾರ್ಮಿಕ ಪರಂಪರೆ, ಐತಿಹಾಸಿಕ ಸಂಸ್ಕೃತಿ ಹಿನ್ನೆಲೆಗಳಿರುವುದು ಭಾರತ ಮತ್ತು ಚೀನಾ ದೇಶಗಳಲ್ಲಿ ಮಾತ್ರ. ಇಂತಹ ಪ್ರಾಚೀನ ಪರಂಪರೆಯ ಭಾರತ ದೇಶದಲ್ಲಿ ಇಂದು ಯುವ ಸಮೂಹ ಯಾಂತ್ರಿಕ ಜೀವನ ಶೈಲಿಯನ್ನು ರೂಢಿಸಿಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

ಇಂದಿನ ಕಾಲಘಟ್ಟದಲ್ಲಿ ಭಾವನಾತ್ಮಕ ಮೌಲ್ಯಗಳು, ಪರಂಪರೆ ಉಳಿಸುವ ನಿಟ್ಟಿನಲ್ಲಿ ಧಾರ್ಮಿಕ ಸತ್ಸಂಗ ಕಾರ್ಯಗಳನ್ನು ನಡೆಸುವ ಮೂಲಕ ಹಲವು ಮಠಗಳು ಸಮಾಜಮುಖಿ ಕೆಲಸ ಮಾಡುತ್ತಿವೆ. ಸುತ್ತೂರು ಶ್ರೀಮಠವು ಎಲ್ಲಾ ಧರ್ಮಗಳನ್ನು ಒಂದೂಗೂಡಿಸಿ‌ ಭಾವೈಕ್ಯತೆಯನ್ನು ಸಾರುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಧರ್ಮ, ಸಮಾಜಕ್ಕೆ ಸೇರಿದ ಸಮೂಹ ಶ್ರೀಮಠವನ್ನು ಗೌರವಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧಾರ್ಮಿಕ ಕಾರ್ಯಕ್ರಮಗಳು ಸಮಾಜಕ್ಕೆ ಅವಶ್ಯಕತೆ ಇದೆ. ನಮ್ಮ ಧರ್ಮವೇ ಶ್ರೇಷ್ಠ, ನಿಮ್ಮ ಧರ್ಮ ಕನಿಷ್ಠ ಎನ್ನುವುದನ್ನು ಬಿಡಬೇಕು. ದೇವರು ಮತ್ತು ಗ್ರಂಥಗಳ ವಿಚಾರದಲ್ಲಿ ಬೇಧ ಸಲ್ಲದು. ನಾಡಿನಲ್ಲಿ ಸತ್ಯದ ಕಡೆ ಕೊಂಡೊಯ್ಯುವ ಯಾವುದೇ ಧರ್ಮವಾದರೂ ಅದನ್ನು ನಾವು ಗೌರವಿಸಬೇಕು. ಸಮಾನತೆಯ ದೃಷ್ಟಿಕೋನದಲ್ಲಿ ಎಲ್ಲರೂ ಸಾಗೋಣ ಎಂದು ಕರೆ ನೀಡಿದರು.

ಉಡುಪಿ ಜಮಾತ್‌ ಎ ಇಸ್ಲಾಮಿ ಹಿಂದ್‌ ಕಾರ್ಯದರ್ಶಿ ಅಕ್ಬರ್‌ ಅಲಿ ಸಾಮಾಜಿಕ ಭಾವೈಕ್ಯತೆ ಎಂಬ ವಿಷಯವಾಗಿ ಮಾತನಾಡಿ, ತನ್ನ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಎಲ್ಲಾ ಜಾತಿ, ಧರ್ಮಗಳ ಜೊತೆಗೂಡಿ ಸಾಮರಸ್ಯದಿಂದ ನಾಡಿನಲ್ಲಿ ಬಾಳುವುದೇ ಭಾವೈಕ್ಯತೆಯ ಸಂಕೇತವಾಗಿದೆ ಎಂದರು.

ನಾಡಿನಲ್ಲಿಂದು ಮಾನವೀಯತೆ ಮೌಲ್ಯ ಕುಸಿಯುತ್ತಿದೆ. ಅನೇಕರು ಹೆತ್ತ ತಂದೆ- ತಾಯಂದಿರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ಮೌಲ್ಯವನ್ನು ಹಾಳು ಮಾಡುತ್ತಿದ್ದಾರೆ. ಮಕ್ಕಳು ಬಾಲ್ಯದಿಂದ ತಮ್ಮನ್ನು ಪೋಷಿಸಿದವರನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.

ಚಿತ್ರನಟ ಶಿವರಾಜ್ ಕುಮಾರ್ , ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಮುರುಗೇಶ್‌ ನಿರಾಣಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಕೆ ಆರ್‌ ಐ ಡಿಎಲ್‌ ಮಾಜಿ ಅಧ್ಯಕ್ಷ ರುದ್ರೇಶ್‌, ತೋಂಟದಾರ್ಯ, ಉದ್ಯಮಿಗಳಾದ ಅಮರ್‌ ನಾಥ್‌ ಗೌಡ, ನಿಶಾಂತ್‌, ಉಮಾಪತಿ, ಮಾಜಿ ಶಾಸಕ ಡಾ. ಕೆ.ಅನ್ನದಾನಿ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ಮಾರೇಹಳ್ಳಿ ಆದರ್ಶ ಶಾಲೆ, ಭೂವಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ರೂಪಕ ನಡೆಸಿಕೊಟ್ಟರು.