ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಕಳೆದ ಮೂರ್ನಾಲ್ಕು ತಿಂಗಳಿನಿಂದ ಕುರ್ಚಿ ಕದನ ನಡೆಯುತ್ತ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಕಳೆದ ಮೂರ್ನಾಲ್ಕು ತಿಂಗಳಿನಿಂದ ಕುರ್ಚಿ ಕದನ ನಡೆಯುತ್ತ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾರರ ನೋಂದಣಿ, ಪಕ್ಷ ಸಂಘಟನೆ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಹಿರಿಯೂರಿನಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿ ನೆಲೆಯೂರಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಯ ಸಾಧಿಸಲಿದ್ದಾರೆ. ದೇಶ ಗಟ್ಟಿಯಾಗಿದ್ದರೆ ಮಾತ್ರ ನಾವು ನೀವೆಲ್ಲಾ ಗಟ್ಟಿಯಾಗಿರಲು ಸಾಧ್ಯ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಳಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಖ್ಯವಾಗಿ ದೇಶದ ಅಭಿವೃದ್ಧಿಗೆ ರಾಜನೀತಿಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.

ದೇಶ ಈಗ ಪ್ರಬಲ ನಾಯಕರ ಕೈಯಲ್ಲಿದೆ. ಇಂದಿನ ಯುವ ಜನತೆ ಸೇರಿದಂತೆ ಎಲ್ಲರೂ ದೇಶಕ್ಕಾಗಿ ನನ್ನ ಸೇವೆ ಏನು ಎಂದು ಪ್ರಶ್ನಿಸಿಕೊಳ್ಳಬೇಕಿದೆ. ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಒಂದು ಗಂಟೆಯನ್ನಾದರೂ ದೇಶಕ್ಕಾಗಿ ವ್ಯಯಿಸುವ ಸಂಕಲ್ಪ ಮಾಡಬೇಕಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಮಾತನಾಡಿ, ಸದೃಢ ದೇಶ ನಿರ್ಮಾಣವಾಗಲು ಬಲಿಷ್ಠ ನಾಯಕನ ಕೈಲಿ ಅಧಿಕಾರ ಇರಬೇಕು. ನಾವೀಗ ಅಂತಹ ಅಂತಹ ಬಲಿಷ್ಠ ನಾಯಕನ ಆಡಳಿತದ ನೆರಳಲ್ಲಿ ಇದ್ದೇವೆ. ಸುರಕ್ಷತೆಯ ಭಾವ ಎಲ್ಲರಲ್ಲೂ ನೆಲೆಸಿದೆ. ಇಡೀ ಪ್ರಪಂಚದಲ್ಲಿಯೇ ಬಿಜೆಪಿ ಅತೀ ದೊಡ್ಡ ಪಕ್ಷವಾಗಿದೆ. ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿಯಲ್ಲಿ ಹಿರಿಯೂರು ಮೊದಲ ಸ್ಥಾನದಲ್ಲಿದೆ. ಬರುವ ದಿನಗಳಲ್ಲಿ 33 ಗ್ರಾಮ ಪಂಚಾಯ್ತಿಗೂ ಒಬ್ಬೊಬ್ಬರನ್ನು ನೇಮಿಸಿ ಮತದಾರರ ಮಾಹಿತಿ ಪಡೆಯುವ ಜತೆಗೆ ಅವರ ವಿಶ್ವಾಸ ಗಳಿಸುವ ಕೆಲಸ ಮಾಡಲಾಗುವುದು ಎಂದರು.

ಮಾಜಿ ಮಂಡಲ ಅಧ್ಯಕ್ಷ ವಿಶ್ವನಾಥ್, ದ್ಯಾಮಣ್ಣ, ಸೋಮಣ್ಣ, ಹಿರಿಯ ಮುಖಂಡರಾದ ರಾಘವೇಂದ್ರ, ಕೇಶವ ಮೂರ್ತಿ,ಜೆಬಿ ರಾಜು, ಬಸವರಾಜ್ ನಾಯಕ, ವೆಂಕಟೇಶ್, ಮಂಜುಳ, ಸಿದ್ದಮ್ಮ, ಪದಾಧಿಕಾರಿಗಳಾದ ನಿತಿನ್ ಗೌಡ,ಯೋಗೇಶ್, ಮುರಳೀಧರ, ಹೆಗ್ಗೆರೆ ಮಂಜುನಾಥ್, ಹನುಮಂತ್, ಪ್ರಜ್ವಲ್, ರಂಗಸ್ವಾಮಿ, ಅಸ್ಗರ್ ಅಹಮದ್, ವೇದಮೂರ್ತಿ, ಗೋವಿಂದಪ್ಪ ಯಶೋಧರ್,ವಾಸುದೇವ, ಪಾರ್ಥ ಇತರರುರು ಹಾಜರಿದ್ದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಶಿಕ್ಷಕರು ಸಂಕಷ್ಟಕ್ಕೆ

ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಶಿಕ್ಷಕರಿಗೆ ಮೋಸ ಮಾಡಿ ಹಣ ಹಂಚಿ ಜಾತಿ ಹೆಸರನ್ನು ಬಳಸಿಕೊಂಡು ಗೆದ್ದ ಎಂ ಎಲ್ ಸಿ ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಇದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಿಕ್ಷಕರು, ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಳಕ್ಕೂ ಅಧಿಕಾರಿಗಳ ಕಾಲಿಗೆ ಬೀಳುವ ಪರಿಸ್ಥಿತಿ ಇದೆ. ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆಗಳೇ ಹೆಚ್ಚಾಗಿವೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಕರಿಗೆ ಪದವೀಧರರಿಗೆ ಕೊಟ್ಟ ಆಶ್ವಾಸನೆ ಈಡೇರಿಸಿಲ್ಲ ಎಂದು ದೂರಿದರು.